ADVERTISEMENT

ಕೆಜಿಎಸ್ ಕೊಟ್ಟ ಚಿತ್ರಕ್ಕಿಂತ ತೋರಿದ ದಾರಿಯೇ ಕಾಣಿಕೆ

ಎಚ್.ಎ.ಅನಿಲ್ ಕುಮಾರ್
Published 30 ಜೂನ್ 2016, 22:30 IST
Last Updated 30 ಜೂನ್ 2016, 22:30 IST
ಕೆಜಿಎಸ್ ಕೊಟ್ಟ ಚಿತ್ರಕ್ಕಿಂತ ತೋರಿದ ದಾರಿಯೇ ಕಾಣಿಕೆ
ಕೆಜಿಎಸ್ ಕೊಟ್ಟ ಚಿತ್ರಕ್ಕಿಂತ ತೋರಿದ ದಾರಿಯೇ ಕಾಣಿಕೆ   

‘ಸರ್, ಸೀಗಲ್ ಪ್ರಕಟಿಸಿರುವ ನಿಮ್ಮ ಲೇಖನಗಳನ್ನು ಕನ್ನಡಕ್ಕೆ ನಾನು ಭಾಷಾಂತರಿಸಲು ಅನುಮತಿ ದೊರಕೀತೆ?’ ಎಂದು ಕೆ.ಜಿ. ಸುಬ್ರಹ್ಮಣ್ಯನ್ ಅಥವಾ ಕೆ.ಜಿ.ಎಸ್ ಅವರನ್ನು ಐದು ವರ್ಷದ ಹಿಂದೊಮ್ಮೆ ಕೇಳಿದ್ದೆ. ಅವರು ಚಿತ್ರಕಲಾ ಪರಿಷತ್ತಿಗೆ ಬಂದ ಸಂದರ್ಭವದು. ‘ಯಾವ ಅನುಮತಿಯ ಅವಶ್ಯಕತೆ ಇಲ್ಲ. ಅದು ನನ್ನ ಬರಹ. ಧಾರಾಳವಾಗಿ ತರ್ಜುಮೆ ಮಾಡು. ಆದರೆ ಅದನ್ನು ಇಂಪ್ರೂವೈಸ್ ಮಾಡಬೇಡ, ಅಷ್ಟೇ’, ಎಂದು ಚಾಟಿ ಬೀಸಿದ್ದರು.

ಮತ್ತೊಮ್ಮೆ ಅವರು ಬೆಂಗಳೂರಿನ ವೆಂಕಟಪ್ಪ ಗ್ಯಾಲರಿಯ ಮೊದಲ ಮಹಡಿಯಲ್ಲಿ ಚಿತ್ರಗಳನ್ನು ವೀಕ್ಷಿಸುತ್ತಿದ್ದಾಗ ಧಡಧಡನೆ ಓಡಿಬಂದ ಬೆಂಗಳೂರಿನ ಹಿರಿಯ ಶೋಮನ್ ಕಲಾವಿದರೊಬ್ಬರು ಧಡಕ್ಕನೆ ಅವರ ಕಾಲಿಗೆ ಬಿದ್ದರು. ವಾಕಿಂಗ್ ಸ್ಟಿಕ್ ಹಿಡಿದು ನಿಂತಿದ್ದ ಎಂಬತ್ತೈದರ ಹರೆಯದ ಕೆ.ಜಿ.ಎಸ್ ಅವರು, ‘ನನ್ನ ಕಾಲೆಳೆಯಬೇಡಿ, ಪ್ಲೀಸ್’ ಎಂದು ಮತ್ತೊಂದು ತೆರನಾದ ಚಾಟಿ ಬೀಸಿದ್ದರು. ಕಲಾವಿದ ಮರಿಶಾಮಾಚಾರರ ಬಗ್ಗೆ ಹೊತ್ತಗೆಯೊಂದನ್ನು ಸಿದ್ಧಪಡಿಸುತ್ತಿದ್ದಾಗ,

