ADVERTISEMENT

ಕೂಡಲಸಂಗಮ: ಜಾತಿ ಮಠಗಳ ಕೇರಿ

ಬಸವಾದಿ ಶರಣರ ಜಾತ್ಯತೀತ ನಿಲುವಿಗೆ ತಿಲಾಂಜಲಿ

​ಪ್ರಜಾವಾಣಿ ವಾರ್ತೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST

ಬಾಗಲಕೋಟೆ: ಸಮಾಜ ಸುಧಾರಕ ಬಸವಣ್ಣನವರ ಐಕ್ಯಸ್ಥಳ ಕೂಡಲ­ಸಂಗಮದಲ್ಲಿ ಬಸ­ವಾದಿ ಶರಣರ ಜಾತ್ಯ­ತೀತ ನಿಲುವಿಗೆ ತಿಲಾಂಜಲಿ ಇಡು­ವಂತಹ ಅಹಿತಕರ ಬೆಳಗವಣಿಗೆ­ಗಳು ಸದ್ದಿಲ್ಲದೆ ನಡೆ­ಯುತ್ತಿವೆ. 

ಬಸವಣ್ಣನ ಕರ್ಮಭೂಮಿಯ ದರ್ಶ­ನಕ್ಕೆ ನಿತ್ಯ ಬರುವ ಸಾವಿರಾರು ಅನುಯಾಯಿಗಳ ಮೇಲೆ ಕಣ್ಣಿಟ್ಟಿರುವ ವಿವಿಧ ಜಾತಿ, ಜನಾಂಗಗಳಿಗೆ ಸೇರಿದ ನಾಡಿನ ಮಠಾಧೀಶರು ಕೂಡಲ­ ಸಂಗ­ಮ­­ದಲ್ಲಿ ಶಾಖಾಮಠಗಳನ್ನು ಒಂದರ ಹಿಂದೆ ಒಂದರಂತೆ ತೆರೆಯ­ತೊಡಗಿ­ದ್ದಾರೆ.

ಈ ಮಠಗಳು ಪರೋಕ್ಷ­ವಾಗಿ ಜಾತಿ ಸಮಾವೇಶ ಮತ್ತು ರಾಜಕೀಯ ಸಮಾ­ವೇಶಗಳನ್ನು ಆಯೋಜಿಸುವ ಮೂಲಕ ಶರಣರ ತತ್ವಾದರ್ಶಗಳಿಗೆ ಎಳ್ಳುನೀರು ಬಿಡತೊಡಗಿವೆ. ಈ ಕುರಿತು ಹುನಗುಂದದ ಬಸವತತ್ವ ಚಿಂತಕ ಮಹೇಶ ತಿಪ್ಪಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಬಸವಾದಿ ಶರಣರ ಕಾಲದಿಂದ ಆರಂಭ­ಗೊಂಡು 1977ರವರೆಗೂ ಕೂಡಲಸಂಗಮದಲ್ಲಿ ಯಾವ ಮಠ ಇದ್ದ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಕೇವಲ ಸಂಗಮನಾಥನ ಗುಡಿ ಮಾತ್ರ ಇತ್ತು. 1978ರಲ್ಲಿ ಮೊದಲಿಗೆ ಲಿಂಗಾನಂದ ಸ್ವಾಮೀಜಿ ಬಸವತತ್ವ ಪ್ರಚಾರಕ್ಕಾಗಿ ‘ಬಸವಧರ್ಮ ಪೀಠ’ ತೆರೆದರು. ಬಳಿಕ ಲಿಂಗಾಯತ ಜಂಗಮ ಸಮುದಾಯಕ್ಕೆ ಸೇರಿದ ಸಾರಂಗಮಠ 2006ರಲ್ಲಿ ಆರಂಭ­ವಾಯಿತು. ಆ ಬಳಿಕ ಲಿಂಗಾಯತ ಪಂಚಮಸಾಲಿ ಪೀಠ 2008ರಲ್ಲಿ ತಲೆ ಎತ್ತಿತು’ ಎಂದು ಮಾಹಿತಿ ನೀಡಿದರು.

