ADVERTISEMENT

ಕುಮಾರಧಾರಾ ಮೇಲೆ ಸರ್ಕಾರದ ಕಣ್ಣು

ಎತ್ತಿನಹೊಳೆ ತಿರುವು ಬಳಿಕ ಇನ್ನೊಂದು ಯೋಜನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2015, 19:47 IST
Last Updated 8 ಆಗಸ್ಟ್ 2015, 19:47 IST

ಮಂಗಳೂರು: ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತು ಬೆಂಗಳೂರಿನ ಕೆಲ ಭಾಗಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ತಿರುವು ಯೋಜನೆಯಲ್ಲಿ ಸಾಕಷ್ಟು ನೀರು ಲಭ್ಯವಾಗದೆ ಇರುವುದರಿಂದ ಸರ್ಕಾರ ಕುಮಾರಧಾರಾ ನದಿಯನ್ನೂ ತಿರುಗಿಸಿ ನೀರನ್ನು  ಕೊಂಡೊಯ್ಯಲು ಸಿದ್ಧತೆ ನಡೆಸಿದೆ. ಇದರಿಂದ ಕರಾವಳಿ ಭಾಗಕ್ಕೆ ತೀವ್ರ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಹೊಳ್ಳ, ಸಕಲೇಶಪುರದ ಕುಂಬರಡಿ, ಹೆಬ್ಬಸಾಲೆ, ಕಡುವರಳ್ಳಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ತೇಗ, ಬೀಟೆ, ಮುಂತಾದ ಮರಗಳನ್ನು ಕಡಿದು ರಸ್ತೆ ನಿರ್ಮಿಸಲಾಗಿದೆ. ಅಂಕಿಹಳ್ಳಿ, ಹೆಬ್ಬನಳ್ಳಿ, ಹೆಬ್ಬಸಾಲೆ, ಸತ್ತಿಗಾಲದಲ್ಲಿ 48 ಎಕರೆೆಗೂ ಹೆಚ್ಚಿನ ಜಾಗದಲ್ಲಿ ಖಾಸಗಿ ಕೃಷಿ ಪ್ರದೇಶದಲ್ಲಿ ₨1200 ಕೋಟಿ ವೆಚ್ಚದಲ್ಲಿ 16 ಅಡಿ ವ್ಯಾಸದ ಪೈಪ್‌ಗಳನ್ನು ಅಳವಡಿಸಲಾಗಿದೆ. ಯೋಜನೆಯ ಆರಂಭದಲ್ಲಿ ನೀರು ಸಂಗ್ರಹದ ಒಡ್ಡು ನಿರ್ಮಾಣ ಮತ್ತು ನಿಖರ ಸಮೀಕ್ಷೆಯ ಕೆಲಸಗಳನ್ನು ಮಾಡದೇ ಯೋಜನೆಯ ಅಂತ್ಯದಲ್ಲಿ ನಿರ್ಮಿಸಬೇಕಾದ ಪೈಪ್‌ಗಳನ್ನು ತುರ್ತಾಗಿ ಮೊದಲೇ ಹಾಕಲಾಗಿದೆ ಎಂದು ಹೇಳಿದರು.

ಪರಿಸರ ತಜ್ಞ ಟಿ.ವಿ. ರಾಮಚಂದ್ರ ಅವರು ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರು ಲಭಿಸುವುದಿಲ್ಲ ಎಂಬುದಾಗಿ  ವರದಿ ನೀಡಿದ್ದಾರೆ. ಆದರೆ ಸರ್ಕಾರ ಗುಪ್ತವಾಗಿ 15 ಟಿಎಂಸಿ ನೀರನ್ನು ಕುಮಾರಧಾರಾ ನದಿಯಿಂದ ಪಡೆಯಲು ಸಮೀಕ್ಷೆ ನಡೆಸಲು ಮುಂದಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಶೋಲಾ ಅರಣ್ಯಕ್ಕೆ ಧಕ್ಕೆ: ಕರಾವಳಿ ಪ್ರದೇಶಕ್ಕೆ ನೀರಿನ ಒರತೆಯನ್ನು ಕೊಡುವುದಕ್ಕೆ ಮುಖ್ಯ ಕಾರಣ ಪಶ್ಚಿಮ ಘಟ್ಟದಲ್ಲಿರುವ ಶೋಲಾ ಅರಣ್ಯ. ಆದರೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ವೇಳೆ ಈ ಶೋಲಾ ಅರಣ್ಯಕ್ಕೆ ಧಕ್ಕೆಯಾಗಲಿದೆ. ಇದರಿಂದ ನೀರಿನ ಒರತೆಯ ಪ್ರಮಾಣ ಕಡಿಮೆಯಾದರೂ ಆಶ್ಚರ್ಯವಿಲ್ಲ. ಇಷ್ಟೆಲ್ಲಾ ಆದರೂ ಜಿಲ್ಲೆಯ ಒಳಿತನ್ನು ಬಯಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪರಿಸರ ಸಚಿವ ರಮಾನಾಥ ರೈ ಅವರು, ‘ಎತ್ತಿನಹೊಳೆ ಯೋಜನೆಯ ಬಗ್ಗೆ ಮಾತನಾಡಲು ನನ್ನ ಬಳಿಗೆ ಬರಬೇಡಿ’ ಎಂದು ಹೇಳುತ್ತಿರುವುದು ವಿಪರ್ಯಾಸವೇ ಸರಿ ಎಂದು  ಸಹ್ಯಾದ್ರಿ ಸಂರಕ್ಷಣಾ ಸಂಚಯದ ಸದಸ್ಯರಾದ ಶಶಿಧರ್‌ ಶೆಟ್ಟಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಎತ್ತಿನಹೊಳೆ  ಯೋಜನೆಗೆ ಸಮ್ಮತಿ ನೀಡುವುದನ್ನು ಗಮನಿಸಿದರೆ ಇಲ್ಲಿನ ಶಾಸಕ, ಸಚಿವರೂ ಈ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ.
ದಿನೇಶ್‌ ಹೊಳ್ಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.