ಮೈಸೂರು: ಬೆಂಕಿಗೆ ಆಹುತಿಯಾದ ಕಾಡು ಸಹಜ ಸ್ಥಿತಿಗೆ ಮರಳಲು ಕನಿಷ್ಠವೆಂದರೂ 300 ವರ್ಷ ಹಿಡಿಯುತ್ತದೆ. ಕಾಳ್ಗಿಚ್ಚು ಕೃಷಿ ಹಾಗೂ ಹವಾಮಾನದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್ ಕಳವಳ ವ್ಯಕ್ತಪಡಿಸಿದರು.
ಕಾಳ್ಗಿಚ್ಚಿನ ದುಷ್ಪರಿಣಾಮಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು. ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವ ಇಲ್ಲದೆ ಈ ಅನಾಹುತ ತಡೆಯಲು ಅಸಾಧ್ಯವೆಂದು ಅನುಭವಗಳನ್ನು ತೆರೆದಿಟ್ಟರು.
ಚಿಕ್ಕಮಗಳೂರು ಜಿಲ್ಲೆಯ ಭಗವತಿ ಕಾಡಿಗೆ 1978ರಲ್ಲಿ ಬೆಂಕಿ ಬಿದ್ದಿತು. ಸುಮಾರು 300 ಎಕರೆ ಅರಣ್ಯ ಸಂಪೂರ್ಣ ನಾಶವಾಯಿತು. ಇತ್ತೀಚೆಗೆ ಈ ಪ್ರದೇಶದಲ್ಲಿ ಹಸಿರು ಕಾಣಿಸಿಕೊಂಡಿದೆ. ಮತ್ತಿ, ನಂದಿ ಹಾಗೂ ಹೊನ್ನೆ ತಕ್ಷಣ ಬೆಳೆಯುವುದಿಲ್ಲ. ನಾಲ್ಕು ವರ್ಷಗಳ ಹಿಂದೆ ನಾಗರಹೊಳೆಯಲ್ಲಿ ಸರ್ವನಾಶವಾದ ಕಾಡು ಮತ್ತೆ ಬೆಳೆಯಲು ಶತಮಾನಗಳೇ ಉರುಳಬೇಕು. ಈಗ ಬಂಡೀಪುರ ಅರಣ್ಯಪ್ರದೇಶದ ಸ್ಥಿತಿ ಇದಕ್ಕಿಂತ ಭಿನ್ನವಾಗಿ ಕಾಣುತ್ತಿಲ್ಲ ಎಂದರು.
ಬಿದಿರಿಗೆ ಬಿದ್ದ ಬೆಂಕಿಗೆ ಭೂಮಿಯ ಮೂರೂವರೆ ಅಡಿ ಆಳದಲ್ಲಿರುವ ಬೇರು ಕೂಡ ಭಸ್ಮವಾಗುತ್ತದೆ. 10ರಿಂದ 15 ದಿನ ಈ ಅಗ್ನಿ ನಂದುವುದಿಲ್ಲ. ತಾಪಮಾನ ಹೆಚ್ಚಾಗಿ ತೇವಾಂಶ ಕಡಿಮೆಯಾಗುತ್ತದೆ. ಈ ಭೂಮಿಯಲ್ಲಿ ಬೀಜ ಬಿದ್ದರೂ ಬೆಳೆಯುವುದಿಲ್ಲ. ವನ್ಯಜೀವಿಗಳ ಮೊಟ್ಟೆ, ಮರಿ, ಆಹಾರ, ಪೊದೆ, ಗುಹೆ ಸೇರಿ ಎಲ್ಲವೂ ನಾಶವಾಗುತ್ತವೆ. ಕಾಳ್ಗಿಚ್ಚು ಉಂಟಾದ ಪ್ರದೇಶದ 100 ಮೀಟರ್‌ವರೆಗಿನ ಸೂಕ್ಷ್ಮ ಜೀವಿಗಳು ಸರ್ವನಾಶವಾಗುತ್ತವೆ ಎಂದು ವಿವರಿಸಿದರು.
