ADVERTISEMENT

ಕಲಬುರ್ಗಿ ಹತ್ಯೆ: ರುದ್ರ ಪಾಟೀಲ ಕೈವಾಡ ಶಂಕೆ

ಸಾಂಗ್ಲಿಯಲ್ಲಿ ಸಿಐಡಿ ಅಧಿಕಾರಿಗಳು, ತನಿಖೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2015, 19:30 IST
Last Updated 22 ಸೆಪ್ಟೆಂಬರ್ 2015, 19:30 IST

ಬೆಳಗಾವಿ: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ಮಹಾರಾಷ್ಟ್ರದ ಪ್ರಗತಿಪರ ಚಿಂತಕ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದರಾವ್‌ ಪಾನ್ಸರೆ ಅವರ ಹತ್ಯೆ ಸಂಚನ್ನು ಒಂದೇ ಸಂಘಟನೆಗೆ ಸೇರಿದವರು ರೂಪಿಸಿರುವ ಸಾಧ್ಯತೆಗಳಿದ್ದು, ಇದರಲ್ಲಿ ಮಹಾರಾಷ್ಟ್ರದ ರುದ್ರಗೌಡ ಪಾಟೀಲ ಕೈವಾಡ ಇರುವ ಬಗ್ಗೆ ಶಂಕಿಸಿರುವ ಸಿಐಡಿ, ಎಸ್‌ಐಟಿ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸಿಐಡಿಯ ಕೆಲವು ಅಧಿಕಾರಿಗಳು ಕಳೆದ ಭಾನುವಾರವೇ ಸಾಂಗ್ಲಿಗೆ ತೆರಳಿದ್ದು, ಎಸ್‌.ಪಿ. ಡಾ.ಡಿ.ಸಿ. ರಾಜಪ್ಪ ಮತ್ತಿತರರು ಸೋಮವಾರವಷ್ಟೇ ಅವರನ್ನು ಸೇರಿಕೊಂಡಿದ್ದಾರೆ. ಅವರೊಂದಿಗೆ ಬೆಳಗಾವಿಯ ಪೊಲೀಸ್‌ ಸಿಬ್ಬಂದಿಯೂ ತೆರಳಿದ್ದು, ಕೋರಿಕೆಯ ಮೇರೆಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ರುದ್ರನಿಗಾಗಿ ಶೋಧ: ಕಳೆದ ವಾರ ಸಾಂಗ್ಲಿಯಲ್ಲಿ ಬಂಧನಕ್ಕೆ ಒಳಗಾಗಿರುವ ಸನಾತನ ಸಂಸ್ಥೆಯ ಸದಸ್ಯ ಸಮೀರ್‌ ಗಾಯಕವಾಡ ನೀಡಿರುವ ಸುಳಿವಿನ ಮೇರೆಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಕಾರಜಣಗಿ ಗ್ರಾಮದ ರುದ್ರ ಪಾಟೀಲ (32)  ಶೋಧಕ್ಕೆ ಎಸ್‌ಐಟಿ ಮುಂದಾಗಿದೆ. 2009ರಲ್ಲಿ ಗೋವಾದ ಮಡಗಾಂವದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಇದೇ ರುದ್ರ ಪಾಟೀಲನ ಶೋಧ ಕಾರ್ಯ ಕೈಗೊಂಡಿದ್ದಲ್ಲದೆ, ಆತನ ಪತ್ತೆಗೆ ಇಂಟರ್‌ಪೋಲ್‌ನಿಂದ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ಸಂಕೇಶ್ವರದ ನಂಟು: ರುದ್ರ ಪಾಟೀಲ ಮೂಲತಃ ಮಹಾರಾಷ್ಟ್ರದ ಜತ್ತ ತಾಲ್ಲೂಕಿನವರಾದರೂ ಜಿಲ್ಲೆಯ ಸಂಕೇಶ್ವರದೊಂದಿಗೆ ನಂಟು ಇರುವ ಬಗ್ಗೆ ಮಹಾರಾಷ್ಟ್ರದ ಎಸ್‌ಐಟಿಗೆ ಪುರಾವೆಗಳು ದೊರೆತಿವೆ. ಕಾರಜಣಗಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಪಾಟೀಲ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಜತ್ತದಲ್ಲೂ, ಪದವಿ ಶಿಕ್ಷಣವನ್ನು ಮಹಾರಾಷ್ಟ್ರದಲ್ಲೂ ಪಡೆದಿದ್ದಾರೆ.

