ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಧ್ಯದ ಜಂಗೀಕುಸ್ತಿಯಂತೆ ನಡೆದಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು ‘ಕೈ’ಗೆ ಮೊಸರ ಕುಡಿಕೆ, ‘ಕಮಲ’ಕ್ಕೆ ಕೆಸರಿನ ತಡಿಕೆ ಸಿಕ್ಕಂತಾಗಿದೆ.
ಭಾರಿ ಅಂತರದಿಂದಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ವಿಜಯಮಾಲೆ ಕೊರಳಿಗೆ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಮಹಾ ದಿಗ್ವಿಜಯ, ಕಾಂಗ್ರೆಸ್ ಮುಕ್ತ ಭಾರತ ಸಂಕಲ್ಪಕ್ಕೆ ನಾಂದಿ ಎಂದು ಬೀಗುತ್ತಿದ್ದ ಕಮಲ ಪಡೆಗೆ ಈ ಉಪಚುನಾವಣೆ ಫಲಿತಾಂಶ ಒಂದರ್ಥದಲ್ಲಿ ಧರ್ಮದೇಟು ಕೊಟ್ಟಂತಾಗಿದೆ.
2018ರಲ್ಲಿ ಕರ್ನಾಟಕದಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿ ಫಲಿತಾಂಶ ಎಂದು ನಂಬಿಕುಳಿತಿದ್ದ ಬಿಜೆಪಿ ನಾಯಕರಿಗೆ ಈ ಫಲಿತಾಂಶ ಇಂಗು ತಿನ್ನಿಸಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ಅವರ ಆಳ್ವಿಕೆಗೆ ಕೊನೆಹಾಡುವ ಕ್ಷಣವೂ ಶುರುವಾಗಲಿದೆ ಎಂದು ನೆಚ್ಚಿಕುಳಿತಿದ್ದ ಕಾಂಗ್ರೆಸ್ ಭಿನ್ನರ ಬಣಕ್ಕೂ ಈ ಫಲಿತಾಂಶ ಆಘಾತ ತಂದಿದೆ. ಮಂತ್ರಿ ಮಂಡಲ ಪುನಾರಚನೆಯಿಂದ ಕಾಂಗ್ರೆಸ್ ನಲ್ಲಿ ಮಡುಗಟ್ಟಿದ್ದ ಅಸಮಾಧಾನ, ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಒಳಬೇಗುದಿಯಲ್ಲಿ ಪಕ್ಷದ ಆಂತರ್ಯದಲ್ಲಿ ಪಡಿಮೂಡಿದ್ದ ಭಿನ್ನಮತವನ್ನೂ ಈ ಫಲಿತಾಂಶ ಅದುಮಿ ಹಾಕಲಿದೆ.
ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆ, ಜಾಫರ್ ಷರೀಫ್, ಜನಾರ್ದನ ಪೂಜಾರಿ, ಎಚ್.ವಿಶ್ವನಾಥ್ ಅಂತಹ ಕೈ ಪಾಳಯದ ಹಿರಿ ತಲೆಯಾಳುಗಳು ಸಿದ್ದರಾಮಯ್ಯ ವಿರುದ್ಧ ಮೊಳಗಿಸಿದ್ದ ಅತೃಪ್ತಿ, ಆಕ್ರೋಶಗಳು ಕಾಂಗ್ರೆಸ್ ಅಥವಾ ಕಾಂಗ್ರೆಸ್ ಪಕ್ಷದ ಮತದಾರರ ಮೇಲೆ ಪ್ರಭಾವ ಬೀರಿಲ್ಲ ಎಂಬುದನ್ನು ಈ ಚುನಾವಣೆ ಸಾಬೀತು ಪಡಿಸಿದೆ.
