ಮೈಸೂರು: ಇಲ್ಲಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ದಲ್ಲಿರುವ ಕನ್ನಡ ಶಾಸ್ತ್ರೀಯ ಭಾಷೆ ಅತ್ಯುನ್ನತ ಕೇಂದ್ರವು ಸ್ವಾಯತ್ತ ಸಂಸ್ಥೆಯಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವ ಮುನ್ನ ಬೆಂಗಳೂರು ಅಥವಾ ಮೈಸೂರಿನಲ್ಲಿ ತಾತ್ಕಾಲಿಕ ಜಾಗವನ್ನು ನೋಡುವಂತೆ ಕೇಂದ್ರ ಸರ್ಕಾರವು ನೇಮಿಸಿದ್ದ ತಂಡವು ಇಬ್ಬಂದಿ ನೀತಿ ಅನುಸರಿಸಿದೆ.
ಸಿಐಐಎಲ್ ಪ್ರಭಾರ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹಾಗೂ ಮೈಸೂರಿನ ಲೇಖಕ ಪ್ರೊ.ಎನ್.ಎಸ್.ತಾರಾನಾಥ ಸದಸ್ಯತ್ವದಲ್ಲಿ ತಾತ್ಕಾಲಿಕ ಕಟ್ಟಡ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. ಇದಕ್ಕೆ ಸಂಚಾಲಕರಾಗಿ ಅತ್ಯುನ್ನತ ಕೇಂದ್ರದ ನಿರ್ದೇಶಕ ಪ್ರೊ.ಪಿ.ಕೆ.ಖಂಡೋಬಾ ಇದ್ದರು. ಮೈಸೂರು ಹಾಗೂ ಬೆಂಗಳೂರಿನಲ್ಲಿ ತಾತ್ಕಾಲಿಕ ಕಟ್ಟಡಗಳನ್ನು ವೀಕ್ಷಿಸಿದ ಇಬ್ಬರೂ ಸದಸ್ಯರು ಒಮ್ಮತದಿಂದ ಒಂದು ನಿರ್ಣಯವನ್ನು ತಿಳಿಸದೆ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದ್ದಾರೆ. ಈ ಪ್ರತ್ಯೇಕ ವರದಿಗಳನ್ನು ಪ್ರಭಾರ ನಿರ್ದೇಶಕರು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ರವಾನಿಸಿದ್ದಾರೆ.
ಏನಿದೆ ವರದಿಗಳಲ್ಲಿ?: ಡಾ.ಹನುಮಂತಯ್ಯ ಅವರು ಕೇಂದ್ರದ ಸ್ಥಳಾಂತರ ಬೆಂಗಳೂರಿಗೆ ಆಗಲಿ ಎಂದೂ ಪ್ರೊ.ತಾರಾನಾಥ ಅವರು ಮೈಸೂರಿನಲ್ಲೇ ಇರಲಿ ಎಂದು ಪ್ರತ್ಯೇಕ ವರದಿಯನ್ನು ನೀಡಿದ್ದಾರೆ. ಈ ವರದಿಯನ್ನು ಯಥಾವತ್ತಾಗಿ ‘ಸಿಐಐಎಲ್’ ಪ್ರಭಾರ ನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಿದ್ದಾರೆ ಎಂದು ‘ಸಿಐಐಎಲ್’ಮೂಲಗಳು ತಿಳಿಸಿವೆ.
‘ಸಿಐಐಎಲ್’ನಿಂದ ಅತ್ಯುನ್ನತ ಕೇಂದ್ರವು ಸ್ಥಳಾಂತರಗೊಂಡು ಸ್ವಾಯತ್ತವಾದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅನುದಾನ ಸಿಗುತ್ತದೆ. ಈ ಕಾರಣಕ್ಕಾಗಿ ಸ್ವಾಯತ್ತ ಸಂಸ್ಥೆಯಾಗಿ ಕೇಂದ್ರವಾಗಬೇಕು ಎಂಬುದು ಕನ್ನಡಿಗರ ಬಹುಕಾಲದ ಒತ್ತಾಯವಾಗಿತ್ತು. ಇದಕ್ಕಾಗಿ ಕರ್ನಾಟಕದಿಂದ ನಿಯೋಗವು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಪ್ರಸ್ತಾವವನ್ನೂ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಇಲಾಖೆಯು ಸ್ವಾಯತ್ತ ಸಂಸ್ಥೆ ಮಾಡಲು ತಕರಾರೇನಿಲ್ಲ. ಸ್ವಂತ ಜಾಗ, ಕಟ್ಟಡ ತೋರಿಸಿ. ಸ್ವಂತ ಕಟ್ಟಡ ನಿರ್ಮಾಣ ತಡವಾಗುವುದಾದರೆ ತಾತ್ಕಾಲಿಕ ಕಟ್ಟಡ ತೋರಿಸುವಂತೆ ಸೂಚಿಸಿತ್ತು.
