ADVERTISEMENT

ಕನ್ನಡದ ಭವಿಷ್ಯ: ಭೈರಪ್ಪ ಆತಂಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 20:03 IST
Last Updated 1 ಫೆಬ್ರುವರಿ 2015, 20:03 IST
ಕನ್ನಡದ ಭವಿಷ್ಯ: ಭೈರಪ್ಪ ಆತಂಕ
ಕನ್ನಡದ ಭವಿಷ್ಯ: ಭೈರಪ್ಪ ಆತಂಕ   

ಶ್ರವಣಬೆಳಗೊಳ: ‘ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ­ದಂತೆ ಸಂವಿಧಾನ ತಿದ್ದುಪಡಿ ಆಗದಿದ್ದರೆ, ಮುಂದಿನ 25 ವರ್ಷಗಳಲ್ಲಿ ಕನ್ನಡ ಭಾಷೆಯಲ್ಲಿ ಒಂದೇ ಒಂದು ಪುಸ್ತಕವೂ ರಚನೆಯಾಗುವುದಿಲ್ಲ. ಕನ್ನಡ ಭಾಷೆ­ಯಲ್ಲಿ ಬರೆಯುವ ಲೇಖಕನಾಗಲಿ, ಓದುಗನಾಗಲಿ ಇರುವುದಿಲ್ಲ’ ಎಂದು ಖ್ಯಾತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಆತಂಕ ವ್ಯಕ್ತಪಡಿಸಿದರು.

ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂದು ನಡೆಯುತ್ತಿರುವ ಸಮ್ಮೇಳನಗಳಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಿದ್ದಾರೆ. ನೂರಾರು ಪುಸ್ತಕ ಮಳಿಗೆಗಳಿವೆ. ಸಾಹಿತಿಗಳು, ಲೇಖಕರು ಭಾಗವಹಿಸುತ್ತಿದ್ದಾರೆ. ಆದರೆ, ಭಾಷಾ ಮಾಧ್ಯಮದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದಾಗಿ ಮುಂದಿನ 25 ವರ್ಷಗಳಲ್ಲಿ ಇವೆಲ್ಲವೂ ಇಲ್ಲವಾಗುತ್ತವೆ ಎಂದು ಎಚ್ಚರಿಸಿದರು.

‘ನನಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅಂದಿನ ಮುಖ್ಯ­ಮಂತ್ರಿ  ಡಿ.ವಿ. ಸದಾನಂದಗೌಡ ಅವರು ಸರ್ಕಾರದಿಂದ ಐದು ಲಕ್ಷ ರೂಪಾಯಿ ನೀಡಿದ್ದರು. ಅದನ್ನು ಸರ್ಕಾರಕ್ಕೇ ಕೊಟ್ಟು, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಂತೆ ತಿಳಿಸಿದ್ದೆ. ಸದಾನಂದಗೌಡ ಅವರು ಒಪ್ಪಿ ಮಾರನೆಯ ದಿನವೇ ಈ ಬಗ್ಗೆ ಶಿಕ್ಷಣ ಸಚಿವ ಕಾಗೇರಿ ಅವರನ್ನು ಕಳುಹಿಸಿ ಚರ್ಚಿಸಿದ್ದರು. ಈ ರೂ ಐದು ಲಕ್ಷದ ಜೊತೆಗೆ ಸರ್ಕಾರ ಮೂರು ಕೋಟಿ ರೂಪಾಯಿ ಸೇರಿಸಿ, 10 ಸಾವಿರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ­ವಾಗಿ ನೀಡುವಂತೆ ಸಲಹೆ ನೀಡಿದ್ದೆ. ಅವರು ಒಪ್ಪಿಯೂ ಹೋಗಿದ್ದರು. ನಂತರ ಸರ್ಕಾರ ಬಿದ್ದು ಹೋಯಿತು. ನಾನು ಕೊಟ್ಟ ಹಣ ಏನಾಯಿತು ಎಂಬುದು ಈವರೆಗೆ ತಿಳಿದುಬಂದಿಲ್ಲ ಎಂದು ಭೈರಪ್ಪ ಹೇಳಿದರು.

‘ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರಿ ಉದ್ಯೋಗ ಎಂಬ ಆದೇಶವನ್ನು ಸರ್ಕಾರ ಹೊರಡಿಸಬೇಕು. ‘ಡಿ’ ದರ್ಜೆ ನೌಕರನಿಂದ ಐಎಎಸ್‌ ಅಧಿಕಾರಿಯವ­ರೆಗೆ ಎಲ್ಲರಿಗೂ ಕನ್ನಡ ಕಡ್ಡಾಯ ಮಾಡಬೇಕು. ಇದಕ್ಕಾಗಿ ಕಠಿಣ ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು.

ವಿಶ್ವೇಶ್ವರಯ್ಯ ಹೆಸರು ಕೈಬಿಟ್ಟಿದ್ದು ಸರಿಯಲ್ಲ
ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಅಥವಾ ಬೇರೆಲ್ಲಿಯೂ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಹೆಸರಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದೇ ವಿಶ್ವೇಶ್ವರಯ್ಯನವರು.  ಮಹಾರಾಜರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಹೆಚ್ಚಿನ ಅನುದಾನ ಬರುತ್ತದೆ ಎಂಬ ಕಾರಣಕ್ಕೆ ಒಡೆಯರ್‌ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದನ್ನು ಕಸಾಪ ಮರೆತಿದೆ ಎಂದು ಭೈರಪ್ಪ ಹೇಳಿದರು.

ಕರ್ನಾಟಕದ ವಿವಿಧ ಹುದ್ದೆಗಳಲ್ಲಿ ಹೆಚ್ಚುತ್ತಿದ್ದ ತಮಿಳರ ಪ್ರಾಬಲ್ಯ ಕಡಿಮೆ ಮಾಡಲು ವಿಶ್ವೇಶ್ವರಯ್ಯ ಅವರು ಮೈಸೂರು ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಿದ್ದರು. ವಿಶ್ವೇಶ್ವರಯ್ಯ ಅವರು ಹಿಂದುಳಿದ ವರ್ಗದ ಜನರ ಮತ್ತು ಮೀಸಲಾತಿಯ ವಿರೋಧಿ ಆಗಿದ್ದರು ಎಂಬ ತಪ್ಪು ಕಲ್ಪನೆ ಇದೆ. ಅವರು ಎಂದಿಗೂ ಈ ವರ್ಗದ ಜನರ ವಿರೋಧಿಯಾಗಿರಲಿಲ್ಲ ಎಂದು ಭೈರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT