ಧಾರವಾಡ: ‘ರೈತರ ಆತ್ಮಹತ್ಯೆಗಳು ಎಷ್ಟಾದವು ಎಂದು ಪಟ್ಟಿ ಮಾಡಿ ನೀಡಿದ ಮಾಧ್ಯಮಗಳು, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿ ಆ ಕಾಯಕವನ್ನು ಹೇಗೆ ಮುಂದುವರಿಸಿಕೊಂಡು ಬದುಕು ಮುನ್ನಡೆಸಿದ್ದಾಳೆ ಎಂಬುದನ್ನು ತೋರಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಗೆ ಯಾರೂ ಹೋಗುವುದಿಲ್ಲ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನೀರವ ಮೌನ ಆವರಿಸಿತು.
‘ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು’ ಎಂಬ ವಿಷಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಕಳವೆ, ಕೃಷಿಯಲ್ಲಿನ ಸವಾಲುಗಳು ಹಾಗೂ ಅವುಗಳನ್ನು ಪರಿಹರಿಸಿಕೊಳ್ಳಬಹುದಾದ ಮಾರ್ಗಗಳ ಕುರಿತು ತಮ್ಮ ಅನುಭವದಿಂದ ಪಡೆದ ಕೆಲವು ಉದಾಹರಣೆಗಳೊಂದಿಗೆ ವಿವರಿಸಿದರು.
‘ನಾವು ತೊಡುವ ಬಟ್ಟೆ, ಬರೆಯುವ ಲೇಖನಿ, ಮಾತನಾಡುವ ಮೊಬೈಲ್ ಹೀಗೆ ಪ್ರತಿಯೊಂದನ್ನು ಮಾರುಕಟ್ಟೆಗೆ ತಂದ ಕಂಪೆನಿಗಳ ಹೆಸರು ನಮಗೆ ನೆನಪಿದೆ. ಆದರೆ ಪ್ರತಿ ಹೊತ್ತು ಊಟ ಮಾಡುವಾಗ ಅದನ್ನು ಬೆಳೆದ ರೈತ ಯಾರೆಂಬುದನ್ನು ಅರಿಯುವ ಪ್ರಯತ್ನ ಮಾಡದಿರುವುದು ನೋವಿನ ಸಂಗತಿ’ ಎಂದು ಹೇಳಿದ ಅವರ ಮಾತು ಕೃಷಿ ಉತ್ಪನ್ನಗಳ ಬಳಕೆದಾರರ ಕರ್ತವ್ಯವನ್ನು ನೆನಪಿಸುವಂತಿತ್ತು.
ಇದೇ ಚರ್ಚೆಯಲ್ಲಿ ಪಾಲ್ಗೊಂಡ ಮತ್ತೊಬ್ಬ ಕೃಷಿಕ ಎ.ಪಿ.ಚಂದ್ರಶೇಖರ ಅವರ ಮಾತಿನಲ್ಲೂ ಇದೇ ವಿಷಾದದ ದನಿ ಇತ್ತು. ಬರ, ನೀರು, ವಿದ್ಯುತ್, ಯೋಗ್ಯ ಬೆಲೆ, ಕಾರ್ಮಿಕರು, ಭೂಮಿಯ ಫಲವತ್ತತೆ ಇತ್ಯಾದಿಗಳು ಎಂಬ 18 ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟು ಅವುಗಳಿಗೆ ಪರಿಹಾರ ರೂಪದ ಮಾರ್ಗೋಪಾಯಗಳನ್ನು ಹುಡುಕುವ ಪ್ರಯತ್ನವನ್ನು ಅವರು ಮಾಡಿದರು.
ಚಂದ್ರಶೇಖರ್ ಅವರು, ತಮ್ಮ ಕೃಷಿಭೂಮಿಯಲ್ಲಿ ಬಳಸಿದ ನೀರನ್ನು ಶೇಖರಿಸಿಟ್ಟುಕೊಂಡು ಅಂತರ್ಜಲ ವೃದ್ಧಿ ಮತ್ತು ವಾತಾವರಣದ ತಾಪಮಾನ ಕಾಪಾಡುವುದರ ಜತೆಗೆ ಆರೋಗ್ಯಕ್ಕೂ ಉತ್ತಮವಾದ ಕೆಲವೊಂದು ಸಸ್ಯ, ಗಡ್ಡೆ ಹಾಗೂ ಬೆಳೆಗಳನ್ನು ಬೆಳೆದಿರುವುದನ್ನು ತೋರಿಸಿ ತಮ್ಮ ವಾದವನ್ನು ಮಂಡಿಸಿದರು.
‘ಉಳ್ಳವರು ಭೂಮಿ ಖರೀದಿ ಮಾಡುತ್ತಿದ್ದರೆ, ರೈತ ಜಮೀನು ಮಾರಿ ಪಟ್ಟಣದತ್ತ ಮುಖ ಮಾಡಿದ್ದಾನೆ. ಇಂಥ ಪರಿಸ್ಥಿತಿಯಲ್ಲಿ ನಾಳೆ ಎದುರಾಗಲಿರುವ ಆಹಾರ ಅಭಾವದ ಕರಾಳ ದಿನಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯ ಮಾಡಿಕೊಡಬೇಕಾಗಿದೆ. ಸಾವಯವ ಆಹಾರ ಖರೀದಿಸಿ ತಿಂದರೂ ನಮ್ಮ ಸುತ್ತ ಇರುವ ನೂರಾರು ರಾಸಾಯನಿಕಗಳು ನಮ್ಮನ್ನು ಮತ್ತೆ ವಿಷದ ಬಾವಿಗೇ ನೂಕುತ್ತಿವೆ. ಹೀಗಿರುವಾಗ ಹಸಿರು ಬೆಳೆಸುವುದು ಹಾಗೂ ಸಸ್ಯ ವೈವಿಧ್ಯಗಳನ್ನು ಉಳಿಸುವ ಕಡೆ ಹೆಚ್ಚು ಗಮನ ನೀಡಬೇಕಿದೆ’ ಎಂದರು.
ಇವರ ಪ್ರಯತ್ನಕ್ಕೆ ನಿರ್ದೇಶಕ ಸ್ಥಾನದಲ್ಲಿದ್ದ ಪರಿಸರತಜ್ಞ ಡಾ. ಪ್ರಕಾಶ್ ಭಟ್, ‘ಎಲ್ಲರ ಬದುಕಿಗೆ ಅಗತ್ಯವಾದ ಕೃಷಿ ಯಾರಿಗೂ ಬೇಡವಾಗಿದೆ. ರೈತನೆಂಬುವವನು ಯಾರಿಗೂ ಬೇಡವಾದ ಅಳಿವಿನಂಚಿನ ಪ್ರಾಣಿಯಾಗಿದ್ದಾನೆ. ದೇಶದಲ್ಲಿ 86 ಲಕ್ಷ ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಹೆಚ್ಚು ಉತ್ಪಾದಿಸಿದರೆ ಅಧಿಕ ಹಣ ಹಾಗೂ ಆಧುನಿಕ ಕೃಷಿಯೇ ಬೀಜಮಂತ್ರವಾಗಿದೆ’ ಎಂದು ಪೀಠಿಕೆ ಹಾಕುವ ಮೂಲಕ ಚರ್ಚೆಗೆ ಚಾಲನೆ ನೀಡಿದರು.
ಅಂತಿಮವಾಗಿ ದುಡಿಮೆಯ ಬಹುಪಾಲು ಆಹಾರಕ್ಕೆ ಖರ್ಚಾಗುವಂತಿದ್ದರೆ ಮಾತ್ರ ರೈತರು ಉಳಿಯುತ್ತಾರೆ. ಪಟ್ಟಣ ಸೇರಿದವರೆಲ್ಲರೂ ಇ–ಮೇಲ್ ತೊರೆದು ಪೂರ್ಣಚಂದ್ರ ತೇಜಸ್ವಿ ಅವರಂತೆಯೇ ಅಂಚೆ ವಿಳಾಸಕ್ಕೆ ಬಂದರೆ ಮಾತ್ರ ಕೃಷಿ ಉದ್ಧಾರವಾದೀತು’ ಎಂಬುದರೊಂದಿಗೆ ಗೋಷ್ಠಿ ಕೊನೆಗೊಂಡಿತು.
ಕೃಷಿ ಕುರಿತ ಗೋಷ್ಠಿಯಲ್ಲಿ ಚರ್ಚೆಯಾದ ಬರ ಮತ್ತು ರೈತರ ಸಮಸ್ಯೆಗಳೇ ಮುಂದೆ ನಡೆದ ‘ಚಲನಚಿತ್ರ ಮಾಧ್ಯಮದ ಚಲನಶೀಲತೆ’ ಗೋಷ್ಠಿಯಲ್ಲಿ ಪ್ರತಿಧ್ವನಿಸಿತು.
*
ರೈತರಿಗೆ ಮಗಳನ್ನು ನೀಡಿ; ಕೃಷಿ ಉಳಿಸಿ
ಕೃಷಿ ಕುರಿತು ಆಸಕ್ತಿಯಿಂದ ಪಾಲ್ಗೊಂಡವರ ಸಂಖ್ಯೆ ದೊಡ್ಡದಿತ್ತು. ಕಾರ್ಯಕ್ರಮ ಸಮಯ ಮೀರಿದ್ದರಿಂದ ಹೆಚ್ಚು ಪ್ರಶ್ನೋತ್ತರಗಳಿಗೆ ಅವಕಾಶ ನೀಡದಿದ್ದರೂ, ಅದನ್ನು ಭೇದಿಸಿ ಮೈಕ್ ಕೈಯಲ್ಲಿ ಹಿಡಿದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸುನಿಲ್ ಕುಮಾರ್ ಎಂಬುವವರು, ‘ಸಾಫ್ಟ್‌ವೇರ್ ಎಂಜಿನಿಯರ್ ಹುಡುಗನನ್ನು ಹುಡುಕುವುದನ್ನು ಬಿಟ್ಟು, ಒಳ್ಳೆಯ ರೈತ ವರನನ್ನು ಹುಡುಕಿ ಮಗಳನ್ನು ಕೊಡುವಂತಾದರೆ ಮಾತ್ರ ಕೃಷಿ ಉಳಿದೀತು’ ಎಂಬ ಸಲಹೆ ಮುಂದಿಟ್ಟಾಕ್ಷಣ ಸಭೆಯಲ್ಲಿ ನಗು ಹಾಗೂ ಚಪ್ಪಾಳೆ ಮೊಳಗಿತು. ಗೋಷ್ಠಿಯ ನಿರ್ದೇಶಕ ಪ್ರಕಾಶ ಭಟ್, ‘ದುರದೃಷ್ಟವಶಾತ್ ನನಗೆ ಮಗಳಿಲ್ಲ. ಇಲ್ಲವೆಂದರೆ ನಿಮಗೇ ನೀಡುತ್ತಿದ್ದೆ’ ಎಂದಾಗ ಮತ್ತೆ ಸಭೆ ಮತ್ತೆ ಗೊಳ್ ಎಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.