ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ಶ್ರವಣಬೆಳಗೊಳ): ‘ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಲು ಮತ್ತು ಪ್ರಾದೇಶಿಕ ಭಾಷೆಗಳ ಸಾರ್ವಭೌಮತೆ ಎತ್ತಿಹಿಡಿಯಲು ಪೂರಕವಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು’.
ಇದು ಮಂಗಳವಾರ ಇಲ್ಲಿ ಮುಕ್ತಾಯಗೊಂಡ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಒಕ್ಕೊರಲಿನ ಏಕೈಕ ನಿರ್ಣಯ. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ಈ ನಿರ್ಣಯ ಮಂಡಿಸಿದರು.
‘ಕರ್ನಾಟಕದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಲು ಸರ್ಕಾರ ಪ್ರಬಲ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಗ್ಗೂಡಿಸಿಕೊಂಡು, ಪ್ರಾದೇಶಿಕ ಭಾಷೆಗಳ ಸಾರ್ವಭೌಮತೆ ಎತ್ತಿಹಿಡಿಯಲು ಭಾರತದ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿಕೊಳ್ಳಬೇಕು’ ಎಂದು ನಿರ್ಣಯ ಹೇಳಿದೆ.
ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ನಿರ್ಣಯವನ್ನು ಅನುಮೋದಿಸಿದರು. ಪ್ರೇಕ್ಷಕರೂ ಸಹ ಭಾರಿ ಕರತಾಡನದ ಮೂಲಕ ಸಮ್ಮತಿ ಸೂಚಿಸಿದರು.
ಜನಾಂದೋಲನ: ನಿರ್ಣಯ ಅಂಗೀಕಾರದ ಬಳಿಕ ಮಾತನಾಡಿದ ಹಾಲಂಬಿ, ‘ಮುಂದಿನ ಸಾಹಿತ್ಯ ಸಮ್ಮೇಳನದೊಳಗೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ಕಾನೂನು ಜಾರಿಯಾಗದಿದ್ದರೆ, ಕನ್ನಡಿಗರೊಂದಿಗೆ ಸಾಹಿತ್ಯ ಪರಿಷತ್ತು ತೀವ್ರ ಸ್ವರೂಪದ ಜನಾಂದೋಲನ ನಡೆಸಲಿದೆ’ ಎಂದು ಎಚ್ಚರಿಸಿದರು.
‘ನಾನು ಭಾವೋದ್ವೇಗದಿಂದ ಈ ಮಾತನ್ನು ಆಡುತ್ತಿಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಜಾರಿಗೊಳಿಸದಿದ್ದರೆ, ಮುಂದಿನ 25 ವರ್ಷಗಳಲ್ಲಿ ನಮ್ಮ ಮಕ್ಕಳ ಬಾಯಲ್ಲಿ ಕನ್ನಡ ಇರುವುದಿಲ್ಲ. ಜಗತ್ತಿನ ಪ್ರಮುಖ 30 ಭಾಷೆಗಳಲ್ಲಿ ಒಂದಾಗಿರುವ ಕನ್ನಡವನ್ನು ಮುಂದಿನ ಪೀಳಿಗೆಗೆ ಮುಟ್ಟಿಸದೇ ಹೋದರೆ ನಮ್ಮನ್ನೇ ನಾವು ಮೋಸ ಮಾಡಿಕೊಂಡಂತಾಗುತ್ತದೆ. ಸಂವಿಧಾನ ತಿದ್ದುಪಡಿಯಾಗದಿದ್ದರೆ, ಸಾಹಿತ್ಯ ಸಮ್ಮೇಳನಗಳು ಕೇವಲ ಜಾತ್ರೆ ರೂಪ ಹೊಂದಿ ಅಷ್ಟಕ್ಕೆ ಮುಗಿದು ಹೋಗುತ್ತವೆ’ ಎಂದು ಎಚ್ಚರಿಸಿದರು.
ಬಹಿರಂಗ ಅಧಿವೇಶನದಲ್ಲಿ ಏಕೈಕ ನಿರ್ಣಯವನ್ನು ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.