ಕಾಳ್ಗಿಚ್ಚಿನ ಬಳಿಕ ಭೂಮಿಯಲ್ಲಿ ಮೊದಲು ಬೆಳೆಯುವ ಸಸ್ಯವೇ ಕಳೆ. ಕಾಡಿನಲ್ಲಿ ವ್ಯಾಪಕವಾಗಿರುವ ಲಂಟಾನವನ್ನು ವನ್ಯಜೀವಿಗಳು ಮುಟ್ಟುವುದಿಲ್ಲ. 30 ಅಡಿಯಷ್ಟು ಎತ್ತರಕ್ಕೆ ಬೆಳೆಯಬಲ್ಲ ಲಂಟಾನ ಪ್ರಾಣಿಗಳ ಸಂಚಾರಕ್ಕೂ ತೊಡಕಾಗಿದೆ. ಬೆಂಕಿರೇಖೆ (ಫೈರ್ ಲೈನ್) ನಿರ್ಮಿಸಿದರೂ ಪ್ರಯೋಜನವಾಗುತ್ತಿಲ್ಲ. ಸಣ್ಣದೊಂದು ಕಿಡಿಗೆ ಇಡೀ ಕಾಡು ಹೊತ್ತಿ ಉರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.
ಕಾಡಂಚಿನ ಗ್ರಾಮಸ್ಥರು ಕಾಳ್ಗಿಚ್ಚು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ನೆರವಾಗುತ್ತಿದ್ದರು. ಈ ಸಂಬಂಧಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದು, ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ನಡುವೆ ಕಂದಕ ನಿರ್ಮಾಣವಾಗಿದೆ. ಕಾಡು ಹೊತ್ತಿ ಉರಿಯುತ್ತಿದ್ದರೂ, ಅರಣ್ಯ ಇಲಾಖೆ ಸಿಬ್ಬಂದಿಯಷ್ಟೇ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಬೇಕು. ಕಾಡಂಚಿನ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ನಡುವೆ ಬಾಂಧವ್ಯ ಬೆಸೆಯಬೇಕು ಎಂದು ಸಲಹೆ ನೀಡಿದರು.
ಸಿಬ್ಬಂದಿ ನೇಮಕಾತಿ ಕುರಿತು ಸರ್ಕಾರದ ಮನವೊಲಿಸುವಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಲೋಪವೂ ಇದೆ. 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುವುದಕ್ಕೂ ಮುನ್ನವೇ ರಾಜ್ಯದಲ್ಲಿ ಈ ಕಾಯ್ದೆ ಬೇರೊಂದು ರೂಪದಲ್ಲಿ ಅನುಷ್ಠಾನಗೊಂಡಿತ್ತು. ಅರಣ್ಯ ಸಂರಕ್ಷಣೆಯತ್ತ ಸರ್ಕಾರ ಗಮನಹರಿಸುವುದು ಈಗ ಕಡಿಮೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅರಣ್ಯ ಇಲಾಖೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಡಿಸಿಎಫ್) ಇದ್ದ ಅಧಿಕಾರ ಮೊಟಕುಗೊಂಡಿದೆ. ಅಧಿಕಾರಸ್ಥರ ನಿರ್ದೇಶನಕ್ಕೆ ತಲೆಬಾಗುವ ಅನಿವಾರ್ಯ ಇದೆ. ವನಪಾಲಕರು, ಅರಣ್ಯ ರಕ್ಷಕರನ್ನು ಮನಸೋ ಇಚ್ಛೆ ವರ್ಗಾವಣೆ ಮಾಡಲಾಗುತ್ತಿದೆ. ಇದು ಅರಣ್ಯ ಇಲಾಖೆಯ ಕಾರ್ಯಕ್ಷಮತೆ ಕುಗ್ಗಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.