ADVERTISEMENT

ಕರುಳಬಳ್ಳಿಗಳ ನಡುವೆ ಕಾದಾಟ

ಪ್ರವಾಸದಲ್ಲಿ ಕಂಡಿದ್ದು, ಕೇಳಿದ್ದು...

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:38 IST
Last Updated 25 ಏಪ್ರಿಲ್ 2013, 9:38 IST
ಕರುಳಬಳ್ಳಿಗಳ ನಡುವೆ ಕಾದಾಟ
ಕರುಳಬಳ್ಳಿಗಳ ನಡುವೆ ಕಾದಾಟ   

ರಾಯಚೂರು: 2008ರಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿರುವ ರಾಯಚೂರು ಜಿಲ್ಲೆ ಕರುಳಬಳ್ಳಿಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಿದೆ.

ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಇದರ ಆಧಾರದಲ್ಲಿ, ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು (ಮಸ್ಕಿ, ಮಾನ್ವಿ, ದೇವದುರ್ಗ, ರಾಯಚೂರು ಗ್ರಾಮೀಣ) ಮತ್ತು ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಪರಿಶಿಷ್ಟ ಜಾತಿಗೆ (ಲಿಂಗಸುಗೂರು) ಒಂದು ಕ್ಷೇತ್ರ ಮೀಸಲಾಗಿದ್ದರೆ, ಉಳಿದೆರಡು (ರಾಯಚೂರು ನಗರ ಮತ್ತು ಸಿಂಧನೂರು) ಸಾಮಾನ್ಯ ವರ್ಗಕ್ಕೆ ಸೇರಿವೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ನಾಲ್ಕೂ ಕ್ಷೇತ್ರಗಳಲ್ಲಿ ಒಂದೇ ಕುಟುಂಬದವರು ಬೇರೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿದ್ದು ಜಿದ್ದಾಜಿದ್ದಿಯ ಹೋರಾಟ ಏರ್ಪಟ್ಟಿದೆ. ಆದರೆ, ಮತದಾರರು ಮಾತ್ರ ಇದನ್ನು ಒಪ್ಪಲ್ಲ. ಇದೊಂದು ರೀತಿ `ಮ್ಯಾಚ್ ಫಿಕ್ಸಿಂಗ್'. ಕಣದಲ್ಲಿರುವವರಲ್ಲಿ ಯಾರಿಗೆ ಗೆಲ್ಲುವ ಸಾಮರ್ಥ್ಯ ಇರುತ್ತದೋ ಅವರಿಗೆ ರಹಸ್ಯವಾಗಿ ನೆರವಾಗುವ ಪರಿಪಾಠವಿದೆ ಎಂಬ ಆರೋಪಗಳು ಕೇಳಿಬರುತ್ತವೆ.

ಕಳೆದ ಚುನಾವಣೆಯಲ್ಲೂ ಪ್ರಮುಖ ಪಕ್ಷದ ಅಭ್ಯರ್ಥಿಯೊಬ್ಬರು ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಪ್ರಚಾರದಿಂದ ದೂರ ಉಳಿದು ಸಂಬಂಧಿ ಗೆಲುವಿಗೆ ಪರೋಕ್ಷವಾಗಿ ಸಹಕರಿಸಿದ್ದರು ಎಂದು ಗುಟ್ಟಾಗಿ ಹೇಳುತ್ತಾರೆ.

2008ರ ಚುನಾವಣೆಗೆ ಮೊದಲು ಒಂದೇ ಕುಟುಂಬದ ಸದಸ್ಯರು ಈ ಪ್ರಮಾಣದಲ್ಲಿ ಎದುರು-ಬದುರು ಅಖಾಡಕ್ಕಿಳಿಯುತ್ತಿರಲಿಲ್ಲ. ಅಲ್ಲದೇ, ದೇವದುರ್ಗ ಮಾತ್ರ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರವಾಗಿತ್ತು. ಹಾಗಾಗಿ ಇಂತಹ ಕರುಳಬಳ್ಳಿಗಳ ನಡುವಿನ ಕದನಕ್ಕೆ ಅವಕಾಶವಿರಲಿಲ್ಲ. ಆಗ ಲೋಕಸಭಾ ಕ್ಷೇತ್ರ ಮೀಸಲು ಅಲ್ಲದೇ ಇದ್ದರೂ ಕಾಂಗ್ರೆಸ್ ಪಕ್ಷ ನಾಯಕ ಸಮುದಾಯದ ವೆಂಕಟೇಶ ನಾಯಕ ಅವರಿಗೆ ಟಿಕೆಟ್ ನೀಡುತ್ತಿತ್ತು. ಅವರು ನಾಲ್ಕು ಬಾರಿ ಆರಿಸಿಯೂ ಬಂದಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಜನಸಂಖ್ಯೆ ಆಧರಿಸಿ ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಸ್ಥಾನಗಳು ಮೀಸಲಾಗಿವೆ.