ಕಂದಾಯ ಸಚಿವ ಸ್ಥಾನದಿಂದ ಕಿತ್ತೊಗೆದಿದ್ದರಿಂದ ಸಿದ್ದರಾಮಯ್ಯ, ಪರಮೇಶ್ವರ್ ವಿರುದ್ಧ ಬಂಡೆದ್ದಿದ್ದ ವಿ. ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ನಂಜನಗೂಡು ಕ್ಷೇತ್ರಕ್ಕೆ ಅಕಾಲಿಕ ಉಪಚುನಾವಣೆ ಬಂತು. ಸಿದ್ದರಾಮಯ್ಯ ವಿರುದ್ಧ ಕೆಂಡಕಾರುತ್ತಿದ್ದ ಪ್ರಸಾದ್‌ರ ಹರಿತ ನಾಲಿಗೆ ಬಿಜೆಪಿಗೆ ಆಸರೆಯಾಗಲಿದೆ ಎಂಬ ಭರವಸೆಯೊಂದಿಗೆ ಯಡಿಯೂರಪ್ಪ ಅವರೇ ಮುಂದೆ ನಿಂತು, ಧಾವಂತದಿಂದ ಪ್ರಸಾದ್‌ರನ್ನು ಬಿಜೆಪಿಗೆ ಬರಮಾಡಿಕೊಂಡರು. ಅಲ್ಲಿಯವರೆಗೂ ಪ್ರಸಾದ್ ಬಗ್ಗೆ ಅನುಕಂಪ ದೊಡ್ಡ ಮಟ್ಟದಲ್ಲಿಯೇ ಇತ್ತು. ಯಾವಾಗ ಅವರ ಬಿಜೆಪಿಯ ಹೊಸ್ತಿಲು ತುಳಿದರೋ ಆಗ ರಾಜಕೀಯ ಸಮೀಕರಣ ಬದಲಾಯಿತು.
ನಂಜನಗೂಡಿನಲ್ಲಿ ಚುನಾವಣೆ ನಡೆದರೆ ಪ್ರಸಾದ್ ಮತ್ತು ಸಿದ್ದರಾಮಯ್ಯ ಮಧ್ಯದ ಹಣಾಹಣಿ ಎಂದೇ ಭಾವಿಸಲಾಗಿತ್ತು. ಆದರೆ, ಬಿಜೆಪಿಗೆ ಸೇರಿದೊಡನೆ ಚಿತ್ರಣ ಬದಲಾಯಿತು. ಪ್ರಸಾದ್ ಉತ್ಸವಮೂರ್ತಿಯಾದರೆ ಯಡಿಯೂರಪ್ಪ ಅಭ್ಯರ್ಥಿಯಂತೆ ಭಾಸವಾಗತೊಡಗಿದರು. ಸಿದ್ದರಾಮಯ್ಯ ಸಹಜವಾಗಿ ಅಖಾಡಕ್ಕೆ ಇಳಿದರು. ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವ ಹೊತ್ತಿಗೆ ನಂಜನಗೂಡು ಕ್ಷೇತ್ರ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮಧ್ಯದ ರಣಾಂಗಣವಾಗಿ ಪರಿವರ್ತಿತವಾಗಿಬಿಟ್ಟಿತು.
ಯಡಿಯೂರಪ್ಪ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದು, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾದ ಬಳಿಕ ರಾಜ್ಯದಲ್ಲಿ ನಡೆದ ಮೊದಲ ಉಪಚುನಾವಣೆ ಇದಾಗಿತ್ತು. ಹೀಗಾಗಿ ಯಡಿಯೂರಪ್ಪಗೆ ತನ್ನ ಸಾಮರ್ಥ್ಯ ಪ್ರದರ್ಶಿಸುವ ಯುದ್ಧಭೂಮಿ ಇದಾಗಿತ್ತು. ಅದೇ ಹೊತ್ತಿಗೆ ಎಚ್.ಎಸ್. ಮಹದೇವಪ್ರಸಾದ್ ಅಕಾಲಿಕ ನಿಧನರಾಗಿದ್ದರಿಂದ ಗುಂಡ್ಲುಪೇಟೆ ಕ್ಷೇತ್ರಕ್ಕೂ ಉಪಚುನಾವಣೆ ನಿಗದಿಯಾಯಿತು. ಒಂದರ ಜತೆಗೆ ಮತ್ತೊಂದು ಸವಾಲು ಬಿಜೆಪಿಗೆ ಎದುರಾಯಿತು. ಎರಡೂ ಕ್ಷೇತ್ರಗಳನ್ನು ಗೆದ್ದು ತೋರಿಸುವ ಅನಿವಾರ್ಯತೆಗೆ ಯಡಿಯೂರಪ್ಪ ಸಿಲುಕಿದರು. ಹೀಗಾಗಿ 20 ದಿನಗಳ ಕಾಲ ಯಡಿಯೂರಪ್ಪ ನಂಜನಗೂಡು, ಗುಂಡ್ಲುಪೇಟೆ ಬಿಟ್ಟು ಹೊರಬರಲೇ ಇಲ್ಲ.
