ADVERTISEMENT

ಕಿರಣ್‌ಕುಮಾರ್‌ ಆಡಿದ ಮನೆ ಇದು!

ಆಲೂರಿನಲ್ಲಿ ಹುಟ್ಟಿ, ಬೆಳೆದ ‘ಇಸ್ರೊ’ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಜನವರಿ 2015, 19:30 IST
Last Updated 14 ಜನವರಿ 2015, 19:30 IST
ಇಸ್ರೊ ಅಧ್ಯಕ್ಷ ಡಾ.ಎ.ಎಸ್‌. ಕಿರಣ್‌ಕುಮಾರ್‌ ಅವರು ಬಾಲ್ಯ ಕಳೆದ ಆಲೂರು ತಾಲ್ಲೂಕಿನ ಹಳೇಆಲೂರು ಗ್ರಾಮದಲ್ಲಿರುವ ಅವರ ಮನೆ
ಇಸ್ರೊ ಅಧ್ಯಕ್ಷ ಡಾ.ಎ.ಎಸ್‌. ಕಿರಣ್‌ಕುಮಾರ್‌ ಅವರು ಬಾಲ್ಯ ಕಳೆದ ಆಲೂರು ತಾಲ್ಲೂಕಿನ ಹಳೇಆಲೂರು ಗ್ರಾಮದಲ್ಲಿರುವ ಅವರ ಮನೆ   

ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಹಳೇಆಲೂರು ಗ್ರಾಮದಲ್ಲಿರುವ ಶತ­ಮಾ­ನದಷ್ಟು ಹಳೆಯದಾದ ನಾಡ­ಹೆಂಚಿನ ಆ ಪುಟ್ಟ ಮನೆ ಈಗ ಆಕರ್ಷಣೆಯ ಕೇಂದ್ರವಾಗಿದೆ. ಈ ಮನೆ ಸಾಮಾನ್ಯ ಮನೆಯಲ್ಲ. ನಮ್ಮ ದೇಶದ ಹೆಮ್ಮೆಯ ಸಂಕೇತವಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ.ಎ.ಎಸ್‌. ಕಿರಣ್‌ಕುಮಾರ್‌ ಅವರ ಬಾಲ್ಯವನ್ನು ಕಂಡ ಮನೆ!

ಹೌದು, ಅಚ್ಚರಿ ಪಡದೇ ಬೇರೆ ದಾರಿಯಿಲ್ಲ. ತೀರ ಶಿಥಿಲಾವಸ್ಥೆ­ಯಲ್ಲಿರುವ ಈ ಪುಟ್ಟ ಹಳ್ಳಿಯ ಮನೆ­ಯಲ್ಲೇ ಕಿರಣ್‌ಕುಮಾರ್‌ ತಮ್ಮ ಪುಟ್ಟಪುಟ್ಟ ಹೆಜ್ಜೆ­ಗಳನ್ನಿಟ್ಟು ಓಡಾಡಿ­ದ್ದಾರೆ, ಮಣ್ಣಿನ ಅಂಗಳದಲ್ಲಿ ಆಟ­ವಾಡಿದ್ದಾರೆ. ಕಿರಣ್‌ ಅವರು ‘ಇಸ್ರೊ’ ಅಧ್ಯಕ್ಷರಾಗಿ ಆಯ್ಕೆಯಾ­ಗುತ್ತಿದ್ದಂತೆ ಗ್ರಾಮದಲ್ಲಿ ಸಂತಸ ಮನೆಮಾಡಿದೆ. ಅವರ ಸಮಕಾಲೀನ­ರಂತೂ ತುಂಬ ಖುಷಿಯಾಗಿದ್ದಾರೆ.

