ಮೈಸೂರು: ಕ್ರೋಡೀಕೃತ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಬೋಧ ಕೇತರ ಸಿಬ್ಬಂದಿಯೊಬ್ಬರು ಕುಲಪತಿ ಎದುರೇ ಹತ್ತಾರು ಮಾತ್ರೆ ಸೇವಿಸಿ ಆತ್ಮbಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಪರೀಕ್ಷಾಂಗ ಕುಲಸಚಿವ ಡಾ.ಎಂ. ಎಸ್. ಶೇಖರ್ ಅವರ ಕಾರು ಚಾಲಕ ಶಿವಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ. ತಕ್ಷಣ ವಿಶ್ವವಿದ್ಯಾಲಯದ ವಾಹನದಲ್ಲಿಯೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ರೋಡೀಕೃತ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೋಧಕೇತರ ಸಿಬ್ಬಂದಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಅವರ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದರು.
ಎಲ್ಲ ಸಿಬ್ಬಂದಿಯ ಉದ್ಯೋಗ ಕಾಯಂಗೊಳಿಸಬೇಕು ಎಂದು ಪಟ್ಟು ಹಿಡಿದು ಕುಲಪತಿಯ ಕಚೇರಿಗೆ ನುಗ್ಗಿದರು. ಈ ವೇಳೆ ಕುಲಪತಿ ಮತ್ತು ಬೋಧಕೇತರ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಮನನೊಂದ ಶಿವಪ್ರಸಾದ್ ಜೇಬಿನಲ್ಲಿದ್ದ ಮಾತ್ರೆಯನ್ನು ಬಾಯಿಗೆ ಹಾಕಿಕೊಂಡರು. ಕುಲಪತಿಯ ಮೇಜಿನ ಮೇಲಿದ್ದ ನೀರು ಕುಡಿದಿದ್ದಾರೆ. ಇದನ್ನು ತಡೆಯಲು ಸಹೋದ್ಯೋಗಿಗಳು ನಡೆಸಿದ ಯತ್ನ ಫಲ ನೀಡಿಲ್ಲ.
ಬೋಧಕ ಸಿಬ್ಬಂದಿಗೆ ವಿಶ್ವವಿದ್ಯಾಲಯ ಈಚೆಗೆ ವೇತನ ಹೆಚ್ಚಳ ಮಾಡಿದೆ. ಮೈಸೂರು ವಿಶ್ವವಿದ್ಯಾಲಯದ ಮಾದರಿಯಲ್ಲಿ ಎನ್‌ಇಟಿ ಮತ್ತು ಎಸ್‌ಎಲ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ₨ 22,500, ಈ ಅರ್ಹತೆ ಹೊಂದದ ಶಿಕ್ಷಕರಿಗೆ ₨ 19,500 ಸಾವಿರ ಮತ್ತು ತಬಲಾ, ಹಾರ್ಮೋನಿಯಂ ಸೇರಿದಂತೆ ಇತರ ವಾದ್ಯಗಳ ಕುರಿತು ತರಬೇತಿ ನೀಡುವ ಸಾಥಿದಾರರಿಗೆ ₨ 15 ಸಾವಿರ ಸಂಬಳವನ್ನು ನಿಗದಿಪಡಿಸಲಾಗಿದೆ. ಇದೇ ಮಾದರಿಯಲ್ಲಿ ತಮಗೂ ವೇತನ ಹೆಚ್ಚಿಸಬೇಕು ಎಂದು ಬೋಧಕೇತರ ಸಿಬ್ಬಂದಿ ಹಲವು ದಿನಗಳಿಂದ ಕುಲಪತಿಯ ಎದುರು ಬೇಡಿಕೆ ಇಟ್ಟಿದ್ದರು.
‘ವಿಶ್ವವಿದ್ಯಾಲಯದ ಬೆಳವಣಿಗೆಗೆ ನಾವೂ ಶ್ರಮಿಸಿದ್ದೇವೆ. ಆದರೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಆರು ವರ್ಷದಿಂದ ದುಡಿದರೂ ಉದ್ಯೋಗ ಕಾಯಂ ಆಗುವ ಭರವಸೆ ಸಿಕ್ಕಿಲ್ಲ. ಈಗ ಬರುತ್ತಿರುವ ವೇತನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಯ ಮಾದರಿಯಲ್ಲಿಯೇ ನಮಗೂ ಕ್ರೋಡೀಕೃತ ವೇತನ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಸಿಬ್ಬಂದಿ ಹನುಮಂತರಾಜು.
ಉದ್ಯೋಗ ಕಾಯಂ ಮಾಡಬೇಕು ಎಂಬುದು ನನ್ನ ವ್ಯಾಪ್ತಿ ಮೀರಿದ ವಿಚಾರ. ಆದರೆ, ಅವರು ಎಲ್ಲರನ್ನೂ ಕಾಯಂಗೊಳಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಡಾ.ಸರ್ವಮಂಗಳಾ ಶಂಕರ್, ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.