ADVERTISEMENT

ಕನ್ನಡ ಶಾಲೆಗಳ ಸ್ಥಿತಿಗತಿ ಅರಿಯಲು ಸಮೀಕ್ಷೆ

ಎಸ್‌.ಜಿ. ಸಿದ್ದರಾಮಯ್ಯ ಅಧ್ಯಕ್ಷತೆಯ ಶಾಲಾ ಸಬಲೀಕರಣ ಸಮಿತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 19:30 IST
Last Updated 8 ಮಾರ್ಚ್ 2017, 19:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಕನ್ನಡ ಶಾಲೆಗಳ ಸ್ಥಿತಿಗತಿ ಅಧ್ಯಯನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ನೇತೃತ್ವದ  ಶಾಲಾ ಸಬಲೀಕರಣ ಸಮಿತಿ ಸಮೀಕ್ಷೆ ಆರಂಭಿಸಿದೆ.

ರಾಜ್ಯದಲ್ಲಿ 11 ವರ್ಷಗಳಲ್ಲಿ 10,784 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಈ ಶಾಲೆಗಳನ್ನು ಮುಚ್ಚಲು ಕಾರಣ ಏನು, ಶಾಲೆ ಮುಚ್ಚಿದ ನಂತರ  ಎಷ್ಟು ಮಕ್ಕಳ ವಿದ್ಯಾಭ್ಯಾಸ ಮೊಟಕುಗೊಂಡಿದೆ, ಸುತ್ತಮುತ್ತ ಎಷ್ಟು ಆಂಗ್ಲ ಮಾಧ್ಯಮ ಶಾಲೆಗಳಿವೆ, ಅಲ್ಲಿನ ಶಿಕ್ಷಕರ ಗುಣಮಟ್ಟ ಹೇಗಿದೆ ಮುಂತಾದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡ್ಯ ನಗರ, ಮೈಸೂರು ಜಿಲ್ಲೆಯ ಕೆ.ಆರ್‌. ನಗರ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಸಾಮಾಜಿಕ ಕಾರ್ಯಕರ್ತರು ಅಂಗನವಾಡಿಗಳ ಬದಲಿಗೆ ಮಕ್ಕಳ ಮನೆಗಳನ್ನು ನಡೆಸುತ್ತಿದ್ದಾರೆ. ಕನ್ನಡ ಶಾಲೆ ಉಳಿಸುವ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

3 ತಿಂಗಳಲ್ಲಿ ಸಮೀಕ್ಷೆ ಮುಗಿಸಿ ಕನ್ನಡ ಶಾಲೆಗಳ  ಸಬಲೀಕರಣಕ್ಕೆ ಮಾರ್ಗೋಪಾಯಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ  ಸಲ್ಲಿಸಲಾಗುವುದು ಎಂದರು.

ಮೈಸೂರಿನಲ್ಲಿರುವ ‘ಅರಿವು’ ಎಂಬ ಕನ್ನಡ ಶಾಲೆ ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ.8ರಿಂದ 10 ಮಕ್ಕಳಿದ್ದ ಶಾಲೆಯಲ್ಲಿ ಈಗ 160 ಮಕ್ಕಳು ಕಲಿಯುತ್ತಿದ್ದಾರೆ.

ಶಿಕ್ಷಕರು ಮನಸು ಮಾಡಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟ ಹೆಚ್ಚಿಸಿದರೆ  ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿ ಖಾಸಗಿ ಶಾಲೆಗಳಿಗೆ ಸರ್ಕಾರ ವರ್ಷಕ್ಕೆ ₹450 ಕೋಟಿ  ಕೊಡುವುದು ತಪ್ಪಲಿದೆ ಎಂದರು.

30 ಪದ್ಯ, 30 ಕಥೆ ಕಲಿಸಲು ಹೊಸ ಪ್ರಯೋಗ
ಪಠ್ಯದ ಹೊರತಾಗಿ ಕನ್ನಡದ ಕಥೆ ಮತ್ತು ಪದ್ಯಗಳನ್ನು ಮಕ್ಕಳಿಗೆ ಕಲಿಸಲು  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರತಿ ಶಾಲೆಗೆ 30 ಪದ್ಯ ಮತ್ತು 30 ಕಥೆಗಳನ್ನು ಒಳಗೊಂಡ  ‘ಲ್ಯಾಮಿನೇಟೆಡ್ ಕಾರ್ಡ್‌’ ವಿತರಿಸಲು ಮುಂದಾಗಿದೆ.

ಪ್ರತಿ ಕಾರ್ಡ್‌ನಲ್ಲಿ ಒಂದೊಂದು ಪದ್ಯ, ಅದಕ್ಕೆ ಸಂಬಂಧಿಸಿದ ಚಿತ್ರ, ಕವಿಯ ಪರಿಚಯ ಮತ್ತು ಅಭ್ಯಾಸ ಸೂಚಿಯನ್ನು ಮುದ್ರಿಸಲಾಗುತ್ತಿದೆ.
ಪ್ರತಿ ಶಾಲೆಗೆ ಒಂದು ಸೆಟ್‌ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಶಿಕ್ಷಕರು ಮಕ್ಕಳಿಗೆ ರೊಟೇಷನ್ ಪದ್ಧತಿಯಂತೆ ಎಲ್ಲರಿಗೂ ಎಲ್ಲ ಕಾರ್ಡ್‌ಗಳು ಸಿಗುವಂತೆ ನೋಡಿಕೊಳ್ಳಲಿದ್ದಾರೆ. ಇದರಿಂದ ಮಕ್ಕಳಿಗೆ ಓದುವ ಆಸಕ್ತಿ  ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ADVERTISEMENT

***

ಕನ್ನಡ ಶಾಲೆಗಳ ಸ್ಥಿತಿಗತಿ ಅರಿಯಲು ಸಮೀಕ್ಷೆ ಆರಂಭಿಸಿದ್ದು, ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದು.
- ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.