‘ಜಾತ್ಯತೀತ ಸಮಾಜ ಕಟ್ಟಬೇಕೆಂದು ಪ್ರಯತ್ನಿಸಿದ ಬಸವಣ್ಣನ ನೆಲದಲ್ಲಿ ಜಾತಿ, ಉಪಜಾತಿಗಳು ಮಠಗಳನ್ನು ಕಟ್ಟುವ ಮೂಲಕ ಜಾತಿ ವ್ಯವಸ್ಥೆ ಬಲಪಡಿಸುವ ಹುನ್ನಾರ ನಡೆಸಿ­ರುವುದು ಅಪಮಾನಕರ ಬೆಳವಣಿಗೆ’ ಎಂದರು.

ಮಠಗಳ ಸ್ಥಾಪನೆಗಾಗಿ 2011ರಲ್ಲಿ ಆದಿಚುಂಚನಗಿರಿ ಮಠ 4 ಎಕರೆ, ಪಂಚಮ­ಸಾಲಿ ಮಠ 4 ಎಕರೆ ಭೂಮಿ ಖರೀದಿಸಿವೆ. ಬಸವಧರ್ಮ ಪೀಠದಿಂದ 28 ಎಕರೆ, ಸಾರಂಗ ಮಠದಿಂದ ಅಂದಾಜು 2 ಎಕರೆ, ಕಾಶಿ ಜಗದ್ಗುರು­ಗಳು ಭಕ್ತರೊಬ್ಬರ ಹೆಸರಿ­ನಲ್ಲಿ 4.10 ಎಕರೆ, ಬಾಳೆಹೊನ್ನೂರು ರಂಭಾಪುರಿ ಮಠಾಧೀಶರು ಭಕ್ತ­ರೊಬ್ಬರ ಹೆಸರಿನಲ್ಲಿ 4.20 ಎಕರೆ, ಕೇದಾರ ಜಗದ್ಗುರುಗಳು ಶಿಷ್ಯರೊಬ್ಬರ ಹೆಸರಲ್ಲಿ 8 ಎಕರೆ ಜಮೀನು ಖರೀದಿ­ಸಿದ್ದಾರೆ ಎಂಬುದನ್ನು ದಾಖಲೆಗಳು ಹೇಳುತ್ತವೆ.

ಮಠಗಳ ಹೊರತಾಗಿ ಹಡಪದ, ಕುಂಬಾರ, ಬಣಜಿಗ, ವಾಲ್ಮೀಕಿ, ಅಂಬಿಗರ ಸಮಾಜದವರು ಮಠಗಳನ್ನು ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲು ಅಗತ್ಯ ಭೂಮಿ ನೀಡುವಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಬೇಡಿಕೆ ಸಲ್ಲಿಸಿದ್ದಾರೆ.

ಕಾನೂನು ಮಾರ್ಪಾಡು: ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳವಾದ ಕೂಡಲಸಂಗಮದ ಮೂರು ಕಿ.ಮೀ ವ್ಯಾಪ್ತಿಯನ್ನು ‘ಹಸಿರು ವಲಯ’ ಎಂದು ಪರಿಗಣಿಸಿರು­ವುದರಿಂದ ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿರಲಿಲ್ಲ. ಇದ­ರಿಂದ ಪೇಚಿಗೆ ಸಿಲುಕಿದ ಮಠವೊಂದರ ಸ್ವಾಮೀಜಿ­ಯೊಬ್ಬರು ಬಿ.ಎಸ್‌.­ಯಡಿ­ಯೂರಪ್ಪ ಮುಖ್ಯ­ಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಕಾನೂನನ್ನು ಸರಳ­ಗೊಳಿಸುವಂತೆ ಪ್ರಭಾವ ಬೀರಿದರು. ಕಾನೂನನ್ನು ಸರಳಗೊಳಿಸಿದ ಪರಿಣಾಮ ಕೂಡಲ­­ಸಂಗಮ ಸುತ್ತಮುತ್ತ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಲು ಇದ್ದ ಅಡಚಣೆ  ನಿವಾರಣೆಯಾಗಿವೆ.