ಆದರೆ, ಈ ಸಮುದಾಯದಲ್ಲಿ ಚುನಾವಣೆಗೆ ಸ್ಪರ್ಧಿಸುವ `ಸಾಮರ್ಥ್ಯ' ಹೊಂದಿರುವವರ ಸಂಖ್ಯೆ ತೀರ ಕಡಿಮೆ ಇದೆ. ಹಾಗಾಗಿ `ಸಾಮರ್ಥ್ಯ'ವನ್ನು ಗುರುತಿಸಿ, ಒಂದೇ ಕುಟುಂಬದ ಸದಸ್ಯರನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಸೆಳೆದು ಕಣಕ್ಕಿಳಿಸುತ್ತಿವೆ.

ಪಕ್ಕದ ಬಳ್ಳಾರಿಯಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿಯೂ ಒಂಬತ್ತು ಕ್ಷೇತ್ರಗಳ ಪೈಕಿ ಐದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಆದರೆ, ಅಲ್ಲಿ ಒಂದೇ ಕುಟುಂಬದವರು ಒಂದೇ ಪಕ್ಷದ ಚಿಹ್ನೆಯಡಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಬೇರೆ ಬೇರೆ ಕ್ಷೇತ್ರಗಳಿಂದ ಗೆಲುವಿನ ನಗೆ ಬೀರಿದ್ದರು.

ರಾಯಚೂರು ಜಿಲ್ಲೆಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಪರಿಶಿಷ್ಟ ಪಂಗಡದ ಸಮುದಾಯದವರಲ್ಲಿ ರಾಜಕೀಯ ಅಧಿಕಾರ ಪಡೆಯಬೇಕು ಎಂಬ ಹಪಾಹಪಿ ಕೇವಲ ಕೆಲವೇ ಕುಟುಂಬಗಳಿಗೆ ಸೀಮಿತವಾಗಿದೆ. ಗೆಲ್ಲುವ `ಸಾಮರ್ಥ್ಯ' ಕೂಡ ಕೆಲವರಿಗೆ ಮಾತ್ರ ಇದೆ. ಈ ಸಮಾಜದವರಲ್ಲಿ ಅನೇಕ ಶ್ರೀಮಂತ ಜಮೀನ್ದಾರರಿದ್ದಾರೆ. ಅಂತಹವರನ್ನೇ ರಾಜಕೀಯ ಪಕ್ಷಗಳು ಹುಡುಕಿ ಕಣಕ್ಕಿಳಿಸುತ್ತವೆ.

ಉಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರು ಕೃಷಿ ಕಾರ್ಮಿಕರು. ಕೃಷಿ ಚಟುವಟಿಕೆ ಇಲ್ಲದಿದ್ದಾಗ ಅವರಲ್ಲಿ ಬಹುತೇಕ ಮಂದಿ ಹೊಟ್ಟೆ ತುಂಬಿಸಿಕೊಳ್ಳಲು ದಕ್ಷಿಣ ಕನ್ನಡ, ಬೆಂಗಳೂರು ಕಡೆಗೆ ಗುಳೇ ಹೋಗುತ್ತಾರೆ. ಇವರ ಬಗ್ಗೆ ಕಾಳಜಿ ವಹಿಸಲು ಯಾರೂ ಮುಂದಾಗುವುದಿಲ್ಲ ಎಂಬ ಬೇಸರವೂ ಜಿಲ್ಲೆಯ ಜನಸಾಮಾನ್ಯರಲ್ಲಿದೆ.

`ಇಲ್ಲಿ ಒಂದೇ ಕುಟುಂಬದವರು ಬೇರೆ ಬೇರೆ ಪಕ್ಷಗಳಿಂದ ಒಂದೇ ಕ್ಷೇತ್ರದಲ್ಲಿ ಕಣಕ್ಕಿಳಿಯುವುದು ಅನಿವಾರ್ಯ' ಎನ್ನುತ್ತಾರೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಕಾಂಗ್ರೆಸ್‌ನ ರಾಜಾ ರಾಯಪ್ಪ ನಾಯಕ.