ವಿಚಿತ್ರ ಎಂದರೆ ಕಳೆದ ಎರಡು ಚುನಾವಣೆಗಳಲ್ಲಿ ನಂಜನಗೂಡು ಕ್ಷೇತ್ರದಿಂದ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ ಪರ್ಯಾಯ ನಾಯಕತ್ವವನ್ನು ಕಾಂಗ್ರೆಸ್ ಸೃಷ್ಟಿಸಿರಲಿಲ್ಲ. ಪ್ರಸಾದ್ ಬಿಜೆಪಿಗೆ ಸೇರುತ್ತಿದ್ದಂತೆ ಈ ಕ್ಷೇತ್ರದಲ್ಲಿ ಶೂನ್ಯತೆ ಕಾಡಲಾರಂಭಿಸಿತು. ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಪುತ್ರ ಸುನಿಲ್ ಬೋಸ್ ನಂಜನಗೂಡು ಕ್ಷೇತ್ರದ ಉತ್ತರಾಧಿಕಾರಿಯಾಗುವ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ಹೈಕಮಾಂಡ್ ಅದಕ್ಕೆ ಸಮ್ಮತಿ ಸೂಚಿಸಲಿಲ್ಲ. ಹೀಗಾಗಿ ಚುನಾವಣೆ ಘೋಷಣೆಯಾಗುವವರೆಗೂ ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇರಲಿಲ್ಲ. ಕೊನೆಗಳಿಗೆಯಲ್ಲಿ ಜೆಡಿಎಸ್ ನಿಂದ ಅಕ್ಷರಶಃ ಎರವಲು ಪಡೆದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್‌ಗೆ ಕರೆತಂದು ಕಣಕ್ಕೆ ಇಳಿಸಲಾಯಿತು.
ನಾಮಪತ್ರ ಸಲ್ಲಿಕೆಯಾಗುವವರೆಗೂ ಈ ಕ್ಷೇತ್ರದಲ್ಲಿ ಪ್ರಸಾದ್ ಮತ್ತು ಯಡಿಯೂರಪ್ಪ ಅಬ್ಬರ ಜೋರಾಗಿತ್ತು. ಇನ್ನೇನು ಗೆಲುವು ಎರಡೇ ಗೇಣು ಎಂದು ಬಿಜೆಪಿ ನಾಯಕರು ನೆಚ್ಚಿಕೊಂಡಿದ್ದರು. ಆದರೆ, ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ನಂಜನಗೂಡು, ಗುಂಡ್ಲುಪೇಟೆಗೆ ದೌಡಾಯಿಸಿದರು. ಆಗ, ಚುನಾವಣೆಯ ಖದರ್ ಬೇರೆಯೇ ಆಯಿತು.