ಸಮಸ್ಯೆಯೇನು?: ಒಮ್ಮತದಿಂದ ಒಂದು ವರದಿ ಕೇಂದ್ರ ಸರ್ಕಾರಕ್ಕೆ ಹೋಗಿದ್ದರೆ, ಕೇಂದ್ರ ಸರ್ಕಾರವು ಹೆಚ್ಚು ತಕರಾರಿಲ್ಲದೆ ಒಪ್ಪಿಗೆ ನೀಡುವ ಸಾಧ್ಯತೆ ಇತ್ತು. ಈಗ ಎರಡೂ ಸ್ಥಳಗಳ ಶಿಫಾರಸು ಹೋಗಿರುವ ಕಾರಣ ಕೇಂದ್ರ ಸರ್ಕಾರವು ಮತ್ತೆ ರಾಜ್ಯ ಸರ್ಕಾರಕ್ಕೆ ನಿಖರ ಜಾಗ ತೋರಿಸುವಂತೆ ಕೇಳಬೇಕು. ಈ ಕುರಿತು ರಾಜ್ಯ ಸರ್ಕಾರವೂ ಯಾವುದೇ ಆಸಕ್ತಿಯನ್ನು ತೋರಿಸದ ಕಾರಣ, ಸ್ಥಳಾಂತರ ಪ್ರಕ್ರಿಯೆ ಸದ್ಯಕ್ಕಂತೂ ಆಗುತ್ತಿಲ್ಲ ಎನ್ನುವುದು ಆರೋಪ.
ಕೇಂದ್ರ ಸರ್ಕಾರವು ತಮಿಳು, ತೆಲುಗು, ಕನ್ನಡ ಭಾಷಾ ಅಭಿವೃದ್ಧಿಗೆ ಶಾಸ್ತ್ರೀಯ ಭಾಷೆ ಯೋಜನೆ ಅಡಿಯಲ್ಲಿ ₹ 100 ಕೋಟಿಯನ್ನು ನೀಡುತ್ತಿದೆ. ವರ್ಷಕ್ಕೆ ₹ 10ರಿಂದ 12 ಕೋಟಿ ತಮಿಳಿಗೆ ಈಗಾಗಲೇ ಸಿಗುತ್ತಿದೆ. ಇದಕ್ಕೆ ಕಾರಣ, ತಮಿಳು ಸ್ವಾಯತ್ತ ಕೇಂದ್ರವನ್ನು ಹೊಂದಿರುವುದು. ಸ್ವಾಯತ್ತವಾಗದ ಕನ್ನಡ ಹಾಗೂ ತೆಲುಗು ಕೇಂದ್ರಗಳಿಗೆ ವರ್ಷಕ್ಕೆ ಕೇವಲ ₹ 1 ಕೋಟಿ ಸಿಗುತ್ತಿದೆ. ತಮಿಳಿಗೆ ಒಟ್ಟು ₹ 100 ಕೋಟಿ ಹತ್ತಾರು ವರ್ಷಗಳಲ್ಲಿ ಸಂಪೂರ್ಣವಾಗಿ ಸಿಕ್ಕರೆ, ವರ್ಷಕ್ಕೆ ₹ 1 ಕೋಟಿ ಸಿಗುತ್ತಿರುವ ಕನ್ನಡ, ತೆಲುಗಿಗೆ ₹ 100 ಕೋಟಿ ಸಿಗಲು ದಶಕಗಳೇ ಹಿಡಿಯುತ್ತದೆ. ಈ ಕಾರಣಕ್ಕಾಗಿಯೇ ಕೇಂದ್ರವು ಸ್ವಾಯತ್ತವಾಗಬೇಕು ಎನ್ನುವುದು ಕನ್ನಡಿಗರ ಬೇಡಿಕೆಯಾಗಿದೆ.
2017ರ ಮಾರ್ಚ್‌ಗೆ ಕೇಂದ್ರಕ್ಕೆ 5 ವರ್ಷ ತುಂಬಲಿದೆ. ಈಗ 6 ಯೋಜನೆಗಳು ಕೇಂದ್ರದಲ್ಲಿ ನಡೆಯುತ್ತಿವೆ. ಹೆಚ್ಚುವರಿ ಅನುದಾನ ಬಂದರೆ ಕನ್ನಡದ ಕೆಲಸ ಇನ್ನೂ ವೇಗದಿಂದ ನಡೆಯುತ್ತದೆ ಎನ್ನುವುದು ಸಮರ್ಥನೆ.