ಬೆಂಗಳೂರು: ಹಿರಿಯ ರಂಗಕರ್ಮಿ ಕಾ.ವೆಂ. ರಾಜಗೋಪಾಲ (91) ಅವರು ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ 3.15ಕ್ಕೆ ನಿಧನರಾದರು.
ಒಂದು ವಾರದ ಹಿಂದೆ ಅವರು ಪಾರ್ಶ್ವವಾಯುಪೀಡಿತರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟರು.
ಕಟ್ಟೇಪುರದಲ್ಲಿ ಪ್ರಾಥಮಿಕ, ಕಾಂತರಾಜಪುರದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದ ಅವರು ಮೈಸೂರು ಬನುಮಯ್ಯ ಕಾಲೇಜಿನಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದರು.
ಬೆಂಗಳೂರು ಹೈಸ್ಕೂಲ್ (1956), ಎಂಇಎಸ್ ಕಾಲೇಜು (1957ರಿಂದ 1980), ಬೆಂಗಳೂರು ವಿಶ್ವವಿದ್ಯಾಲಯ (1981–1985), ರಾಮನಗರ ಕುವೆಂಪು ಕಾಲೇಜಿನಲ್ಲಿ (2000ರಿಂದ 2005ರ ವರೆಗೆ) ಕನ್ನಡ ಮಾಸ್ತರರಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಸಾಹಿತ್ಯ ಕೃಷಿ: ‘ಅಂಜೂರ’, ‘ನದಿಯ ಮೇಲಿನ ದಾಳಿ’, ‘ಮೇ ತಿಂಗಳ ಒಂದು– ಅಬ್ಬರ’, ‘ಈ ನೆಲದ ಕರೆ’ ಎಂಬ ನವ್ಯ ಕವಿತೆಗಳನ್ನು ಸಂಗ್ರಹಿಸಿದ್ದಾರೆ. ‘ಎಣಿಸದ ಹಣ’, ‘ನಿಸರ್ಗದ ನೆನಪು’, ‘ಆಯ್ದ ಸಣ್ಣ ಕತೆಗಳು’ ಎಂಬ ಸಣ್ಣ ಕತೆಗಳನ್ನು ಬರೆದಿದ್ದಾರೆ.
‘ಅತ್ತೆಯ ಕಾಂಜಿ’, ‘ಅನುಗ್ರಹ’, ಮಾಯಾ ಕೋಲಾಹಲ’, ‘ಕಲ್ಯಾಣದ ಕೊನೆಯ ದಿನಗಳು’, ‘ಭಗತ್ ಸಿಂಗ್’, ‘ವಿಚಾರಣೆ’, ‘ಅಥೆನ್ಸಿನಲ್ಲಿ ಬರಿಗಾಲು’ ಸೇರಿದಂತೆ 10ಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದಾರೆ.
ಸಂಶೋಧನಾ ಕೃತಿಗಳು: ‘ಬೌದ್ಧ ಮತದಲ್ಲಿ ಯಕ್ಷ ಕಲೆ’, ‘ಕನ್ನಡ ರಂಗಭೂಮಿಯ ಶೋಧದಲ್ಲಿ’, ‘ಒಕ್ಕಲಿಗರ ಆಚರಣೆಗಳು’, ‘ಗಂಗರ ಇತಿಹಾಸ’, ‘ದೇಹಾಲಂಕಾರ’, ‘ವಾಸ್ತು ಶಿಲ್ಪ ಉಪನಿಷತ್’ ಅವರ ಸಂಶೋಧನಾ ಕೃತಿಗಳು.
ಕಾ.ವೆಂ. ಅವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಪತ್ನಿ ಈ ಹಿಂದೆಯೇ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಚಾಮರಾಜಪೇಟೆಯ ಟಿ.ಆರ್.ಮಿಲ್‌ನಲ್ಲಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.