ಅವರಿಗೆ ಪಿತೃಸಮಾನರಾಗಿದ್ದ ಕೆ.ಜಿ.ಎಸ್ ಅವರು ಮರಿ ಅವರ ಬಗ್ಗೆ ಬರೆದರೆ, ಅದನ್ನೇ ಮುನ್ನುಡಿಯನ್ನಾಗಿ ಬಳಸಿಕೊಳ್ಳಬಹುದೆಂಬ ಆಸೆಯಿಂದ ಅವರಿಗೆ ಫೋನ್ ಹಚ್ಚಿದೆ.  ಹಲೋ ಎಂದ ಅವರಿಗೆ, ಮರಿಶಾಮಾಚಾರ್ ಬಗ್ಗೆ ಬರೆದುಕೊಡಿ ಎಂದೆ. ‘ಅವರಿಗೇ ಹೇಳು. ಅವರು ಬಹಳ ಹ್ಯಾಂಡ್‌ಸಮ್ ಆಗಿದ್ದಾರೆ’ ಎಂದು ನಿರಾಕರಣೆಯ ಮುನ್ನುಡಿಯನ್ನು ನುಡಿದು, ನಗತೊಡಗಿದರು. ಕೆ.ಜಿ.ಎಸ್ ಅವರ ವ್ಯಂಗ್ಯೋಕ್ತಿಯ ಪರಿಚಯವಿದ್ದ ನನಗೆ, ಇದು ಸಾಧ್ಯವಿಲ್ಲದ ಮಾತು ಎಂದು ಸುಮ್ಮನಾದೆ.

ಅದನ್ನೇ ಮರಿಶಾಮಾಚರ್ ಅವರಿಗೂ ತಿಳಿಸಿದೆ. ಆದರೆ ಕೊನೆಗೆ ಪುಸ್ತಕ ಪ್ರಕಟಗೊಂಡಾಗ, ಅದರ ಮುನ್ನುಡಿಯಲ್ಲಿ ಕೆ.ಜಿ.ಎಸ್ ಅವರ ಬರಹದ ಕನ್ನಡದ ಆವೃತ್ತಿಯಿತ್ತು, ತದನಂತರ ಇಂಗ್ಲಿಷಿನಲ್ಲಿ ಅವರದ್ದೇ ಹಸ್ತಪ್ರತಿಯ ಪ್ರತಿ ಪ್ರಕಟವಾಗಿತ್ತು! ಸಾಧ್ಯವಿಲ್ಲವೆಂಬ ಅನುಮಾನವನ್ನು ಸ್ಪಷ್ಟವಾಗಿಯೇ ಫೋನಿನಲ್ಲಿ ತಿಳಿಸಿದ್ದ ಕೆ.ಜಿ.ಎಸ್ ಮರೆಯದೆ ತಮ್ಮ ಬರಹವನ್ನು ಕಳುಹಿಸಿಕೊಟ್ಟಿದ್ದರು. ಬುಧವಾರ (ಜೂನ್‌ 29, 2016)  ಕೆ.ಜಿ.ಎಸ್ ಇನ್ನಿಲ್ಲ ಎಂಬ ಸುದ್ದಿಬಂದಾಗ ಅದನ್ನೊಪ್ಪಿಕೊಳ್ಳಲು ಕಷ್ಟವಾಯಿತು.

ಅವರು ಇಲ್ಲ ಎಂದು ನಂಬಲು ನಮಗೆ ದಶಕಗಳೇ ಬೇಕಾಗುತ್ತದೆ. ಬದುಕಿದ್ದಾಗಲೇ ದಂತಕಥೆಯಾಗಿದ್ದ ಪದ್ಮವಿಭೂಷಣ ಪ್ರೊಫೆಸರ್ ಕೆ.ಜಿ. ಸುಬ್ರಹ್ಮಣ್ಯನ್ ಅವರು ಸ್ವತಃ ತಮ್ಮ ಬಗ್ಗೆ ಹೇಳುತ್ತಿದ್ದುದು ‘ನಾನು ಕಲಾವಿದ-ಕಾರ್ಯಕರ್ತನೇ ಹೊರತು ಚಳವಳಿಕಾರ-ಕಲಾವಿದನಲ್ಲ’.  ತಮಿಳುನಾಡು-ಕೇರಳದ ನಡುವೆ ಜನಿಸಿದವರು ಕೆ.ಜಿ.ಎಸ್. ಮಂಗಳೂರಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದ ಇವರು ಸ್ವಾತಂತ್ರ್ಯ ಚಳವಳಿಯ ಕಾಲಕ್ಕೆ ಸೆರೆಮನೆವಾಸವನ್ನು ಅನುಭವಿಸಿದ್ದಿದೆ.