ಅತ್ತ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಹದೇವಪ್ರಸಾದ್ ಪತ್ನಿ ಮೋಹನಕುಮಾರಿ ಕಣಕ್ಕೆ ಇಳಿಸಲು, ಅನುಕಂಪದ ಆಧಾರದ ಮೇಲೆ ಗೆಲುವು ದಕ್ಕಿಸಿಕೊಳ್ಳಲು ಸಿದ್ದರಾಮಯ್ಯ ಅಣಿಯಾಗಿದ್ದರು. ಆದರೆ, ಅದೇ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿಯಿಂದ ಸ್ಫರ್ಧಿಸಿ ಸೋತಿದ್ದ ನಿರಂಜನಕುಮಾರ್ ಗೂ ಅದೇ ರೀತಿಯ ಅನುಕಂಪ ಇತ್ತು. ಅಲ್ಲದೆ, ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿರುವ ಲಿಂಗಾಯತ ಮತಗಳು ಸಿಕ್ಕಿದರೆ ನಿರಂಜನ ಗೆಲುವು ಸಲೀಸು ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಜಾಗೃತರಾದ ಸಿದ್ದರಾಮಯ್ಯ, ಚುನಾವಣೆ ಕಾರ್ಯತಂತ್ರದಲ್ಲಿ ನಿಪುಣರಾದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಈ ಚುನಾವಣೆಯ ಉಸ್ತುವಾರಿ ವಹಿಸಿಬಿಟ್ಟರು. ಮೋಹನಕುಮಾರಿ ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಡಿ.ಕೆ.ಶಿವಕುಮಾರ್ ಹೆಗಲಿಗೆ ಹಾಕಿಬಿಟ್ಟರು. ಫಲಿತಾಂಶದಲ್ಲಿ ಇದು ನಿರ್ಣಾಯಕವಾಗಿಬಿಟ್ಟಿತು.
ಗೆಲುವಿಗೆ ಕಾರಣಗಳೇನು?
ಈ ಚುನಾವಣೆಯನ್ನು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡು, ಮುಂದಾಲೋಚನೆಯಿಂದ ವರ್ತಿಸಿದ್ದು ಕಾಂಗ್ರೆಸ್ ಭರ್ಜರಿ ವಿಜಯಕ್ಕೆ ಕಾರಣವಾದ ಪ್ರಮುಖಾಂಶ.
ಸಿದ್ದರಾಮಯ್ಯನವರ ರಾಜಕೀಯ ಕರ್ಮಭೂಮಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದೇ ಆದರೆ, ಪಕ್ಷ ಮತ್ತು ಸರ್ಕಾರದಲ್ಲಿ ಅವರ ಹಿಡಿತ ಸಡಿಲವಾಗುತ್ತಿತ್ತು. ಅವರ ವಿರೋಧಿ ಬಣ ಮೇಲುಗೈ ಸಾಧಿಸುತ್ತಿತ್ತು. ಇದನ್ನು ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಪ್ರಸಾದ್ ರಾಜೀನಾಮೆ ನೀಡುತ್ತಿದ್ದಂತೆ ತಮ್ಮ ಆಪ್ತ ಮಹದೇವಪ್ಪ ಅವರನ್ನು ನಂಜನಗೂಡಿಗೆ ಕಳುಹಿಸಿ ರಣತಂತ್ರ ಹೆಣೆದರು. ದೇವೇಗೌಡರಿಂದ ಕಲಿತ ರಾಜಕೀಯ ಪಟ್ಟುಗಳನ್ನು ಸಿದ್ದರಾಮಯ್ಯ ಸಮರ್ಥವಾಗಿ ಈ ಚುನಾವಣೆಯಲ್ಲಿ ಬಳಸಿದರು.
ಪ್ರಸಾದ್ ಬಿಜೆಪಿ ಸೇರಿದ್ದರಿಂದಾಗಿ ಅನುಕೂಲ ಮತ್ತು ಅನಾನುಕೂಲ ಎರಡೂ ಒದಗಿತು. ತಮ್ಮ ಗೆಲುವಿಗೆ ಕಾರಣವಾಗಿದ್ದ ದಲಿತ ಮತಗಳು, ಯಡಿಯೂರಪ್ಪನವರ ಬಲದಿಂದ ಲಿಂಗಾಯತ ಮತಗಳು ಕೈ ಹಿಡಿದು ಮುನ್ನಡೆಸುತ್ತವೆ ಎಂದು ಪ್ರಸಾದ್ ನಂಬಿದ್ದರು. ಆದರೆ, ಮಹದೇವಪ್ಪ ಮತ್ತು ಸಿದ್ದರಾಮಯ್ಯ ಹೆಣೆದ ತಂತ್ರದಿಂದಾಗಿ ದಲಿತ, ಹಿಂದುಳಿದ ಮತಗಳು ಪ್ರಸಾದ್ ನೆರವಿಗೆ ಬರಲಿಲ್ಲ. ಬದನವಾಳು ಘಟನೆಯನ್ನು ಪ್ರಸಾದ್ ಮತ್ತೆ ಪ್ರಸ್ತಾಪಿಸಿದ್ದರಿಂದಾಗಿ ಯಡಿಯೂರಪ್ಪ ಎಷ್ಟೇ ಹೆಣಗಿದರೂ ಲಿಂಗಾಯತರು ಪ್ರಸಾದ್ ಬೆನ್ನಿಗೆ ನಿಲ್ಲಲೇ ಇಲ್ಲ.