ಈ ಕ್ಷೇತ್ರದಲ್ಲಿ ಅವರ ಎದುರಾಳಿ ಅಣ್ಣ ರಾಜಾ ಅಮರೇಶ್ವರ ನಾಯಕ. ಇವರು ಜೆಡಿಎಸ್ ಹುರಿಯಾಳು. ಲಿಂಗಸುಗೂರು ತಾಲ್ಲೂಕಿನ ಗುಂತಗೋಳ ಸಂಸ್ಥಾನದ ರಾಜ ಮನೆತನದವರಾದ ಈ ಸೋದರರು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಪರಸ್ಪರ ತೊಡೆ ತಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

`ನಾನು ಹಾಲಿ ಶಾಸಕನಾದ್ದರಿಂದ ಪಕ್ಷ ನನಗೆ ಟಿಕೆಟ್ ನೀಡಿದೆ. ನನ್ನ ವಿರುದ್ಧವೇ ಏಕೆ ನೀನು ಸ್ಪರ್ಧಿಸುತ್ತಿ ಎಂದು ನಾನು ಸೋದರನನ್ನು ಕೇಳಿಲ್ಲ. ಅಲ್ಲದೇ ಆತನ ಮನವೊಲಿಕೆಗೂ ಯತ್ನಿಸಿಲ್ಲ. ಹಾಲಿ ಶಾಸಕನಾದ್ದರಿಂದ ಈ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಲು ನನಗೆ ಸಾಧ್ಯವಿಲ್ಲ. ಸೋದರರಾದರೂ ನಾವಿಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇವೆ. ಹಿಂದೆ ಅವನೂ ಶಾಸಕಗಿದ್ದ. ಜನ ಸಂಪರ್ಕ ಹೆಚ್ಚು ಇದೆ ಎಂದು ಅವರು ಹೇಳಿಕೊಳ್ಳುತ್ತಾನೆ' ಎನ್ನುತ್ತಾರೆ ರಾಜಾ ರಾಯಪ್ಪ ನಾಯಕ.

ಮಸ್ಕಿಯಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಅವರ ಭಾವ (ಅಕ್ಕನ ಗಂಡ) ಮಹಾದೇವಪ್ಪ ಗೌಡ ಕೆಜೆಪಿ ಉಮೇದುವಾರ. ಮಾನ್ವಿಯಲ್ಲಿ ಕೆಜೆಪಿಯಿಂದ ಮಾಜಿ ಶಾಸಕ ಗಂಗಾಧರ ನಾಯಕ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನ ಶಾಸಕ ಹಂಪಯ್ಯ ನಾಯಕ ಅವರ ಎದುರಾಳಿ. ಹಂಪಯ್ಯ ನಾಯಕ ಅವರ ಸೋದರಿಯನ್ನು ಗಂಗಾಧರ ನಾಯಕ ಅವರ ಅಣ್ಣ ಮದುವೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲೂ ಇವರಿಬ್ಬರು ಚುನಾವಣೆ ಎದುರಿಸಿದ್ದರಾದರೂ ಗೆಲುವಿನ ನಗೆ ಬೀರಿದವರು ಹಂಪಯ್ಯ ನಾಯಕ. ಗಂಗಾಧರ ನಾಯಕ ಅವರ ಪುತ್ರ ಗೋಪಾಲ ನಾಯಕ ಅವರು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಹಂಪಯ್ಯ ನಾಯಕ ಅವರ ಆಪ್ತ ಬಸವರಾಜ ಗುಡದಿನ್ನಿ ಸಹ ಕಣಕ್ಕಿಳಿದಿದ್ದರು. ಗೋಪಾಲ ಗೆದ್ದು ಗುಡದಿನ್ನಿ ಸೋಲುಂಡಿದ್ದರು.

ದೇವದುರ್ಗದಲ್ಲಿ ವರಸೆಯಲ್ಲಿ ಅಜ್ಜ-ಮೊಮ್ಮಗ ಸಂಬಂಧದ ಮಾಜಿ ಸಂಸದ ವೆಂಕಟೇಶ ನಾಯಕ ಮತ್ತು ಬಿಜೆಪಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಮತ್ತೆ ಎದುರಾಳಿಗಳಾಗಿದ್ದಾರೆ. 2008ರ ಚುನಾವಣೆಯಲ್ಲಿ ಶಿವನಗೌಡ ಗೆಲುವು ಸಾಧಿಸಿದ್ದರು. ಈಗ ಮೊಮ್ಮಗನ ವಿರುದ್ಧ ಅಜ್ಜ ಮತ್ತೆ ತೊಡೆ ತಟ್ಟಿ ನಿಂತಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗಿ ಶಿವನಗೌಡ ಬಿಜೆಪಿ ಸೇರಿ, ಮತ್ತೆ ಆರಿಸಿ ಬಂದಿದ್ದರು.

ಇನ್ನು ಸಿಂಧನೂರು ಕ್ಷೇತ್ರದ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ಇಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ, ಕೆಜೆಪಿಯ ರಾಜಶೇಖರ ಪಾಟೀಲ ಹಾಗೂ ಶಾಸಕ, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಕೂಡ ಸಂಬಂಧಿಕರೇ. `ಯಾರು ಗೆದ್ದರೂ ಅವರವರಲ್ಲಿಯೇ ಅಧಿಕಾರ ಇರುತ್ತದೆ. ಅದಕ್ಕೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು' ಎಂದು ವಿವಿಧ ಪಕ್ಷಗಳ ಮುಖಂಡರು ಮುನಿಸು ತೋರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.