ಬೆಂಗಳೂರು / ಲಂಡನ್: ಬುಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ-2013ರ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಸ್ಪರ್ಧೆಯಲ್ಲಿರುವ ಲೇಖಕರ ಅಂತಿಮ ಪಟ್ಟಿಯಲ್ಲಿ ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿಯವರ ಹೆಸರು ಸೇರುವುದರೊಂದಿಗೆ ಕನ್ನಡವೂ ಜಾಗತಿಕ ಮಟ್ಟದ ಸಾಹಿತ್ಯ ಪ್ರಶಸ್ತಿಯ ಸ್ಪರ್ಧೆಯಲ್ಲಿದೆ.
ಇಂದು (22 ಮೇ) ಲಂಡನ್ ವಿಕ್ಟೋರಿಯಾ ಆ್ಯಂಡ್ ಆಲ್ಬರ್ಟ್ ಮ್ಯೂಸಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಕ್ರಿಸ್ಟೋಪರ್ ರಿಕ್ಸ್ ಪ್ರಶಸ್ತಿ ವಿಜೇತರನ್ನು ಘೋಷಿಸುತ್ತಾರೆ. ಅನಂತಮೂರ್ತಿಯವರೂ ಸೇರಿದಂತೆ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿರುವ ಎಲ್ಲ ಲೇಖಕರೂ ಲಂಡನ್ ತಲುಪಿದ್ದಾರೆ.
ಮಂಗಳವಾರ (ಮೇ 20) ಆರಂಭಗೊಂಡ ಲಂಡನ್ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿರುವ ಲೇಖಕರು ತಮ್ಮ ಕೃತಿಗಳ ಆಯ್ದ ಭಾಗಗಳನ್ನು ವಾಚಿಸಿದರು. ಯು.ಆರ್.ಅನಂತಮೂರ್ತಿ ತಮ್ಮ ಪ್ರಸಿದ್ಧ ಕಾದಂಬರಿ `ಸಂಸ್ಕಾರ'ದ ಆಯ್ದ ಭಾಗದ ಮೂಲ ಕನ್ನಡ ಮತ್ತು ಇಂಗ್ಲಿಷ್ ಅನುವಾದಗಳನ್ನು ಓದಿದರು.
ಈ ವರ್ಷ ಜನವರಿಯಲ್ಲಿ ಪ್ರಶಸ್ತಿಯ ಅಂತಿಮ ಸುತ್ತಿನ ಸ್ಪರ್ಧೆಗೆ ತಲುಪಿರುವ ಲೇಖಕರ ಪಟ್ಟಿಯನ್ನು ಜೈಪುರ ಸಾಹಿತ್ಯೋತ್ಸವದಲ್ಲಿ ಪ್ರಕಟಿಸಲಾಗಿತ್ತು.
ಅಂತಿಮ ಪಟ್ಟಿ ಈ ಕೆಳಗಿನಂತಿದೆ
ಕನ್ನಡದ ಯು.ಆರ್.ಅನಂತಮೂರ್ತಿ (ಭಾರತ), ಉರ್ದು ಲೇಖಕ ಇಂತಿಝಾರ್ ಹುಸೇನ್ (ಪಾಕಿಸ್ತಾನ), ಹಿಬ್ರೂ ಲೇಖಕ ಅರೋನ್ ಆಪೆಲ್‌ಫೆಲ್ಡ್ (ಇಸ್ರೇಲ್), ಇಂಗ್ಲಿಷ್ ಸಾಹಿತಿಗಳಾದ ಲಿಡಿಯಾ ಡೇವಿಸ್ (ಅಮೆರಿಕ), ಜೋಸಿಪ್ ನವಕೋವಿಚ್ (ಕ್ರೊವೇಷ್ಯಾ-ಅಮೆರಿಕ), ಮೆರಿಲ್ ರಾಬಿನ್ಸನ್ (ಅಮೆರಿಕ), ಚೀನೀ ಸಾಹಿತಿ ಯಾನ್ ಲಿಯಾಂಕೆ (ಚೀನಾ), ಫ್ರೆಂಚ್ ಕಾದಂಬರಿಕಾರ್ತಿ ಮೇರಿ ನ್ದಿಯಾಯೆ, ರಷ್ಯನ್ ಲೇಖಕ ವ್ಲಾದಿಮಿರ್ ಸೊರೋಕಿನ್ (ರಷ್ಯಾ), ಸ್ವೀಡಿಷ್ ಬರಹಗಾರ ಪೀಟರ್ ಸ್ಟಾಮ್ (ಸ್ವಿಟ್ಜರ್ಲೆಂಡ್).
