ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ತೆರವಾಗಿ ಮೂರು ತಿಂಗಳು ಕಳೆದಿದೆ. ಆದರೆ, ಈವರೆಗೆ ಮತ್ತೊಬ್ಬರನ್ನು ನೇಮಕ ಮಾಡದಿರುವುದರಿಂದ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳಲು ಅಡ್ಡಿಯಾಗಿದೆ.
ಸುಮಾರು 150 ಆಕಾಂಕ್ಷಿಗಳು ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಕುಲಪತಿ ನೇಮಕ ಸಂಬಂಧ ರಾಜ್ಯ ಸರ್ಕಾರವು ವಿಶ್ರಾಂತ ಕುಲಪತಿ ಪ್ರೊ.ಎಚ್.ಪಿ.ಖಿಂಚ ನೇತೃತ್ವದಲ್ಲಿ ಶೋಧನಾ ಸಮಿತಿ ರಚಿಸಿದೆ. ಪ್ರೊ.ಎಚ್.ಎಂ.ಮಹೇಶ್ವರಯ್ಯ, ಹರಿಗೌತಮ್, ಚವ್ಹಾಣ್ ಸಮಿತಿಯಲ್ಲಿದ್ದಾರೆ. ಆದರೆ, ಸಮಿತಿಯು ಈವರೆಗೆ ಒಂದೂ ಸಭೆ ನಡೆಸಿಲ್ಲ. ಸಭೆ ನಡೆಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು 3–4 ಬಾರಿ ದಿನ ನಿಗದಿಗೊಳಿಸಿ ಮುಂದೂಡಿದೆ.
ಮೈಸೂರು ವಿ.ವಿ ಸಿಂಡಿಕೇಟ್ ಹರಿಗೌತಮ್‌್ ಅವರನ್ನು ಶೋಧನಾ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಿದೆ. ನವದೆಹಲಿಯಲ್ಲಿರುವ ಹರಿಗೌತಮ್ ಅವರು ಸರಿಯಾಗಿ ಸ್ಪಂದಿಸದಿರುವುದು ಹಾಗೂ ಅಲ್ಲಿಗೇ ಬಂದು ಚರ್ಚಿಸುವಂತೆ ಕೇಳಿರುವುದರಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ. ಇವರೊಬ್ಬರಿಂದಾಗಿ ನೇಮಕ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಮಿತಿಯ ಎಲ್ಲ ಸದಸ್ಯರು ಸಭೆ ಸೇರಿ ಅರ್ಜಿಗಳನ್ನು ಪರಿಶೀಲಿಸಿ ಮೂವರ ಹೆಸರನ್ನು ಶಿಫಾರಸು ಮಾಡಬೇಕಿದೆ. ಹೀಗಾಗಿ, ಪ್ರಕ್ರಿಯೆ ವಿಳಂಬವಾಗಿದೆ. ಸಮಿತಿಯು ಶಿಫಾರಸು ಮಾಡಿದ ಮೂವರ ಪೈಕಿ ಒಬ್ಬರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ.
‘ಕಾಯಂ ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತೆ ಸಮಿತಿಯು (ನ್ಯಾಕ್) ಮೈಸೂರು ವಿಶ್ವವಿದ್ಯಾನಿಲಯಕ್ಕೆ ಐದು ವರ್ಷ ಅವಧಿಗೆ ನೀಡಿರುವ ಗ್ರೇಡ್ (‘ಎ++’) ಜನವರಿಗೆ ಅಂತ್ಯವಾಗಲಿದೆ. ಮಾನ್ಯತೆ ಮತ್ತೆ ಪಡೆಯಲು ಅಣಿಯಾಗಬೇಕಿದೆ.
ಹೀಗಾಗಿ, ಕುಲಪತಿಯನ್ನು ಕೂಡಲೇ ನೇಮಕ ಮಾಡಲು ಕ್ರಮ ವಹಿಸಬೇಕು’ ಎಂದು ಹುದ್ದೆಯ ಆಕಾಂಕ್ಷಿಯೂ ಆಗಿರುವ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿಶ್ವವಿದ್ಯಾಲಯವು 205 ಬೋಧಕ ಹುದ್ದೆಗಳ ನೇರ ನೇಮಕಾತಿ ಕೈಗೆತ್ತಿಕೊಂಡಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿದೆ. ‘ನ್ಯಾಕ್’ ಮಾನ್ಯತೆ ಪಡೆಯುವಲ್ಲಿ ಕಾಯಂ ಬೋಧಕರ ಪ್ರಮಾಣವು ಪ್ರಮುಖ ಮಾನದಂಡವಾಗಿದೆ.
‘ಕುಲಪತಿ ಇಲ್ಲದಿರುವುದರಿಂದ ಸಿಂಡಿಕೇಟ್ ಸಭೆಯಲ್ಲಿಯೂ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಅಡಚಣೆಯಾಗಿದೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಹೇಳಿದರು.
ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರು ಜ.10ರಂದು ನಿವೃತ್ತಿಯಾಗಿದ್ದರು. ನಂತರ ವಾಣಿಜ್ಯ ನಿಕಾಯದ ಡೀನ್ ಪ್ರೊ.ಯಶವಂತ ಡೋಂಗ್ರೆ ಅವರು ಪ್ರಭಾರ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಡೀನ್‌ಶಿಪ್ ಅವಧಿ ಮುಗಿದ ನಂತರ ಹೊಣೆಗಾರಿಕೆಯನ್ನು ಕಲಾ ನಿಕಾಯದ ಡೀನ್ ಪ್ರೊ.ದಯಾನಂದ ಮಾನೆ ಅವರಿಗೆ ವಹಿಸಲಾಗಿದೆ.
ಶೀಘ್ರ ನೇಮಕಕ್ಕೆ ಸಿದ್ಧತೆ
ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಪ್ರಕ್ರಿಯೆಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಬೆಂಗಳೂರು ವಿ.ವಿ ಕುಲಪತಿ ನೇಮಕ ಸಂಬಂಧ ರಚನೆಯಾಗಿರುವ ಶೋಧನಾ ಸಮಿತಿ ಸಭೆ ಇದೇ 19 ಮತ್ತು 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮೈಸೂರು ವಿ.ವಿ ಕುಲಪತಿ ನೇಮಕಕ್ಕೆ ಸಂಬಂಧಿಸಿದ ಶೋಧನಾ ಸಮಿತಿ ಸಭೆ 27 ಮತ್ತು 28ರಂದು ನಡೆಯುವ ಸಾಧ್ಯತೆ ಇದೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿ.ವಿ ಕುಲಪತಿ ಶೋಧನಾ ಸಮಿತಿ ರಚನೆಯಾಗಿದೆ.
‘ಮೈಸೂರು ವಿ.ವಿ ಕುಲಪತಿ ಸ್ಥಾನಕ್ಕೆ ಹೆಚ್ಚಿನ ಬೇಡಿಕೆ ಇದ್ದು, 180ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಬೆಂಗಳೂರು ವಿ.ವಿಗೆ 90ರಿಂದ 100 ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.