ADVERTISEMENT

ಕಾರ್ಪೊರೇಟ್ ಜಗತ್ತಿನ ಲೇಖಕರು ಸಾಹಿತಿಗಳಲ್ಲವೇ?

​ಪ್ರಜಾವಾಣಿ ವಾರ್ತೆ
Published 27 ಜನವರಿ 2013, 19:59 IST
Last Updated 27 ಜನವರಿ 2013, 19:59 IST

ಧಾರವಾಡ: ಸಾಹಿತ್ಯ ಕ್ಷೇತ್ರವನ್ನು ಕಾರ್ಪೊರೇಟ್ ಸಂಸ್ಕೃತಿ ಆಕ್ರಮಿಸಿಕೊಳ್ಳುತ್ತಿದೆ ಎಂಬ ಆರೋಪಗಳ ನಡುವೆ ಭಾನುವಾರ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ನಡೆದ `ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು' ಗೋಷ್ಠಿಯು,  ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡಿ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಲೇಖಕರು ಮತ್ತು ಹಳೆ ತಲೆಮಾರಿನ ಸಾಹಿತಿಗಳು, ವಿಮರ್ಶಕರ ನಡುವೆ ಚರ್ಚೆಗೆ ವೇದಿಕೆಯಾಯಿತು.

`ಕಾರ್ಪೊರೇಟ್ ಸಾಹಿತಿಗಳು ಅದರ ಪ್ರತಿಪಾದಕರೋ?' ಎಂಬ ಚಂದ್ರಶೇಖರ ಪಾಟೀಲರ ಪ್ರಶ್ನೆ ಹಾಗೂ `ಪಾಪ ಪರಿಮಾರ್ಜನೆಗಾಗಿ ಇವರು ಸಾಹಿತ್ಯಕ್ಕೆ ಬಂದಿದ್ದಾರೆಯೇ?' ಎನ್ನುವ ಡಾ. ಜಿ.ಎಸ್.ಆಮೂರ ಅವರ ಸಂಶಯವು ಗೋಷ್ಠಿಯಲ್ಲಿದ್ದ ಕಥೆಗಾರ ವಿವೇಕ ಶಾನುಭಾಗ, ವಸುಧೇಂದ್ರ, ನಾಗರಾಜ ವಸ್ತಾರೆ ಹಾಗೂ ಎಸ್.ಆರ್.ವಿಜಯಶಂಕರ್ ಅವರನ್ನು ಕ್ಷಣಕಾಲ ವಿಚಲಿತರನ್ನಾಗಿ ಮಾಡಿತು.

`ಇವರನ್ನು ನಾವು ಅನುಮಾನದಿಂದಲೇ ನೋಡಬೇಕಿದೆ. ಕಾರ್ಪೊರೇಟ್ ಜಗತ್ತಿನ ಸಕಲ ಸವಲತ್ತು ಪಡೆದುಕೊಂಡು, ಆರ್ಥಿಕವಾಗಿ ಸಬಲರಾದ ಇವರು ಈಗ ಸಾಹಿತ್ಯದಲ್ಲಿ ಹೆಸರು, ಕೀರ್ತಿ ಗಳಿಸಲು ಸಾಹಿತ್ಯ ಕೃಷಿ ಮಾಡುತ್ತಿರುವಂತಿದೆ. ಪಾಪ ಪರಿಮಾರ್ಜನೆಗೆ ಸಾಹಿತ್ಯಕ್ಕೆ ಬಂದಿದ್ದಾರೋ ಹೇಗೆ? ಇವರು ಯಾರೂ ನಮ್ಮ ಹಿಂದಿನ ಸಾಹಿತಿಗಳಂತೆ ಬಡತನ, ಕಷ್ಟ ಕಂಡವರಲ್ಲ, ಇವರು ನಮ್ಮ ಪ್ರಾತಿನಿಧಿಕ ಸಾಹಿತಿಗಳಲ್ಲ' ಎನ್ನುವ ಅನುಮಾನವನ್ನು ಹಿರಿಯ ವಿಮರ್ಶಕ ಡಾ. ಆಮೂರ ವ್ಯಕ್ತಪಡಿಸಿದರು.

ಮರು ಪ್ರಶ್ನೆ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ, `ಹಾಗಿದ್ದರೆ ಲಕ್ಷಾಂತರ ರೂಪಾಯಿ ಯುಜಿಸಿ ವೇತನ ಪಡೆಯುವ ವಿಶ್ವವಿದ್ಯಾಲಯಗಳ ಉಪನ್ಯಾಸಕರು, ಕೋಟ್ಯಂತರ ರೂಪಾಯಿ ಲೂಟಿ ಮಾಡುವ ಸರ್ಕಾರಿ ನೌಕರರನ್ನು ನೀವು ಯಾವ ಗುಂಪಿಗೆ ಸೇರಿಸುತ್ತೀರಿ? ಅವರು ಮಾಡುವ ಕೆಲಸ ಅಥವಾ ಸಾಹಿತ್ಯ ಕೃಷಿಗೆ ಏನೆನ್ನುವಿರಿ' ಎಂದು ಮರು ಪ್ರಶ್ನೆ ಹಾಕಿದರು.