ನಂತರ ಶಾಂತಿನಿಕೇತನದಲ್ಲಿ ಕಲೆಯನ್ನು ಅಧ್ಯಯನ ಮಾಡಿದ ಇವರು, ಕೇಂದ್ರ ಸರ್ಕಾರದ ನೇಯ್ಗೆಯ ಕೇಂದ್ರದಲ್ಲಿ ಕಲಾವಿದರಾಗಿದ್ದರು, ಶಾಂತಿನಿಕೇತನದಲ್ಲಿ ಶಿಕ್ಷಕರಾಗಿದ್ದರು, ಬರೋಡದ ಎಂ.ಎಸ್.ವಿಶ್ವವಿದ್ಯಾಲಯದ ಕಲಾಶಾಲೆಯನ್ನು ಸುಧಾರಿಸಿದರು. 60ರ ದಶಕದಲ್ಲಿ ಇಂಗ್ಲೆಂಡಿನ ಸ್ಲೇಡ್ ಕಲಾಶಾಲೆಯಲ್ಲಿ ಯುರೋಪಿಯನ್ ಸಮಕಾಲೀನ ಕಲೆಯ ಪರಿಚಯ ಮಾಡಿಕೊಂಡರು. ಆಗೆಲ್ಲ ಕಲಾಶಿಕ್ಷಣದ ಬಗ್ಗೆ ಇವರು ನೀಡಿದ ಟಿಪ್ಪಣಿಗಳನ್ನೇ ಈಗಲೂ ಕರ್ನಾಟಕದ ಕಲಾಶಾಲೆಗಳಲ್ಲೂ ಮುಗ್ಧವಾಗಿ ಬಳಸಿಕೊಳ್ಳಲಾಗುತ್ತಿದೆ.

ಓದು-ಬರಹದಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದ  ಕೆ.ಜಿ.ಎಸ್ ‘ಲಿವಿಂಗ್ ಟ್ರೆಡಿಷನ್’, ‘ಮೂವಿಂಗ್ ಫೋಕಸ್’, ‘ಕ್ರಿಯೇಟಿವ್ ಸರ್ಕ್ಯುಟ್’ ಮುಂತಾದ ಪುಸ್ತಕಗಳನ್ನು ಬರೆದರು. ಮಕ್ಕಳಿಗಾಗಿಯೂ ಪುಸ್ತಕಗಳನ್ನು ರಚಿಸಿದರು. ಅತ್ಯಂತ ಗಂಭೀರವಾದ ತಾತ್ವಿಕ ಸಂವಾದದೊಂದಿಗೆ, ಅತ್ಯಂತ ಸಹಜ, ವ್ಯಂಗ್ಯ, ಜನಪ್ರಿಯ ಹಾಗೂ ಬೊಂಬೆ ಮಾಡುವ ಕಲಾಪ್ರಕಾರಗಳ ಆಧಾರದ ಮೇಲೂ ಕೃತಿಗಳನ್ನು ರಚಿಸತೊಡಗಿದರು.

ಇದು ಗಾಂಭೀರ್ಯಕ್ಕೆ ಮುಗ್ಧತೆಯ ಲೇಪನವೋ, ಅಥವಾ ಮುಗ್ಧವೆಂದು ಪರಿಗಣಿತವಾದುದಕ್ಕೆ ಗಾಂಭೀರ್ಯದ ಪ್ರವೇಶಿಕೆಯೋ, ಒಟ್ಟಿನಲ್ಲಿ ಎರಡೂ ಮೇಳೈಸಿದ್ದು ಮಾತ್ರ ಇವರ ಮಾಂತ್ರಿಕ ಕೈಬೆರಳುಗಳಿಂದಲೇ. ಶಾಂತಿನಿಕೇತನದ ವಿದ್ಯಾರ್ಥಿಗಳು ತಮ್ಮ ಕೃತಿಗಳನ್ನು  ಕೆ.ಜಿ.ಎಸ್. ವಿಶ್ಲೇಷಿಸಲಿ ಎಂದು ತಿಂಗಳಾನುಗಟ್ಟಲೆ ಕಾಯುತ್ತಿದ್ದರು. ಕೊನೆಗೊಮ್ಮೆ ಅವರು ಅವುಗಳ ಬಗ್ಗೆ ಮಾತನಾಡಿದ ಮೇಲೆ, ಮತ್ತಷ್ಟು ತಿಂಗಳುಗಳ ಕಾಲ ಚಿತ್ರ ರಚನೆಯನ್ನೇ ಬಿಟ್ಟಿಬಿಡುತ್ತಿದ್ದರು.