ಇದರ ಜತೆಗೆ, ಜೆಡಿಎಸ್ ನಿಂದ 2013ರಲ್ಲಿ ಸ್ಪರ್ಧಿಸಿ ಸೋತಿದ್ದ ಕಳಲೆ ಕೇಶವಮೂರ್ತಿ ಕಾಂಗ್ರೆಸ್‌ಗೆ ಬಂದಿದ್ದು ಹೆಚ್ಚು ಅನುಕೂಲವಾಯಿತು. ಕಳೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದ ಕಳಲೆಗೆ ತನ್ನ ಸ್ವಂತ ಮತಗಳ ಜತೆ, ಕಾಂಗ್ರೆಸ್ ಅಧಿಕಾರದ ಬಲವೂ ಸಿಕ್ಕಿತು. ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸದೇ ಇರುವ ತಂತ್ರಗಾರಿಕೆಯ ನಿರ್ಧಾರವನ್ನು ದೇವೇಗೌಡ, ಕುಮಾರಸ್ವಾಮಿ ತೆಗೆದುಕೊಂಡರು. ಇದರಿಂದಾಗಿ ಜೆಡಿಎಸ್ ಸಾಂಪ್ರದಾಯಿಕ ಮತಗಳು ಕಳಲೆಗೆ ಬಿದ್ದವು. ಇದು ಗೆಲುವಿಗೆ ಸುಲಭದ ದಾರಿಯಾಯಿತು.
ಈ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಚಾಣಾಕ್ಷತೆ, ಅಧಿಕಾರದ ಬಲದ ಜತೆಗೆ ದೇವೇಗೌಡರ ರಾಜಕೀಯ ನಡೆ ಕೂಡ ಹೆಚ್ಚಿನ ಮಹತ್ವ ಪಡೆದಿದೆ. ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕದೇ ಇರಲು ನಿರ್ಧರಿಸಿದ ದೇವೇಗೌಡರು, ತನ್ನದೇ ರಾಜಕೀಯ ಲೆಕ್ಕಾಚಾರವನ್ನೂ ಹಾಕಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ರಾಜ್ಯದಲ್ಲಿ ಬಿಜೆಪಿ ಅಲೆ ಆರಂಭವಾಗಿದೆ ಎಂಬ ಸ್ಪಷ್ಟ ಸಂದೇಶ ಜನತೆಗೆ ರವಾನೆಯಾದಂತಾಗುತ್ತದೆ.