ಆಮೂರರ ಸಂದೇಹಕ್ಕೆ ಉತ್ತರಿಸಿದ ವಿಮರ್ಶಕ ಎಸ್.ಆರ್.ವಿಜಯಶಂಕರ್, `ಕಾರ್ಪೊರೇಟ್ ಜಗತ್ತು ಬಹಳಷ್ಟು ಜನರಿಗೆ ಭ್ರಮೆಯನ್ನು ಮೂಡಿಸಿದೆ. ಕೇವಲ ರೂ. 2000  ಸಂಬಳ ತೆಗೆದುಕೊಂಡು ಕೆಲಸ ಮಾಡುವ ಸಾವಿರಾರು ಎಂಜಿನಿಯರ್‌ಗಳು ಬೆಂಗಳೂರಿನಲ್ಲಿದ್ದಾರೆ. ಲಕ್ಷ ರೂಪಾಯಿ ಸಂಬಳ ಪಡೆದು ಸಾಫ್ಟವೇರ್ ಕಂಪೆನಿಗಳಲ್ಲಿ ಕೆಲಸ ಮಾಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂಗ್ಲಿಷ್ ಭಾಷೆ, ದುಡ್ಡು ಮತ್ತು ಜಾತಿ ಇವಿಷ್ಟಿದ್ದರೆ ದೊಡ್ಡವರಾಗಿ ಬಿಡಬಹುದು ಎನ್ನುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದ ಭ್ರಮೆಯೇ ಹೊರತೂ ಅದು ಸತ್ಯವಲ್ಲ, ಹೀಗಾಗಿ ವಾಸ್ತವ ಪ್ರಪಂಚವನ್ನು ಅರ್ಥಮಾಡಿಕೊಳ್ಳಬೇಕು' ಎಂದರು.

ಇದಕ್ಕೂ ಮುನ್ನ ಸಾಹಿತಿ ಚಂದ್ರಶೇಖರ ಪಾಟೀಲರು ಕೂಡ, `ನೀವೆಲ್ಲ ಕಾರ್ಪೊರೇಟ್ ಜಗತ್ತಿನ ಪ್ರತಿಪಾದಕರೋ? ಅಥವಾ ವ್ಯವಸ್ಥೆಯನ್ನು ಧ್ವಂಸ ಮಾಡಿ ನಮ್ಮ ಕುತ್ತಿಗೆ ಕೊಯ್ಯುವ ಒಳಗಿನ ದ್ರೋಹಿಗಳೋ?' ಎಂದೂ ಕುಟುಕಿದರು.

ಇದಕ್ಕೆ ತಿರುಗೇಟು ನೀಡಿದ ಲೇಖಕ ವಸುಧೇಂದ್ರ, `ನನಗೆ ಮನುಷ್ಯನ ಸಂಬಂಧಗಳು ಮುಖ್ಯವೇ ಹೊರತೂ ಉಳಿದ ಸಂಗತಿಗಳಲ್ಲ. ಈ ಜಗತ್ತನ್ನು ಅರ್ಥಮಾಡಿಕೊಂಡು ಕಥೆ ಬರೆಯುತ್ತೇನೆ. ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕಂಡ ದೌರ್ಜನ್ಯ ಹಾಗೂ ಅದರ ಶಕ್ತಿ ಎರಡನ್ನೂ ಚಿತ್ರಿಸಿದ್ದೇನೆ. ಉಳಿದವು ನನಗೆ ಗೌಣ' ಎಂದರು. ಚುಟುಕು ಕವಿತೆ ಮೂಲಕ ಚಂಪಾ ಅವರ ಅನುಮಾನಕ್ಕೆ ವಸ್ತಾರೆ ಕೂಡ ಉತ್ತರಿಸಿದರು.

`ವೇದಿಕೆಯಲ್ಲಿ ಕುಳಿತ ನಾವ್ಯಾರೂ ಕೂಡ ಕಾರ್ಪೊರೇಟ್ ಕಂಪೆನಿಗಳ ಪ್ರತಿಪಾದಕರಲ್ಲ' ಎನ್ನುವ ಮೂಲಕ ಗೋಷ್ಠಿಯ ನಿರ್ದೇಶಕ, ಕಥೆಗಾರ ವಿವೇಕ ಶಾನುಭಾಗ `ಹಿರಿಯರ' ಸಂದೇಹಗಳಿಗೆ ತೆರೆ ಎಳೆದರು.

