ಮಂಗಳೂರು: ‘ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆ ಮತ್ತು ಪುಣಚದ ಶ್ರೀದೇವಿ ಪ್ರೌಢಶಾಲೆಗಳು ಅರ್ಜಿ ಸಲ್ಲಿಸಿದರೆ ಎರಡೂ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಿಸಿಯೂಟ ಪೂರೈಕೆಗೆ ಸಿದ್ಧ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚದ ಶ್ರೀದೇವಿ ವಿದ್ಯಾ ಕೇಂದ್ರಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ನೆರವು ನೀಡುವುದನ್ನು ಸ್ಥಗಿತಗೊಳಿಸಿದ ನಂತರ ಉಂಟಾಗಿರುವ ವಿವಾದದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಎರಡೂ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅರ್ಜಿ ಸಲ್ಲಿಸಿದರೆ ಬಿಸಿಯೂಟ ಒದಗಿಸಲು ನಾನು ಸಿದ್ಧ’ ಎಂದರು.
‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ– 1999ರ ಸೆಕ್ಷನ್ 19ಕ್ಕೆ ವಿರುದ್ಧವಾಗಿ ಎರಡೂ ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದ ಹಣ ನೀಡಲಾಗುತ್ತಿತ್ತು. ದೇವಸ್ಥಾನಗಳ ಆಡಳಿತ ನಿರ್ವಹಣೆಗಾಗಿ ರಚಿಸಿರುವ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರದಂತೆ ಶಾಲೆಗಳಿಗೆ ನೆರವು ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ರಾಜ್ಯ ಸರ್ಕಾರ ಯಾರ ಬಗ್ಗೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎಂದು ಹೇಳಿದರು.
ಅನ್ನ ಕಸಿದವರು ಭಟ್ಟರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಶಾಲಾ ಮಕ್ಕಳ ಅನ್ನ ಕಸಿದಿದ್ದೇವೆ ಎಂಬ ಅಪಪ್ರಚಾರವನ್ನು ಕೆಲವರು ಮಾಡುತ್ತಿದ್ದಾರೆ. ಎರಡೂ ಪ್ರೌಢಶಾಲೆಗಳ ಶಿಕ್ಷಕರಿಗೆ ವೇತನ ನೀಡಲು ಶಿಕ್ಷಣ ಇಲಾಖೆಯ ಅನುದಾನ ಪಡೆಯಲಾಗುತ್ತಿದೆ. ಆದರೆ, ಅದೇ ಇಲಾಖೆಯು ಮಕ್ಕಳಿಗೆ ನೀಡುವ ಬಿಸಿಯೂಟ ಬೇಡವೆಂದು ಪ್ರಭಾಕರ ಭಟ್ ಲಿಖಿತವಾಗಿ ನಿರಾಕರಿಸಿದ್ದರು. ಮಕ್ಕಳ ಅನ್ನ ಕಸಿದವರು ನಾವಲ್ಲ, ಪ್ರಭಾಕರ ಭಟ್ ಆ ಕೆಲಸವನ್ನು ಮಾಡಿದವರು’ ಎಂದು ಆರೋಪಿಸಿದರು.
‘ಶಿಕ್ಷಕರ ಸಂಬಳಕ್ಕೆ ಶಿಕ್ಷಣ ಇಲಾಖೆಯ ಅನುದಾನ ಪಡೆಯುವವರು ಅದೇ ಇಲಾಖೆ ಬಿಸಿಯೂಟ ನಿರಾಕರಿಸಿ, ದೇವಸ್ಥಾನದ ಹಣ ಪಡೆದದ್ದು ಏಕೆ? ಉಳಿದ ಎಲ್ಲ ಶಾಲೆಗಳಿಗೂ ಮಕ್ಕಳಿಗೆ ಊಟ ನೀಡಲು ಆಹಾರ ಧಾನ್ಯ ಮತ್ತು ಪಡಿತರ ವಸ್ತುಗಳನ್ನು ಮಾತ್ರ ಒದಗಿಸಲಾಗುತ್ತದೆ. ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ದುರ್ಬಳಕೆ ಮಾಡುವ ಉದ್ದೇಶಕ್ಕಾಗಿಯೇ ನೇರವಾಗಿ ಹಣ ಪಡೆದುಕೊಂಡಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕಿದೆ’ ಎಂದರು.
ಪ್ರಚೋದನೆಗೆ ಒಳಗಾಗಿ ಮಕ್ಕಳು ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಕಲ್ಲಡ್ಕ ಶಾಲೆ ಬಡತನದಲ್ಲೇನೂ ಇಲ್ಲ. ಬಾಲಿವುಡ್ ನಟರು, ದೇಶದ ದೊಡ್ಡ ಬಂಡವಾಳಷಾಹಿಗಳಿಂದ ಟ್ರಸ್ಟ್‌ನವರು ಅಪಾರ ದೇಣಿಗೆ ಪಡೆದಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲುವಾಸ ಅನುಭವಿಸಿದ ಜಿ.ಜನಾರ್ದನ ರೆಡ್ಡಿ ಅವರಿಂದಲೂ ದೇಣಿಗೆ ಪಡೆಯಲಾಗಿದೆ. ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 20 ಶಾಲೆಗಳಿಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಏಕೆ ಯಾರೂ ಪ್ರತಿಭಟನೆ ನಡೆಸಿರಲಿಲ್ಲ ಎಂದು ಪ್ರಶ್ನಿಸಿದರು.
ಕಲ್ಲಡ್ಕ ಶಾಲೆಯ 100 ಮೀಟರ್ ದೂರದಲ್ಲೇ ಸರ್ಕಾರಿ ಶಾಲೆ ಇದೆ. ಅಲ್ಲಿಗೆ ಮಕ್ಕಳನ್ನು ಕಳುಹಿಸಿದರೆ ಸಮವಸ್ತ್ರ, ಶೂ, ಪುಸ್ತಕ, ಬಿಸಿಯೂಟ, ಸೈಕಲ್ ಎಲ್ಲವೂ ಸರ್ಕಾರದಿಂದ ದೊರೆಯುತ್ತದೆ. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.