ಇದು 2018ರಲ್ಲಿ ನಡೆಯಲಿರುವ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕಾಂಗ್ರೆಸ್ ಗೆದ್ದರೂ ಪರವಾಗಿಲ್ಲ. ಬಿಜೆಪಿ ಗೆಲ್ಲಕೂಡದು ಎಂಬ ನಿಶ್ಚಯಕ್ಕೆ ದೇವೇಗೌಡರು ಬಂದಿದ್ದರು. ವಿಧಾನಸಭೆ ಚುನಾವಣೆಗೆ ಇನ್ನೂ 10 ತಿಂಗಳು ಬಾಕಿಯಿದ್ದು, ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ಇದೆ. ಹಳೆ ಮೈಸೂರು ಭಾಗದಲ್ಲಿ ಈಗ ಕಾಂಗ್ರೆಸ್ ಗೆದ್ದರೂ ವಿಧಾನಸಭೆ ಚುನಾವಣೆ ವೇಳೆಗೆ ಅದು ಉಲ್ಟಾ ಆಗಲಿದೆ. ಈಗ ಬಿಜೆಪಿ ಗೆದ್ದರೆ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರನ್ನು ಹದ್ದುಬಸ್ತಿನಲ್ಲಿ ಇಡಲಾಗುವುದಿಲ್ಲ. ಇದೇ ಫಲಿತಾಂಶ ಪುನರಾವರ್ತನೆಯಾಗುವ ಅಪಾಯ ಇರುತ್ತದೆ. ಇದನ್ನು ತಪ್ಪಿಸಬೇಕಾದರೆ ಈ ಚುನಾವಣೆಯಲ್ಲಿ ನಿರ್ಲಿಪ್ತರಾಗುವುದು ಸೂಕ್ತ ಎಂಬ ತೀರ್ಮಾನಕ್ಕೆ ಜೆಡಿಎಸ್ ಬಂದು ಬಿಟ್ಟಿತ್ತು.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿಕೆ ನೀಡಿದ್ದರು. ಅದಾದ ಮರುದಿನವೇ ದೇವೇಗೌಡ, ಕುಮಾರಸ್ವಾಮಿ ಇದನ್ನು ಅಲ್ಲಗಳೆದರು. ಜೆಡಿಎಸ್ ಬೆಂಬಲ ಕಾಂಗ್ರೆಸ್‌ಗೆ ಎಂದು ಸಚಿವ ಮಹದೇವಪ್ಪ ಹೇಳಿಕೆ ನೀಡಿದ್ದರು. ಆಗ ಗೌಡರು ಪ್ರತಿಕ್ರಿಯಿಸಲೇ ಇಲ್ಲ. ಹೇಳಿಕೆಗಳ ವಿಷಯದಲ್ಲಿ ಗೌಡರು ತೆಗೆದುಕೊಂಡ ನಿಲುವು ಅವರ ಪಕ್ಷದ ಅಂತರಂಗಕ್ಕೆ ಕನ್ನಡಿ ಹಿಡಿಯುತ್ತವೆ.
ಗುಂಡ್ಲುಪೇಟೆಯಲ್ಲಿ ಮೋಹನಕುಮಾರಿ ಗೆಲ್ಲುವುದು ಕಷ್ಟಕರವಾಗಿತ್ತು. ಆದರೆ, ಬಿಜೆಪಿ ಸಂಸದ ಪ್ರತಾಪ ಸಿಂಹ ಮೋಹನಕುಮಾರಿ ಅವರ ಕುರಿತು ನೀಡಿದ ಹೇಳಿಕೆ ಅವರ ಗೆಲುವಿಗೆ ರಹದಾರಿ ಮಾಡಿಕೊಟ್ಟಿತು. ಮಹಿಳೆಯರೆಲ್ಲ ಒಟ್ಟಾಗಲು ಹಾಗೂ ಲಿಂಗಾಯತ ಮತಗಳು ಕ್ರೋಡೀಕರಣವಾಗಲು ಇದು ಕಾರಣವಾಯಿತು.
ಪರಿಣಾಮಗಳೇನು?
ಸಿದ್ದರಾಮಯ್ಯ ಮೇಲುಗೈ:
ವಿಧಾನಸಭೆ ಚುನಾವಣೆಗೆ ಇನ್ನು 10 ತಿಂಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಎರಡೂ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಸಿದ್ದರಾಮಯ್ಯಗೆ ಆನೆಬಲ ತಂದುಕೊಟ್ಟಿದೆ.
*ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ನನ್ನ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇದು ಮತ್ತಷ್ಟು ಬಲ ತಂದುಕೊಡಲಿದೆ.
