ADVERTISEMENT

ಕಾಲೇಜುಗಳಲ್ಲಿ ‘ನಾಡಗೀತೆ’ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2014, 19:30 IST
Last Updated 2 ಡಿಸೆಂಬರ್ 2014, 19:30 IST

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜು­ಗಳಲ್ಲಿ ನಿತ್ಯವೂ ‘ನಾಡಗೀತೆ’ ಹಾಡುವುದನ್ನು ಕಡ್ಡಾಯ ಗೊಳಿಸಿ ಉನ್ನತ ಶಿಕ್ಷಣ ಪರಿಷತ್‌ ನಿರ್ಣಯ ಕೈಗೊಂಡಿದೆ.

ಸೋಮವಾರ ನಡೆದ ಸಭೆಯಲ್ಲಿ ವಿವಿಧ ವಿವಿಗಳ ಕುಲಪತಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಪರಿಷತ್‌, ಪ್ರತಿ ದಿನ ತರಗತಿಗಳನ್ನು ನಾಡಗೀತೆ ಮೂಲಕ ಆರಂಭಿಸಬೇಕು ಎಂದು ಹೇಳಿದೆ. ಏಕರೂಪದ ಆಂತರಿಕ ಮೌಲ್ಯಮಾಪನ: ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮತ್ತು  ಸ್ವಾಯತ್ತ ಸಂಸ್ಥೆಗಳಲ್ಲಿ ಏಕರೂಪದ ಆಂತರಿಕ ಮೌಲ್ಯ­ಮಾಪನ ಪದ್ಧತಿ ಜಾರಿಗೊಳಿಸಲೂ ಸಭೆ ತೀರ್ಮಾನಿಸಿದೆ.

ಇದರಲ್ಲಿ ಎಲ್ಲ ಕಾಲೇಜುಗಳು 30 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ಮೀಸಲಿಡ­ಲಿವೆ. ಉಳಿದ 70 ಅಂಕಗಳಿಗೆ ಪರೀಕ್ಷೆ­ ನಡೆಸಲಿವೆ. ಈ ಪದ್ಧತಿ ಜಾರಿಗೆ ಬೆಂಗಳೂರು ವಿವಿ ಕುಲಪತಿ ಪ್ರೊ. ತಿಮ್ಮೇಗೌಡ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು.

ಎರಡು ಪರೀಕ್ಷೆ: ಪ್ರತಿ ಸೆಮಿಸ್ಟರ್‌ನಲ್ಲಿ ಎರಡು ಪರೀಕ್ಷೆ­ಗಳನ್ನು ನಡೆಸಲು ಸಮಿತಿ ಶಿಫಾರಸು ಮಾಡಿತ್ತು. ಈ ಎರಡು ಪರೀಕ್ಷೆಗಳಿಗೆ  20 ಅಂಕಗಳು ಮೀಸಲಿಡಲಾ­ಗಿದ್ದರೆ, ಉಳಿದ 10 ಅಂಕಗಳು ಉಪನ್ಯಾಸ ಅಥವಾ ಪ್ರಬಂಧ ಮಂಡನೆಯಿಂದ ಸಿಗಲಿವೆ. ನಿರ್ದಿಷ್ಟ ವಿಷಯದ ಅಡಿಯಲ್ಲಿ ಬರುವ ಕವಲು–ವಿಷಯಗಳನ್ನು  ಪ್ರಮುಖ ವಿಷಯಕ್ಕೆ ಸರಿ ಸಮನಾಗಿ ಪರಿಗಣಿಸುವ ಸಂಬಂಧ ಸಭೆ ನಿರ್ಣಯ ಅಂಗೀಕರಿಸಿದೆ (ಉದಾಹರಣೆಗೆ, ಎಂಎಸ್ಸಿ ಕೆಮಿಸ್ಟ್ರಿ (ಇನ್‌ ಆರ್ಗಾನಿಕ್‌) ವಿಷಯವನ್ನು ‘ಎಂಎಸ್ಸಿ ಕೆಮಿಸ್ಟ್ರಿ’ ಎಂದೇ ಪರಿಗಣಿಸುವುದು).

ಇತರ ನಿರ್ಣಯಗಳು
*ಪದವಿ ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ದೈಹಿಕ ಶಿಕ್ಷಣ

*ಎಂಬಿಎ ಕೋರ್ಸ್‌ಗಳ ಗುಣಮಟ್ಟ ತಪಾಸಣೆಗೆ ಸಮಿತಿ
*ಕೃತಿಚೌರ್ಯದ ಪತ್ತೆಗೆ ಸಮಿತಿ
*ಉತ್ತರಪತ್ರಿಕೆ ಮೌಲ್ಯಮಾಪಕರ ಸಂಭಾವನೆಗೆ ಏಕರೂಪದ ಮಾರ್ಗದರ್ಶಿ ಸೂತ್ರ
*ವಿದೇಶಿ ವಿದ್ಯಾರ್ಥಿಗಳಿಗೆ ಏಕರೂಪದ ಶುಲ್ಕ
*ವಿವಿಗಳಲ್ಲಿ ವೃತ್ತಿಪರ ಕೋರ್ಸ್‌, ಬ್ರೈಲ್‌ ಲಿಪಿ ಕೇಂದ್ರ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT