ಉಡುಪಿ: ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ವರ್ಕ್‌ಶಾಪ್ ಮತ್ತು ಕಚೇರಿಯಲ್ಲಿ ಕೆಲಸ ಮಾಡಿದ ಎ.ಗೋಪಾಲ ಪೂಜಾರಿ ಅವರಿಗೆ 15 ವರ್ಷದ ವೇತನ ಪಾವತಿಯಾಗಿಲ್ಲ!
ಸ್ವತಃ ಗೋಪಾಲ ಪೂಜಾರಿ ಅವರು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅಳಲು ತೋಡಿಕೊಂಡರು. ಬಾಕಿ ಪಾವತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏ.2ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಹೇಳಿದರು.
‘ಮಣಿಪಾಲದಲ್ಲಿದ್ದ ಆಸ್ಕರ್ ಅವರ ವರ್ಕ್‌ಶಾಪ್ ಹಾಗೂ ಅದು ಮುಚ್ಚಿದ ನಂತರ ಅವರ ಮನೆಯಲ್ಲಿನ ಕಚೇರಿಯಲ್ಲಿ 1972ರಿಂದ 1987ರ ವರೆಗೆ ಮೇಲ್ವಿಚಾರಕನಾಗಿ ಕೆಲಸ ಮಾಡಿದೆ. ಆರಂಭದ ಕೆಲವು ತಿಂಗಳು ಮಾತ್ರ ಅವರು ಸಂಬಳ ನೀಡಿದ್ದರು. ಆ ನಂತರ ನೀಡಲಿಲ್ಲ. ರಾಜಕಾರಣಿಯಾದ ಕಾರಣ ಯಾವುದಾದರೂ ಹುದ್ದೆ ಕೊಡಿಸಬಹುದು ಎಂಬ ನಿರೀಕ್ಷೆ ಇತ್ತು. ಅದೂ ಈಡೇರಲಿಲ್ಲ’ ಎಂದರು.
‘ಈ ವಿಷಯವಾಗಿ 1995ರಲ್ಲಿ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ದೂರು ನೀಡಿದ್ದೆ. ಬಾಕಿ ಪಾವತಿಸುವಂತೆ ಅವರು ಸೂಚನೆ ನೀಡಿದ್ದರೂ ಆಸ್ಕರ್ ಕೊಡಲಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದ್ದೆ. ಅವರು ಸಹ ನೋಟಿಸ್ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ. ಕಾರ್ಮಿಕ ಇಲಾಖೆಯವರೇ ಲೆಕ್ಕ ಹಾಕಿರುವಂತೆ ಸುಮಾರು ₹6.70 ಲಕ್ಷ ಹಣವನ್ನು ಅವರು ಪಾವತಿಸಬೇಕು. ಕಷ್ಟದಲ್ಲಿರುವ ನನಗೆ ಕೂಡಲೇ ಹಣ ಪಾವತಿಸಬೇಕು’ ಎಂದು ಮನವಿ ಮಾಡಿದರು.
**
ಇದೊಂದು ನಾನ್‌ಸೆನ್ಸ್, ಅವರು ಆರೋಪ ಮಾಡುತ್ತಿರುವುದು ಇದು ಮೊದಲೇನಲ್ಲ, ಚುನಾವಣೆ ಬಂದಾಗ ಇಂತಹ ಆರೋಪ ಮಾಡುತ್ತಾರೆ.
–ನಾಗೇಶ್ ಉದ್ಯಾವರ, ಆಸ್ಕರ್ ಫರ್ನಾಂಡಿಸ್ ಆಪ್ತ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.