ಮಂಡ್ಯ: ಕಾವೇರಿ ನದಿ ನೀರಿನ ಸಮಸ್ಯೆ ಪರಿಹಾರಕ್ಕೆ ಉನ್ನತ ಅಧಿಕಾರವುಳ್ಳ ಆಯೋಗ ರಚನೆ ಮಾಡಬೇಕು ಎಂದು ಜಲತಜ್ಞ ಡಾ.ರಾಜೇಂದ್ರ ಸಿಂಗ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರಲ್ಲಿ ಕಾನೂನು, ಪರಿಸರ, ನೀರಾವರಿ, ರೈತರು, ತಂತ್ರಜ್ಞರು ಸೇರಿದಂತೆ ಎಲ್ಲ ಬಗೆಯ ವಿಷಯ ತಜ್ಞರು ಇರಬೇಕು ಎಂದರು.
ಮಾತುಕತೆ ಮೂಲಕ ಕಾವೇರಿ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಹಾಗೆಯೇ ನೀರಿನ ಸರಿಯಾದ ಬಳಕೆ, ಜಲಮೂಲ ಹೆಚ್ಚಳಕ್ಕೆ ಅವಶ್ಯವಿರುವ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದರು.
ನ್ಯಾಯಾಲಯವು ಅಂಕಿ–ಸಂಖ್ಯೆಯೊಂದಿಗೆ ಎಷ್ಟು ಶಿಸ್ತುಬದ್ಧವಾಗಿ ನೀರನ್ನು ಸರಿಯಾಗಿ ಬಳಸಿಕೊಂಡಿದ್ದೀರಿ ಎಂಬುದನ್ನೂ ನೋಡುತ್ತದೆ. ಆದ್ದರಿಂದ ಜಲ ಸಂಪನ್ಮೂಲ ರಕ್ಷಣೆ ಹಾಗೂ ವಿತರಣೆಯ ಬಗೆಗೂ ಎಚ್ಚರ ವಹಿಸಬೇಕಿದೆ ಎಂದರು.
ಪಶ್ಚಿಮ ಘಟ್ಟದಲ್ಲಿ 2 ಸಾವಿರ ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತದೆ. ಈ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ಮಾಡಬೇಕಿದೆ. ಕಡಿಮೆ ದೂರ ಹಾಗೂ ವೆಚ್ಚದಲ್ಲಿ ಹೆಚ್ಚು ನೀರು ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟದಲ್ಲಿ ಸಮುದ್ರ ಸೇರುವ ನೀರನ್ನು ಬಳಸಿಕೊಳ್ಳುವ ಮೂಲಕ 9 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಳ್ಳಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.