ಶ್ರವಣಬೆಳಗೊಳ: ಪ್ರಾಕೃತ ಭಾಷೆಯ ಧವಲ ಮತ್ತು ಜಯಧವಲ ಗ್ರಂಥಗಳು ಮೂಡಬಿದರೆಯ ಬಸದಿಯಲ್ಲಿ ಸಂರಕ್ಷಿಸಲ್ಪಟ್ಟಿರುವುದರಿಂದ ಪ್ರಾಕೃತಕ್ಕೆ ಕರ್ನಾಟಕವೇ ತವರು ಮನೆ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಇಲ್ಲಿ ಶನಿವಾರ ಅಭಿಪ್ರಾಯಪಟ್ಟರು.
ಗೊಮ್ಮಟನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಪ್ರಾಕೃತ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.
‘ಕ್ರಿ.ಪೂ 6ನೇ ಶತಮಾನದಲ್ಲಿ ಮಹಾವೀರ ತೀರ್ಥಂಕರರು ಆತ್ಮ ತತ್ವವನ್ನು ಜನರಿಗೆ ತಿಳಿಸಲು ಪ್ರಾಕೃತ ಭಾಷೆಯನ್ನೇ ಸಂವಹನ ಸಾಧನವನ್ನಾಗಿ ಮಾಡಿಕೊಂಡಿದ್ದರಿಂದ ಲೋಕ ಭಾಷೆಯಾಗಿ ಬೆಳಕಿಗೆ ಬಂದಿತ್ತು.
ದೇಶದ ಎಲ್ಲಾ ಭಾಷೆಯ ವಿಕಾಸದಲ್ಲಿ ಪ್ರಾಕೃತವನ್ನು ಕಾಣುತ್ತೇವೆ. ಭಾಷಾ ಪರಂಪರೆಯಲ್ಲಿ ಕನ್ನಡ ಭಾಷೆಯೇ ಶ್ರೇಷ್ಠ ಎಂಬ ಭಾವನೆ ಇಲ್ಲ. ಕನ್ನಡ ಭಾಷೆ ಪ್ರಾಕೃತ, ಸಂಸ್ಕೃತ, ತಮಿಳು, ತೆಲುಗು, ಉರ್ದು, ಪರ್ಷಿಯಾ, ಅರೇಬಿಕ್, ಇಂಗ್ಲಿಷ್ ಭಾಷೆಗಳ ಜೊತೆ ಉತ್ತಮ ಬಾಂಧವ್ಯ ಹೊಂದಿತು. ಕನ್ನಡ ಭಾಷೆಯೇ ಪುರಾತನ ಎಂಬ ಸ್ಪರ್ಧೆ ಇತ್ತೀಚೆಗೆ ಹುಟ್ಟಿಕೊಂಡಿದ್ದು, ಅದು ಆರೋಗ್ಯಕರ ಬೆಳವಣಿಗೆಯಲ್ಲ’ ಎಂದರು.
ಪ್ರಾಕೃತ ಸಾಹಿತ್ಯ ಸೇವೆಗಾಗಿ ಮಾಸ್ಕೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನತಲಿಯಾ ಝೆಲೆಜ್‌ನೋವಾ ಅವರಿಗೆ ‘ಪ್ರಾಕೃತ ಜ್ಞಾನ ಭಾರತಿ’ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ವೀರಪ್ಪ ಮೊಯಿಲಿ ಪ್ರದಾನ ಮಾಡಿದರು.
ಪ್ರಾಧ್ಯಾಪಕ ರಮಾಕಾಂತ ಶುಕ್ಲಾ ಅವರು ಸಮಾರೋಪ ಭಾಷಣ ಮಾಡಿದರು. ಸರ್ವಾಧ್ಯಕ್ಷ ಉದಯಪುರದ ಪ್ರಾಧ್ಯಾಪಕ ಪ್ರೇಂ ಸುಮನ್ ಜೈನ್ ಸಮ್ಮೇಳನದ ನಿರ್ಣಯ ಮಂಡಿಸಿದರು. ಜಿನೇಂದ್ರ ಕುಮಾರ್ ಜೈನ ಸಮ್ಮೇಳನದ ವರದಿ ವಾಚಿಸಿದರು. ವಿಶ್ರಾಂತ ಕುಲಪತಿ ಮಹಾವೀರ್ ರಾಜ್ ಗೆಲ್ರಾ ಅಧ್ಯಕ್ಷತೆ ವಹಿಸಿದ್ದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
* * *
ಸಮ್ಮೇಳನದ ನಿರ್ಣಯಗಳು
* ಶ್ರವಣಬೆಳಗೊಳದಲ್ಲಿ ಪ್ರಾಕೃತ ವಿಶ್ವವಿದ್ಯಾಲಯ ತುರ್ತಾಗಿ ಸ್ಥಾಪಿಸಬೇಕು
* ನವದೆಹಲಿ ಅಥವಾ ರಾಜಸ್ಥಾನದಲ್ಲಿ ಪ್ರಾಕೃತ ಸಾಹಿತ್ಯ ಪರಿಷತ್ ಸ್ಥಾಪನೆಯಾಗಬೇಕು
* ಮಹಿಳೆಯರಿಗೆ ಪ್ರಾಕೃತ ಮಹಿಳಾ ಪ್ರಶಸ್ತಿ ನೀಡಬೇಕು
* ಪ್ರಾಕೃತ ಯುವ ವಿದ್ವಾಂಸರಿಗೆ ಪ್ರಾಕೃತ ಯುವ ಪ್ರಶಸ್ತಿ ನೀಡಬೇಕು
* ಮಹಾವೀರರ ಜನ್ಮಭೂಮಿ ಬಿಹಾರದ ವೈಶಾಲಿಯಲ್ಲಿ ಪ್ರಾಕೃತ ವಿಶ್ವವಿದ್ಯಾಲಯ ಆರಂಭಿಸಬೇಕು
* ರಾಷ್ಟ್ರೀಯ ಪ್ರಾಕೃತ–ಜೈನಶಾಸ್ತ್ರ ಗ್ರಂಥಾಲಯ ಆರಂಭಿಸಬೇಕು
* ಅಂತರರಾಷ್ಟ್ರೀಯ ಪ್ರಾಕೃತ ಸಮ್ಮೇಳನದಲ್ಲಿ ಮಂಡಿಸಿರುವ ಸಂಶೋಧನಾತ್ಮಕ ಲೇಖನಗಳ ಪ್ರಕಟಣೆಯಾಗಬೇಕು. ಪ್ರಾಕೃತ ಪತ್ರಿಕೆಗಳ ಪ್ರಕಟಣೆಗೆ ಸಹಕಾರ ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.