100 ಎಕರೆ ಜಮೀನು ಹೊಂದಿರುವ ಕುಟುಂಬದಿಂದ ಬಂದಿರುವ ಈತ ವಿದ್ಯಾರ್ಥಿ ದೆಸೆಯಿಂದಲೂ ಸಹಪಾಠಿಗಳು ಸೇರಿದಂತೆ ಯಾರೊಂದಿಗೂ ಬೆರೆಯದೆ, ಸದಾ  ಒಬ್ಬನೇ ಇರುತ್ತಿದ್ದ ಎನ್ನಲಾಗಿದೆ. ಸಮೀರ್‌ ಗಾಯಕವಾಡನ ಸಂಪರ್ಕಕ್ಕೆ ಬಂದ ನಂತರ ಈತ ಸಂಕೇಶ್ವರಕ್ಕೂ ಅನೇಕ ಬಾರಿ ಭೇಟಿ ನೀಡಿ ಹೋಗಿರುವ ಸಾಧ್ಯತೆಗಳಿದ್ದು, ಡಾ.ಕಲಬುರ್ಗಿ ಅವರ ಹತ್ಯೆ ನಡೆದ ದಿನ (ಆಗಸ್ಟ್‌ 30) ಧಾರವಾಡಕ್ಕೆ ಭೇಟಿ ನೀಡಿದ್ದನೇ ಎಂಬ ಕುರಿತೂ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಆರು ವರ್ಷಗಳಿಂದ ಭೂಗತನಾಗಿದ್ದಾನೆ.

ಊರಿಗೆ ಮರಳಿಲ್ಲ: ಬಂಧಿತ ಸಮೀರ್‌ ಗಾಯಕವಾಡನ ಅಳಿಯಂದಿರಾದ ಸಂಕೇಶ್ವರದ ಸುಶೀಲ್‌ ಜಾಧವ್‌ ಹಾಗೂ ಶ್ರೀಧರ್‌ ಜಾಧವ್‌ ಅವರನ್ನು ವಶಕ್ಕೆ ಪಡೆದಿದ್ದ ಎಸ್‌ಐಟಿ, ಸುಶೀಲ್‌ ಜಾಧವನನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಆದರೆ, ಬಿಡುಗಡೆಗೊಂಡಿರುವ ಸುಶೀಲ್‌ ಇದುವರೆಗೂ ಊರಿಗೆ ಮರಳಿಲ್ಲ. ಬಂಧಿತ ಸಮೀರ್‌ ಗಾಯಕವಾಡ, ಸುಶೀಲ್‌ ಹಾಗೂ ಶ್ರೀಧರ್‌ ಅವರನ್ನೂ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

***
ಭಾವಚಿತ್ರಗಳಲ್ಲೂ ಸಾಮ್ಯತೆ
ಬೆಳಗಾವಿ: ಸಿಐಡಿ ಬಿಡುಗಡೆ ಮಾಡಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ ಹಂತಕರ ರೇಖಾಚಿತ್ರಕ್ಕೂ, ಎನ್‌ಐಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ರುದ್ರ ಪಾಟೀಲ ಭಾವಚಿತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯು ಕಲಬುರ್ಗಿ ಅವರ ಕುಟುಂಬ ಸದಸ್ಯರಿಂದ ಹಂತಕರ ಬಗ್ಗೆ ಪಡೆದ ಮಾಹಿತಿಯ ಮೇರೆಗೆ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ್ದ ರೇಖಾಚಿತ್ರಕ್ಕೂ ಎನ್‌ಐಎ ಪ್ರಕಟಿಸಿರುವ ಭಾವಚಿತ್ರಕ್ಕೂ ಸಾಕಷ್ಟು ಹೋಲಿಕೆಗಳಿರುವುದು ಹತ್ಯೆ ನಡೆದ ದಿನ ರುದ್ರ ಪಾಟೀಲ ಧಾರವಾಡಕ್ಕೆ ಬಂದಿರುವ ಸಾಧ್ಯತೆಗಳ ಬಗೆಗಿನ ಶಂಕೆಗೆ ಪುಷ್ಟಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT