ADVERTISEMENT

ಕೆಎಸ್‌ಒಯು ಕೋರ್ಸ್‌ ಮಾನ್ಯತೆ ರದ್ದು

ವಿಶ್ವವಿದ್ಯಾಲಯ ಅನುದಾನ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2015, 19:30 IST
Last Updated 18 ಜೂನ್ 2015, 19:30 IST

ಮೈಸೂರು:  ವ್ಯಾಪ್ತಿ ಮೀರಿ ಚಟುವಟಿಕೆ ವಿಸ್ತರಣೆ, ನಿಯಮ ಉಲ್ಲಂಘಿಸಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ ಆರಂಭಿಸಿರುವ ಕಾರಣ ನೀಡಿ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಎಲ್ಲ ಕೋರ್ಸ್‌ಗಳ ಮಾನ್ಯತೆ ರದ್ದುಪಡಿಸಿ ಆದೇಶ ಹೊರಡಿಸಿದೆ.

ಯುಜಿಸಿಯ ಮಾರ್ಗದರ್ಶಿ ಸೂತ್ರಗಳು, ನಿಯಮಗಳನ್ನು ಕೆಎಸ್‌ಒಯು ಗಾಳಿಗೆ ತೂರಿ ಕೋರ್ಸ್‌ ನಡೆಸುತ್ತಿದೆ. ಹೀಗಾಗಿ, 2012–13ನೇ ಸಾಲಿನಿಂದ ಈ ವಿಶ್ವವಿದ್ಯಾಲಯದ ಎಲ್ಲ ಕೋರ್ಸ್‌ಗಳ ಮಾನ್ಯತೆ ರದ್ದುಪಡಿಸಲಾಗಿದೆ. ನಿಯಮ ಉಲ್ಲಂಘನೆ ಕುರಿತು 2011ರ ಜೂನ್‌ 10ರಂದು ‘ಕೆಎಸ್‌ಒಯು’ಗೆ ಷೋಕಾಸ್ ನೋಟಿಸ್‌ ಜಾರಿ ಮಾಡಲಾಗಿತ್ತು. ನೋಟಿಸಿಗೆ ಕೆಎಸ್‌ಒಯು ಅಧಿಕಾರಿಗಳು ನೀಡಿದ ಉತ್ತರವನ್ನು ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಜಿಸಿ ಹೇಳಿದೆ.

ಖಾಸಗಿ ಸಂಸ್ಥೆಗಳು, ಕೋಚಿಂಗ್‌ ಕೇಂದ್ರಗಳು ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ಕೆಎಸ್‌ಒಯು ದೇಶ ಮತ್ತು ವಿದೇಶದಲ್ಲಿ ದೂರ ಶಿಕ್ಷಣದಡಿ ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿದೆ. ಯುಜಿಸಿಯು ದೂರ ಶಿಕ್ಷಣದ ಭೌಗೋಳಿಕ ವ್ಯಾಪ್ತಿಗೆ ಸಂಬಂಧಿಸಿದಂತೆ 2013ರ ಜೂನ್‌ 27ರಂದು ಹೊರಡಿಸಿರುವ ಆದೇಶವನ್ನು ಕೆಎಸ್‌ಒಯು ಉಲ್ಲಂಘಿಸಿದೆ.

ಸಂಬಂಧಪಟ್ಟ ಮಾನ್ಯತಾ ಸಂಸ್ಥೆಗಳಿಂದ ಅನುಮೋದನೆ ಪಡೆಯದೇ ಕೆಲವು ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯವು ನಡೆಸುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು ನಡೆಸುತ್ತಿದೆ. ಕೆಎಸ್‌ಒಯು ಕೆಲವಾರು ಆನ್‌ಲೈನ್‌ ಕೋರ್ಸ್‌ಗಳನ್ನೂ ಆರಂಭಿಸಿದೆ. ಇವುಗಳಿಗೆ ಯುಜಿಸಿ ಮಾನ್ಯತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ, ವಿವಿಧ ಸಂಸ್ಥೆಗಳ ಸಹಭಾಗಿತ್ವದ ಕೋರ್ಸ್‌ಗಳು ಸೇರಿದಂತೆ ಕೆಎಸ್‌ಒಯುನ ಎಲ್ಲ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಲಾಗಿದೆ.

ಈ ವಿಶ್ವವಿದ್ಯಾಲಯದ ಕೋರ್ಸ್‌ಗಳಿಗೆ ಪ್ರವೇಶ ಪಡೆದರೆ ಅದಕ್ಕೆ ಯುಜಿಸಿ ಹೊಣೆಯಲ್ಲ ಎಂದು ಯುಜಿಸಿ ಕಾರ್ಯದರ್ಶಿ ಜಸ್ಪಾಲ್‌ ಎಸ್‌. ಸಂಧು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.