*ಪಂಜಾಬ್ ಹೊರತು ಬೇರೆ ಪ್ರಬಲ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ನಡೆದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸ ಹೈಕಮಾಂಡ್ ನಲ್ಲಿ ಮೂಡಲು ಇದು ಕಾರಣವಾಗಲಿದೆ.
*ಕಾಂಗ್ರೆಸ್ ನಲ್ಲಿರುವ ಭಿನ್ನಮತೀಯರ ಬಾಯಿ ಮುಚ್ಚಿಸಿ, ಅವರನ್ನು ಮೂಲೆಗುಂಪು ಮಾಡಲು ಸಿದ್ದರಾಮಯ್ಯಗೆ ಇದು ಅಸ್ತ್ರವಾಗಲಿದೆ.
*ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ್ದ, ಅವರನ್ನು ಕಟ್ಟಿ ಅರಬ್ಬೀ ಸಮುದ್ರಕ್ಕೆ ಎಸೆಯದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಹೇಳುತ್ತಿದ್ದ ಜನಾರ್ದನ ಪೂಜಾರಿ ಅಂತಹ ಹಿರಿಯ ನಾಯಕರ ಬಾಯಿಯನ್ನು ಈ ಫಲಿತಾಂಶ ಕಟ್ಟಿ ಹಾಕಲಿದೆ.
*ಮುಂದಿನ ಚುನಾವಣೆಗೆ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆಯಾಗಬೇಕು, ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂಬ ಬೇಡಿಕೆಗಳು ತೆರೆಮರೆಗೆ ಸರಿಯಲಿವೆ.
*ಸರ್ಕಾರ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪರ, ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಭಾಗ್ಯದಂತಹ ಯೋಜನೆಗಳಿಗೆ ಜನರು ನೀಡಿದ ಮನ್ನಣೆ ಇದು ಎಂದು ಬಿಂಬಿಸಿಕೊಳ್ಳಲು ಸಿದ್ದರಾಮಯ್ಯಗೆ ಈ ಫಲಿತಾಂಶ ಅನುಕೂಲ ಮಾಡಿಕೊಡಲಿದೆ.
*ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಬಿಜೆಪಿ, ಜೆಡಿಎಸ್ ಕಡೆ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಕಾಂಗ್ರೆಸ್ ಗೆ ರಾಜ್ಯದಲ್ಲಿ ಇನ್ನೂ ಭವಿಷ್ಯವಿದೆ ಎಂದು ಶಾಸಕರು, ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಭರವಸೆ ಮೂಡಿಸಲು ಇದು ಕಾರಣವಾಗಲಿದೆ.
*ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಅಧಿಕಾರ ಸಿದ್ದರಾಮಯ್ಯ ಅವರಿಗೆ ಸಿಗಲಿದೆ.
*ಕೆಪಿಸಿಸಿ ಅಧ್ಯಕ್ಷರಾಗಿ ಜಿ. ಪರಮೇಶ್ವರ್ ಮತ್ತೊಂದು ಅವಧಿಗೆ ಮುಂದುವರಿಯಲು, ಇದು ಕಾರಣವಾಗಬಹುದು.
ಯಡಿಯೂರಪ್ಪಗೆ ಹಿನ್ನಡೆ:
ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಹೈಕಮಾಂಡ್ ಘೋಷಿಸಿರುವ ಯಡಿಯೂರಪ್ಪಗೆ ಇದು ದೊಡ್ಡ ಹಿನ್ನಡೆಯಾಗಲಿದೆ. ಪಕ್ಷದಲ್ಲಿ ಅವರ ವಿರೋಧಿ ಬಣ ಸಂಭ್ರಮಿಸಲು, ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು ಎಂಬ ಬೇಡಿಕೆಗೆ ಮತ್ತಷ್ಟು ತೀವ್ರಗೊಳ್ಳಲು ಇದು ಕಾರಣವಾಗಲಿದೆ.
*ಮಿಷನ್ 150 ಗೆಲ್ಲುವುದು ಗುರಿ, ಈ ಚುನಾವಣೆ ಬಳಿಕ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಪಲ್ಲಟ ಆಗಲಿದೆ, ಸರ್ಕಾರ ಬಿದ್ದು ಹೋಗಲಿದೆ ಎಂಬ ಯಡಿಯೂರಪ್ಪ ಭವಿಷ್ಯ ಮಸುಕಾಗಿದೆ.