`ಕಾರ್ಪೊರೇಟ್ ಸಂಸ್ಕೃತಿ ಹೊಸದಲ್ಲ'

ADVERTISEMENT

`ನಾನಂತೂ ಈ ಕಾರ್ಪೊರೇಟ್ ಕ್ಷೇತ್ರದಲ್ಲಿ ಹಲವು ವರ್ಷ ಕೆಲಸ ಮಾಡಿ ಟೊಳ್ಳಾಗಿದ್ದೇನೆ. ಆರ್ಕಿಟೆಕ್ಟ್ ಆಗಿ ಪಶ್ಚಿಮ ದೇಶ ಪ್ರಚೋದಿತವಾದ ವೃತ್ತಿ ಮಾಡುತ್ತ ಗಾಜಿನ ಕಟ್ಟಡದ ನಡುವೆ ಕಳೆದು ಹೋಗುತ್ತ, ದಶಕಗಳ ಕಾಲ ನನ್ನನ್ನು ಈ ವೃತ್ತಿ ಲೂಟಿ ಮಾಡಿತು. ಅದರಿಂದ ಬಿಡುಗಡೆಯಾಗಲು ಸಾಹಿತ್ಯಕ್ಕೆ ಬಂದೆ' ಎಂದು ನಾಗರಾಜ ವಸ್ತಾರೆ ಹೇಳಿದರು.

`ಕಾರ್ಪೊರೇಟ್ ಸಂಸ್ಕೃತಿಯು ಸಾಹಿತ್ಯ ಕ್ಷೇತ್ರಕ್ಕೆ ಹೊಸದೇನಲ್ಲ. ಅದು ಎಲ್ಲ ಕಾಲದಲ್ಲೂ ನಮ್ಮಲ್ಲಿ ಹಾಸುಹೊಕ್ಕಾಗಿದೆ. ನಾನಂತೂ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವಗಳನ್ನೇ ಕಥೆಯಾಗಿಸಿದ್ದೇನೆ. ಈ ಕ್ಷೇತ್ರ ನನ್ನನ್ನು  ತುಂಬಾ ಗಟ್ಟಿ ಮಾಡಿದೆ' ಎಂದ ವಸುಧೇಂದ್ರ, `ಹಲವು ಒಳ್ಳೆಯ ಸಂಗತಿ ಕಲಿತಿದ್ದೇನೆ. ಆದರೂ ಅಲ್ಲಿನ ಒತ್ತಡದ ನಡುವೆ ನನಗೆ ಪ್ರಿಯವಾದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ' ಎಂದರು.

ಸಿಗದ ಸಮಾಧಾನ: `ಮನುಷ್ಯ ಮನುಷ್ಯರ ನಡುವಣ ಸಂಬಂಧ ಹಾಳು ಮಾಡಿ, ವ್ಯವಹಾರವೇ ಪ್ರಧಾನವಾಗಿರುವ ಕಾರ್ಪೊರೇಟ್ ಜಗತ್ತು ನನ್ನನ್ನು ಕಲಕಿದೆ. ಆ ಜಗತ್ತು ಉಳಿದೆಲ್ಲ ಕ್ಷೇತ್ರವನ್ನು ಹತ್ತಿಕ್ಕುತ್ತಿದೆ' ಎಂದು ವಿಮರ್ಶಕ ವಿಜಯಶಂಕರ ಆತಂಕ ವ್ಯಕ್ತಪಡಿಸಿದರು.
`ಕಾರ್ಪೊರೇಟ್ ಜಗತ್ತು ಅಂದರೆ ಬೇರೇನೂ ಅಲ್ಲ. ಅದರಲ್ಲಿ ನಾವು, ನೀವು ಎಲ್ಲರೂ ಸೇರಿಕೊಂಡಿದ್ದೇವೆ.

ನಮ್ಮ ಅನೇಕ ಸಾಹಿತಿಗಳು ಅದನ್ನು ಈಗಾಗಲೇ ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ, ಯಶವಂತ ಚಿತ್ತಾಲರ `ಶಿಕಾರಿ', ವ್ಯಾಸರಾಯ ಬಲ್ಲಾಳರ `ಬಂಡಾಯ' ಕೃತಿಯಲ್ಲಿದೆ. ಅಷ್ಟಕ್ಕೂ ಮನುಷ್ಯನಿಗೆ ಸಮಾಧಾನ ಕೊಡದೇ ಇರುವುದೇ ಕಾರ್ಪೊರೇಟ್ ಜಗತ್ತಿನ ಮೂಲತತ್ವ' ಎಂದು ಕಥೆಗಾರ ವಿವೇಕ ಶಾನುಭಾಗ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.