ಇದು ಕೆ.ಜಿ.ಎಸ್. ಅವರ ಟೀಕೆಯ ಪರಿಣಾಮ. ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಬಲವಂತವಾಗಿ ತನ್ನ ಕೃತಿಗಳ ಪ್ರದರ್ಶನಕ್ಕೆ ಕರೆದುಕೊಂಡು ಹೋದ. ಆತನ ಬಗ್ಗೆ ಕೆ.ಜಿ.ಎಸ್ ಹೇಳಿದ್ದು ಹೀಗೆ, ‘ಎಲ್ಲ ಸರಿಯಾಗಿದೆ. ಆದರೆ ಸಹಿ ಮಾತ್ರ ನಿನ್ನದೇ ಯಾಕಿದೆ?’. ಪಕ್ಕಾ ಕೆ.ಜಿ.ಎಸ್ ಅವರ ಕೃತಿಗಳ ಶೈಲಿಯನ್ನೇ ಅನುಕರಿಸಿದ್ದ ಆ ವಿದ್ಯಾರ್ಥಿಗಷ್ಟೇ ಅಲ್ಲದೇ ಅದನ್ನು ಕೇಳಿಸಿಕೊಂಡವರಿಗೂ ಮಾತಿನ ಧ್ವನಿಯೇನೆಂದು ಅರ್ಥವಾಗಿತ್ತು. ಕೆ.ಜಿ.ಎಸ್. ಅವರನ್ನು ಅರ್ಥ ಮಾಡಿಕೊಂಡವರಿಗಿಂತಲೂ ಅನುಕರಿಸುವವರೆ ಹೆಚ್ಚಿದ್ದರು.

ಅವರ ವ್ಯಕ್ತಿತ್ವದ ಸಂಕೀರ್ಣತೆಯ ಅಗಾಧತೆಯೇ ಇದಕ್ಕೆ ಕಾರಣ. ಹಲವಾರು ಅಕ್ರಲಿಕ್ ಫಲಕಗಳ ಮೇಲೆ ಏಕಕಾಲದಲ್ಲಿ ಚಕಚಕನೆ ಚಿತ್ರ ಬಿಡಿಸುವ ಅಸಾಧ್ಯ ಕೌಶಲ ಕೆ.ಜಿ.ಎಸ್. ಅವರದ್ದು. ನಂದಲಾಲ್ ಬೋಸ್ ಜನ್ಮದಿನವಾದ ಡಿಸೆಂಬರ್‌ 3ರಂದು ನಡೆವ ಕಲಾಭವನದ ನಂದನ್ ಮೇಳಕ್ಕೆ ಕೆ.ಜಿ.ಎಸ್ ಕೃತಿರಚನೆ ಮಾಡುವುದನ್ನು ನೋಡಲಿಕ್ಕೇ ವಿದ್ಯಾರ್ಥಿಗಳು ಮುತ್ತುತ್ತಿದ್ದರು. ಜೇಡಿ ಮಣ್ಣಿನಲ್ಲಿ ಬೆರಳುಗನ್ನೋಡಿಸುತ್ತಾ ಕೆಲವೇ ನಿಮಿಷಗಳಲ್ಲಿ ಮಕ್ಕಳಾಟಿಕೆಯಂತೆ ಕಾಣುತ್ತಿದ್ದ,

ಆದರೆ ಕೆ.ಜಿ.ಎಸ್ ಛಾಪು ಇರುತ್ತಿದ್ದ ಶಿಲ್ಪಗಳನ್ನು ಇವರು ಸೃಷ್ಟಿಸುತ್ತಿದ್ದರೆ, ದೆಹಲಿ, ಮುಂಬಯಿಗಳಿಂದ ಬರುತ್ತಿದ್ದ ಗ್ಯಾಲರಿಗಳ ಒಡೆಯ ಒಡತಿಯರು ಅಷ್ಟೇ ವೇಗವಾಗಿ ಅವುಗಳನ್ನು ಕೊಂಡುಬಿಡುತ್ತಿದ್ದರು. ಬೆರಳುಗಳಿಂದ ಕಲೆಯ ಬಗ್ಗೆ ಚಿಂತಿಸಿ, ಮಿದುಳಿನಿಂದಲ್ಲ ಎನ್ನುತ್ತಿದ್ದ ಇವರ ಬರವಣಿಗೆ ಶಾಸ್ತ್ರೀಯ ಇಂಗ್ಲಿಷಿನದ್ದು. ಇದನ್ನು ಭಾರತೀಯ ಭಾಷೆಗೆ ತರ್ಜುಮೆ ಮಾಡಲು ಯತ್ನಿಸಿದಾಗಲೇ ಅದರ ಸ್ವಾದದ ಪರಿಚಯ ಸಾಧ್ಯ. ಏಕೆಂದರೆ ಭಾಷಾಂತರವು ಇವರ ಅಸಲಿ ಬರವಣಿಗೆಗಿಂತಲೂ ಕ್ಲಿಷ್ಟವಾಗುವುದು ಇಲ್ಲಿ ಅನಿವಾರ್ಯ ಕೂಡ.