*ಲಿಂಗಾಯತರು ನಿರ್ಣಾಯಕ ಮತದಾರರಾಗಿರುವ ಎರಡೂ ಕ್ಷೇತ್ರಗಳ ಪೈಕಿ ಒಂದನ್ನೂ ಗೆಲ್ಲಲಾಗದ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಹೇಗೆ ಅಧಿಕಾರಕ್ಕೆ ತಂದಾರು ಎಂಬ ಪ್ರಶ್ನೆಯನ್ನು ಅವರ ಪಕ್ಷದ ಮುಖಂಡರು ಎತ್ತಲು ಈ ಫಲಿತಾಂಶ ಸಹಕಾರಿಯಾಗಲಿದೆ.
*ಪಕ್ಷದ ಹೈಕಮಾಂಡ್ ಹಾಗೂ ಪಕ್ಷದ ಪ್ರಮುಖರ ಸಮಿತಿಯ ಗಮನಕ್ಕೆ ತರದೇ ಶ್ರೀನಿವಾಸ ಪ್ರಸಾದ್‌ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ತಪ್ಪು ಎಂದು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದರು. ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರದ ವಿರುದ್ಧ ಅಪಸ್ವರ ತೆಗೆದಿದ್ದರು. ಬಿಜೆಪಿಗೆ ಬೇರೆ ಪಕ್ಷದಿಂದ ಕರೆತರುವ ವಿಷಯದಲ್ಲಿ ಯಡಿಯೂರಪ್ಪ ಕೈಗೊಳ್ಳುತ್ತಿದ್ದ ತೀರ್ಮಾನಕ್ಕೆ ಹೈಕಮಾಂಡ್ ಅಂಕುಶ ಹಾಕಲಿದೆ.
*ಬಿಜೆಪಿಯಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹಿರಿಯ ನಾಯಕರು ಆಕ್ಷೇಪ ಎತ್ತಿದ್ದರು. ಇದು ಇನ್ನಷ್ಟು ಪ್ರಖರ ಗೊಳ್ಳಲಿದೆ.
*ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಹೈಕಮಾಂಡ್ ಗಮನಕ್ಕೆ ತಂದಿದ್ದ ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪಗೆ ಮೂಗುದಾರ ಹಾಕಿಸಿದ್ದರು. ಬ್ರಿಗೇಡ್ ಬಲವಾದರೆ ಬಿಜೆಪಿಗೆ ಶಕ್ತಿ ಬರಲಿದೆ ಎಂದು ಬಿಂಬಿಸಿಕೊಳ್ಳಲು, ಮತ್ತೆ ಬ್ರಿಗೇಡ್ ಕಟ್ಟಲು ಈಶ್ವರಪ್ಪಗೆ ಈ ಚುನಾವಣೆ ಉಮೇದು ತರಲಿದೆ.
*ಬಿಜೆಪಿಯಲ್ಲಿ ಯಡಿಯೂರಪ್ಪ ಹೇಳಿದ್ದೇ ನಡೆದರೆ ಹೀಗೆ ಆಗುವುದು. ಪಕ್ಷದ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕಮಾಂಡ್‌ಗೆ ಭಿನ್ನಮತೀಯರು ಮನವರಿಕೆ ಮಾಡಿಕೊಡಲು ಈ ಚುನಾವಣೆ ಫಲಿತಾಂಶ ಸಹಾಯ ಒದಗಿಸಲಿದೆ.
*ರಾಜ್ಯ ಬಿಜೆಪಿ ಮತ್ತು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ತೀರ್ಮಾನವನ್ನು ಯಡಿಯೂರಪ್ಪಗೆ ನೀಡದೇ, ಹೈಕಮಾಂಡ್ ಇಟ್ಟುಕೊಳ್ಳಲು ಇದು ಕಾರಣವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.