ADVERTISEMENT

ಕಸ ಗುಡಿಸುತ್ತೇನೆ; ದಸರಾ ಉದ್ಘಾಟಿಸಲ್ಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2015, 19:47 IST
Last Updated 21 ಸೆಪ್ಟೆಂಬರ್ 2015, 19:47 IST

ಚಿಕ್ಕಬಳ್ಳಾಪುರ: ‘ಮೈಸೂರು ದಸರಾ ಉದ್ಘಾಟಿಸಲು ಮುಖ್ಯಮಂತ್ರಿ ಸೇರಿದಂತೆ  ಅನೇಕ ಸಚಿವರು ಕೋರಿದ್ದಾರೆ. ಆದರೆ ಅವರು ಬಯಸಿದಲ್ಲಿ ವಿಧಾನಸೌಧದಲ್ಲಿ ಕಸ ಗುಡಿಸುತ್ತೇನೆಯೇ ಹೊರತು ದಸರಾ ಉದ್ಘಾಟಿಸುವುದಿಲ್ಲ’ ಎಂದು ರೈತ ಮುಖಂಡ ಕಡಿದಾಳ ಶಾಮಣ್ಣ ಸ್ಪಷ್ಟವಾಗಿ ಹೇಳಿದರು.

ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೈಗೊಂಡಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಸೋಮವಾರ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ನಾನಷ್ಟೇ ಅಲ್ಲ, ರೈತರು ಯಾರೂ ದಸರಾಕ್ಕೆ ಬರುವುದಿಲ್ಲ. ಭಾಗವಹಿಸುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಬರಗಾಲ ಆವರಿಸಿದೆ. ರೈತರ ಆತ್ಮಹತ್ಯೆ ಕೊನೆಗೊಂಡಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಯಾಗಿಲ್ಲ. ಶಾಶ್ವತ ನೀರಾವರಿ ಯೋಜನೆ ಸೇರಿದಂತೆ ಯಾವ ನೀರಾವರಿ ಯೋಜನೆ ಕೂಡ ಜಾರಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಸರಾ ಉದ್ಘಾಟಿಸಲು ಮನಸ್ಸು ಇಚ್ಛಿಸುತ್ತಿಲ್ಲ. ಅದಕ್ಕಾಗಿಯೇ ದಸರಾ ಉದ್ಘಾಟಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಅದರಂತೆಯೇ ನಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯಿದ್ದಲ್ಲಿ ರೈತರು, ರೈತ ಮುಖಂಡರನ್ನು ಕರೆದು ಸಭೆ ನಡೆಸಬೇಕು. ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
*
ಮುಖ್ಯಮಂತ್ರಿ ಆಹ್ವಾನ, ಕಡಿದಾಳ ಸಿಟ್ಟು
ರೈತ ಮುಖಂಡ ಕಡಿದಾಳ ಶಾಮಣ್ಣ ಅವರನ್ನು  ದಸರಾ ಉದ್ಘಾಟನೆಗೆ ಆಹ್ವಾನಿಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು.  ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದ ಕಚೇರಿಯಿಂದ ಶಾಮಣ್ಣ ಅವರಿಗೆ ದೂರವಾಣಿ ಕರೆ ಮಾಡಿ ದಸರಾ ಉದ್ಘಾಟಿಸುವಂತೆ ಕೋರಿದರು.

‘ನೀವಿದ್ದಾಗಲೇ ರೈತರ ಸಮಸ್ಯೆ ಬಗೆಹರಿಯದಿದ್ದರೆ ಇನ್ನು ಯಾವಾಗ ಬಗೆಹರಿದೀತು? ಎರಡೂವರೆ ವರ್ಷದಲ್ಲಿ ಸರ್ಕಾರ ರೈತರಿಗಾಗಿ ಏನೂ ಮಾಡಿಲ್ಲ. ರೈತರು ಸಾಯುತ್ತಿದ್ದಾರೆ. ನನಗೆ ಮೊದಲಿಂದಲೂ ಇಂತಹ ಸಭೆ ಸಮಾರಂಭವೆಂದರೆ ಅಪಥ್ಯ. ದಸರಾ ಉದ್ಘಾಟನೆಯಲ್ಲಿ ಭಾಗವಹಿಸಲು ಇಷ್ಟವಿಲ್ಲ’ ಎಂದು ಶಾಮಣ್ಣ  ಮುಖ್ಯಮಂತ್ರಿಗಳ ಕೋರಿಕೆಯನ್ನು  ತಿರಸ್ಕರಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.