ಬೆಂಗಳೂರು: ‘ನಟ ಜೆ.ಕೆ.ಶ್ರೀನಿವಾಸಮೂರ್ತಿ, ನಟಿ ಆದವಾನಿ ಲಕ್ಷ್ಮೀದೇವಿ, ಹಾಸ್ಯನಟ ಎಂ.ಎಸ್.ಉಮೇಶ್,ಎಸ್.ದೊಡ್ಡಣ್ಣ ಸೇರಿದಂತೆ 15 ಕಲಾವಿದರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ‘ಕನ್ನಡ ಚಲನಚಿತ್ರ ಅಭಿವೃದ್ಧಿಗಾಗಿ ಗಣನೀಯವಾಗಿ ಸೇವೆ ಸಲ್ಲಿಸಿದ ಕಲಾವಿದರನ್ನು ಪ್ರೋತ್ಸಾಹಿಸಲು ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿ ಪ್ರಶಸ್ತಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಹಾಗೂ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡಿದ ಮಹನೀಯರ ಹೆಸರಿನಲ್ಲಿ ನೀಡು ತ್ತಿರುವುದು ವಿಶೇಷ’ ಎಂದು ಹೇಳಿದರು.
‘ಚಿತ್ರೋದ್ಯಮದ ಅಭಿನಯ, ನಿರ್ದೇಶನ, ನಿರ್ಮಾಣ, ಹಂಚಿಕೆ, ಸಂಗೀತ, ಚಿತ್ರ ಸಾಹಿತ್ಯ, ಛಾಯಾಗ್ರಹಣ, ತಂತ್ರಜ್ಞಾನ ಕಾರ್ಮಿಕ ವಿಭಾಗ, ಪ್ರಾದೇಶಿಕ ಭಾಷಾಚಿತ್ರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಶನಿವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ’ ಎಂದರು.
‘ಪ್ರಶಸ್ತಿಯು ತಲಾ ₹50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಮಾರ್ಚ್ 3 ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯಲಿರುವ ಕನ್ನಡ ವಾಕ್‌ಚಿತ್ರದ ಹುಟ್ಟು ಹಬ್ಬ ಸಮಾರಂಭದಲ್ಲಿ ವಸತಿ ಸಚಿವ ಎ.ಕೃಷ್ಣಪ್ಪ ಪ್ರಶಸ್ತಿ ಪ್ರದಾನ ಮಾಡ ಲಿದ್ದಾರೆ’ ಎಂದು ಹೇಳಿದರು.
ಬಿ.ಆರ್.ಪಂತಲು ಪ್ರಶಸ್ತಿ ತಿರಸ್ಕಾರ
ಬೆಂಗಳೂರು: ಬಿ.ಆರ್.ಪಂತಲು ಪ್ರಶಸ್ತಿಯನ್ನು ಕೆ.ವಿ.ರಾಜು ಅವರು ತಿರಸ್ಕರಿಸಿದ್ದಾರೆ. ಈ ಬಗ್ಗೆ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ‘ಪ್ರಶಸ್ತಿ ಸ್ವೀಕರಿಸುವ ಯಾವ ಇಚ್ಛೆಯೂ ನನಗಿಲ್ಲ. ನನ್ನ ಸಿನಿಮಾ ಪ್ರಯಾಣದ ಗುರಿ ಮನರಂಜನೆಯೇ ಹೊರತು ಪ್ರಶಸ್ತಿ ಪಡೆಯುವುದಲ್ಲ.
ಜನರನ್ನು ರಂಜಿಸಲು ಹಣ ಪಡೆಯುತ್ತಿರುವುದರಿಂದ ಈ ಪ್ರಶಸ್ತಿಗೆ ನಾನು ಅಹ೯ನಲ್ಲ’ ಎಂದು ಉಲ್ಲೇಖಿಸಿದ್ದಾರೆ. ‘ಪ್ರಶಸ್ತಿ ನೀಡದಿದ್ದರೆ ಅದೇ ನೀವು ನನಗೆ ನೀಡುವ ಗೌರವ. ಪ್ರಶಸ್ತಿ ಪಡೆಯಲು ತಪಸ್ಸು ಮಾಡುವವರ ದಂಡೇ ಇದೆ, ಅಂತಹವರಿಗೆ ಪ್ರಶಸ್ತಿ ನೀಡಿ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.