ಈ ಪ್ರಶಸ್ತಿ 60,000 ಪೌಂಡ್‌ಗಳ ( ರೂ 50,40,000) ನಗದು ಬಹುಮಾನ ಹೊಂದಿದೆ. ಇದಲ್ಲದೆ ವಿಜೇತ ಲೇಖಕರ ಆಯ್ಕೆಯ ಅನುವಾದಕರಿಗೆ 15,000 ಪೌಂಡ್‌ಗಳ (ರೂ 12,60,000) ಬಹುಮಾನವಿರುತ್ತದೆ.
ಸ್ನೇಹಿತರ ಸವಾಲ್: ಪಾಕಿಸ್ತಾನೀ ಉರ್ದು ಲೇಖಕ ಇಂಜಿಝಾನ್ ಹುಸೇನ್ ಮತ್ತು ಯು.ಆರ್. ಅನಂತಮೂರ್ತಿಯವರದ್ದು ಗಡಿ ಮೀರಿದ ಗೆಳೆತನ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಪಾಕಿಸ್ತಾನಿ ಉರ್ದು ಕಥೆಗಳ ಸಂಕಲನವೊಂದನ್ನು ಇಂತಿಝಾರ್ ಹುಸೇನ್ ಸಂಪಾದಿಸಿದ್ದಾರೆ. ಅನಂತಮೂರ್ತಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಈ ಸಂಕಲನ ಹೊರಬಂದಿತ್ತು. ಈ ಕೃತಿ ಪಾಕಿಸ್ತಾನದಲ್ಲಿಯೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪಠ್ಯವಾದದ್ದು ವಿಶೇಷ. ಈ ಇಬ್ಬರೂ ಲೇಖಕರು ತಮ್ಮ ಗಡಿ ಮೀರಿದ ಗೆಳೆತನದ ಬಗ್ಗೆ ಹಲವೆಡೆ ಪ್ರಸ್ತಾಪಿಸಿದ್ದಾರೆ. ಈಗ ಇವರಿಬ್ಬರೂ ಬುಕರ್ ಪ್ರಶಸ್ತಿಯ ಸ್ಪರ್ಧಾ ಕಣದಲ್ಲಿದ್ದಾರೆ.
ಬುಕರ್ ಇಂಟರ್ ನ್ಯಾಷನಲ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿರುವ ಲೇಖಕರೊಂದಿಗೆ ಲಂಡನ್‌ನ ಗಾರ್ಡಿಯನ್ ನಡೆಸಿದ ಸಂದರ್ಶನದಲ್ಲಿ ಅನಂತಮೂರ್ತಿ ಅಂತಿಮ ಸುತ್ತಿಗೆ ಬಂದಿರುವುದರ ಕುರಿತಂತೆ `ಇದು ಕನ್ನಡಕ್ಕೆ ಸಿಕ್ಕ ಮಾನ್ಯತೆ' ಎಂದಿದ್ದರೆ ಹೆಚ್ಚು ಕಡಿಮೆ ಇದೇ ಧ್ವನಿಯಲ್ಲಿ ಇಂತಿಝಾರ್ ಹುಸೇನ್ `ಉರ್ದುವಿಗೆ ಸಿಕ್ಕ ಮಾನ್ಯತೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.