ಭೂಮಿಗೆ ಹೆಚ್ಚಿದ ಬೇಡಿಕೆ: ಕೂಡಲಸಂಗಮ ವ್ಯಾಪ್ತಿಯಲ್ಲಿ ಮಠ­ಮಾನ್ಯಗಳು, ಶಿಕ್ಷಣ ಸಂಸ್ಥೆಗಳು, ವಸತಿ ಗೃಹಗಳು, ಹೋಟೆಲ್‌ಗಳ ನಿರ್ಮಾಣಕ್ಕೆ ಆದ್ಯತೆ ಸಿಕ್ಕಿರುವುದರಿಂದ ಸುತ್ತಮುತ್ತ­ಲಿನ ಕೃಷಿಭೂಮಿಗೆ ಅದರಲ್ಲೂ ಸೊಲ್ಲಾಪುರ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಸಂಗಮ ಕ್ರಾಸ್‌ ಆಸುಪಾಸು ಭೂಮಿಗೆ ಈಗ ಚಿನ್ನದ ಬೆಲೆ  ಬಂದಿದೆ.

ಮಠ ಸ್ಥಾಪನೆಗೆ ಪ್ರೇರಣೆ
ಬಾಗಲಕೋಟೆ: ‘2009ರಲ್ಲಿ ಕೃಷ್ಣಾ ನದಿ ಉಕ್ಕಿಹರಿದ ಪರಿಣಾಮ ಕೂಡಲಸಂಗಮ ವ್ಯಾಪ್ತಿ­ಯಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಒಳಗಾ­ದರು. ಈ ಸಂದರ್ಭದಲ್ಲಿ ಪರಿ­ಹಾರ, ನೆರವು ನೀಡುವ ನೆಪದಲ್ಲಿ ಇಲ್ಲಿಗೆ ಬಂದ ನಾಡಿನ ವಿವಿಧ ಮಠಾಧೀಶರು ಸಂಗಮದ ಮಹತ್ವ ಅರಿತು ಮಠಮಾನ್ಯ ಸ್ಥಾಪನೆಗೆ ಅಂದೇ ಹೊಂಚುಹಾಕಿದರು’ ಎನ್ನು­ತ್ತಾರೆ  ಬಸವತತ್ವ ಚಿಂತಕ ಮಹೇಶ ತಿಪ್ಪಶೆಟ್ಟಿ.

‘2003 ಮೇ 27ರಂದು ಬಸವ­ತತ್ವ­ದಡಿ ನಾಡಿನ ಎಲ್ಲ ಮಠಾಧೀ­ಶರನ್ನು ಒಗ್ಗೂಡಿಸುವ ಸಂಬಂಧ ಕೂಡಲ­ಸಂಗಮ­ದಲ್ಲಿ ವಿಶ್ವ­ಧರ್ಮ­ಗಳ ಸಮ್ಮೇಳನ ನಡೆಯಿತು. ರಾಜ್ಯದ ಎರಡು ಸಾವಿರಕ್ಕೂ ಅಧಿಕ ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಮಾವೇ­ಶದ ಬಳಿಕ ಮಠಾಧೀಶರು ಇದೇ ಜಾಗದಲ್ಲಿ ತಮ್ಮ ತಮ್ಮ ಜಾತಿ ಸಮಾವೇಶಗಳನ್ನು ಆಯೋಜಿಸಿ ಲಕ್ಷಾಂತರ ಜನರನ್ನು ಸೇರಿಸಿದರು. ಹೀಗೆ ಕೂಡಲಸಂಗಮ ಎಂಬುದು ಜಾತಿಗಳ ಸಂಘಟನೆಗೆ ಪ್ರಧಾನ ಭೂಮಿಕೆಯಾಗಿ ಮಾರ್ಪಟ್ಟಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.