ಕಿರಣ್‌ ಅವರ ತಂದೆ ಎ.ಎಸ್. ಮಲ್ಲಪ್ಪ ವಕೀಲರಾಗಿ­ದ್ದರು. ಹಲವು ವರ್ಷಗಳ ಹಿಂದೆ ಅವರು ಗ್ರಾಮವನ್ನು ತೊರೆದು ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಹೀಗಾಗಿ, ಮನೆ ಈಗ ಶಿಥಿಲಾವಸ್ಥೆಯಲ್ಲಿದೆ. ಮನೆ ಪಕ್ಕ­ದಲ್ಲೇ ಅವರಿಗೆ ಸೇರಿದ 100x20 ಚದರ ಅಡಿಯ ನಿವೇ­ಶನವೂ ಇದೆ. ಈಗಲೂ ಅಪರೂಪಕ್ಕೆ ಊರಿಗೆ ಬಂದು ಹೋಗುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಕಿರಣ್‌ಕುಮಾರ್‌ ಅವರ ತಂದೆ ವಕೀಲರಾಗಿ ಹಾಸನದಲ್ಲೇ ವೃತ್ತಿ ನಡೆಸು­ತ್ತಿದ್ದರು. ನಗರದ ಈಗಿನ ಅರಳೇಪೇಟೆ­ಯಲ್ಲಿ ಅವರು ಮನೆ ಮಾಡಿಕೊಂಡಿ­ದ್ದರು. 1974ರಿಂದ 76ರವರೆಗೆ ಮಲ್ಲಪ್ಪ ಅವರು ಹಾಸನ ಪುರಸಭೆಯ ಅಧ್ಯಕ್ಷರಾಗಿದ್ದರು. ಆದ್ದರಿಂದ ಕಿರಣ್‌ ಆಲೂರಿನಲ್ಲಿ ಹುಟ್ಟಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಸನದಲ್ಲೇ ಮುಗಿಸಿದ್ದಾರೆ.

ನಗರದ ಮುನ್ಸಿಪಲ್‌ ಶಾಲೆಯಲ್ಲಿ ಅವರು 1ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ಬಳಿಕ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾದ್ದರಿಂದ ಅವರು ಅಲ್ಲಿನ ನ್ಯಾಷನಲ್ ಕಾಲೇಜಿ­ನಲ್ಲಿ ಶಿಕ್ಷಣ ಮುಂದುವರಿಸಿದರು.

ಕಿರಣ್‌ ಅವರು ‘ಇಸ್ರೊ’ಗೆ ಸೇರಿದ ಬಳಿಕ ಅಹಮದಾಬಾದ್‌ನಲ್ಲೇ ನೆಲೆ­ಸಿ­ದ್ದರು. ಅವರು ಕನ್ನಡಿಗರು ಎಂಬುದು ಗೊತ್ತಾ­ಗುತ್ತಿದ್ದಂತೆ ಅವರ ಮೂಲದ ಹುಡುಕಾಟ ಆರಂಭವಾಗಿತ್ತು. ಹಾಸನ ಜಿಲ್ಲೆ, ಆಲೂರಿನವರು ಎಂದು ತಿಳಿಯುತ್ತಿದ್ದಂತೆ ಆ ಊರಿನವರೂ ಅಚ್ಚರಿಪಟ್ಟಿದ್ದಾರೆ.
ಇಂಥ ದೊಡ್ಡ ವ್ಯಕ್ತಿ ತಮ್ಮ ಊರಿ­ನವರು ಎಂಬ ವಿಚಾರವೂ ಊರಿನ ಅನೇಕ ಮಂದಿಗೆ ತಿಳಿದಿಲ್ಲ. ಊರಿನ ಒಂದಿಬ್ಬರು ಹಿರಿಯರು ಅವರು ಹುಟ್ಟಿದ ಮನೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ, ಈಗ ಈ ಮನೆಯೇ ಜಿಲ್ಲೆಯ ಜನರ, ಮಾಧ್ಯಮಗಳ ಆಕರ್ಷಣೆಯ ಕೇಂದ್ರವಾಗಿದೆ.

ಅಧಿಕಾರ ಸ್ವೀಕಾರ
ಬೆಂಗಳೂರು (ಪಿಟಿಐ):
ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ನೂತನ ಅಧ್ಯಕ್ಷರಾಗಿ ನೇಮಕ­ವಾ­ಗಿ­ರುವ ಹಿರಿಯ ವಿಜ್ಞಾನ ಎ.ಎಸ್‌.­ಕಿರಣ್‌­ಕುಮಾರ್‌ ಅವರು ಬುಧ­ವಾರ ಅಧಿಕಾರ ವಹಿಸಿಕೊಂಡರು. ಬಾಹ್ಯಾಕಾಶ ಆಯೋಗದ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿಯೂ ಕಿರಣ್‌ಕುಮಾರ್‌ ಅವರು ಕಾರ್ಯನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.