ಕೆ.ಜಿ.ಎಸ್ ಬರವಣಿಗೆಯು ಅತಿ ಹೆಚ್ಚು ಭಾಷಾಂತರವಾದದ್ದು ಕನ್ನಡಕ್ಕೆ. ಇವೆಲ್ಲವೂ ಮೂಲಕ್ಕಿಂತಲೂ ಕ್ಲಿಷ್ಟ. ಸಾಕ್ರೆಟಿಸನ ಹೃದಯದ ಕೆ.ಜಿ.ಎಸ್ ಚಿಂತನೆಗಳು ಎಡಬಲವೆಂಬ ತತ್ವಗಳಿಗೆ ಒತ್ತುನೀಡುವುದಿಲ್ಲ. ಬದಲಿಗೆ ದೃಶ್ಯಕ್ಕೆ ಮನ ಮತ್ತು ಚಿಂತನವು ಅನಿವಾರ್ಯವೆಂಬಂತೆ ಮಾಡಿಬಿಡುತ್ತವೆ. ಒಮ್ಮೆ ಇವರ ಬರಹ-ಕಲಾಕೃತಿಗಳಿಗೆ ಪ್ರವೇಶ ಪಡೆದಲ್ಲಿ ಸೃಜನಶೀಲ ತಳಮಳವೊಂದು ವೀಕ್ಷಕನ ಮುಗ್ಧತೆಯನ್ನು ಶಾಶ್ವತವಾಗಿ ಸ್ಥಳಾಂತರಿಸಿಬಿಡುತ್ತದೆ. 

ಒಮ್ಮೆ ಆಮ್‌ಸ್ಟರ್‌ಡಾಮಿನಲ್ಲಿ ಲೈಂಗಿಕ ವಸ್ತುಗಳ ಅಂಗಡಿಯೊಂದರಲ್ಲಿ ಕೆ.ಜಿ.ಎಸ್ ಇದ್ದಾಗ ನಡೆದ ಘಟನೆಯೊಂದನ್ನು ಅವರ ಶಿಷ್ಯರೊಬ್ಬರು ನಮಗೆ ಹೇಳಿದ್ದರು.  ಹೆಣ್ಣುಗಂಡಿನ ಸಮಾಗಮದ ಶಿಲ್ಪವೊಂದನ್ನು ಖರೀದಿಸಿದಾಕೆಯೊಬ್ಬಳು ಕೂಡಲೆ ಅದನ್ನು ಹಿಂದಿರುಗಿಸಿದಳಂತೆ. ಕಾರಣ ಆ ಸಮಾಗಮ ಸರಾಗವಾಗಿರಲಿಲ್ಲ ಎಂಬುದು. ಹೆಣ್ಣಿನ ಶಿಲ್ಪದ ಭಗರಂಧ್ರವನ್ನು ಹೆಚ್ಚಿಸುವಂತೆ ಅಂಗಡಿಯಾತ ತನ್ನ ಸಹಾಯಕನಿಗೆ ಸೂಚಿಸುತ್ತಿದ್ದಾಗ ಆಕೆ ಚೀರಿದಳಂತೆ ‘ಅದರ ಬದಲು ಗಂಡಿನದರಲ್ಲಿ ಸ್ವಲ್ಪ ಮುರಿದುಹಾಕಿ’ ಎಂದು. 

ನೇರವಾಗಿ ತಮ್ಮದೇ ತತ್ವವನ್ನು ಹೇರದೆ, ಸ್ತ್ರೀವಾದ ಜ್ವಲಂತ ಸಮಕಾಲೀನ ತಾತ್ವಿಕತೆಗೂ ತಮ್ಮದೇ ಶೈಲಿಯಲ್ಲಿ, ಕಲಾವಿದರಾಗಿದ್ದುಕೊಂಡೇ, ಕಟುವ್ಯಂಗ್ಯದಲ್ಲಿ ಅನಾವರಣಗೊಳ್ಳುವ ಒಳನೋಟವನ್ನು ಕೆ.ಜಿ.ಎಸ್ ದಾಟಿಸುತ್ತಿದ್ದುದು ಇಂಥ ರೂಪಕಗಳಲ್ಲಿ. ಇಂದು ಮತ್ತು ಇನ್ನು ಕೆ.ಜಿ.ಎಸ್ ನಮ್ಮೊಂದಿಗಿಲ್ಲ.  ಭಾರತದ ಕಲಾವಲಯದಲ್ಲಿ ಇದು ಸೃಷ್ಟಿಸಿರುವ ಶೂನ್ಯ ದೊಡ್ಡದು. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಅವರ ಕೃತಿಗಳನ್ನು ಅನುಕರಿಸಿದವರು ಅನೇಕರಿದ್ದಾರೆಯೇ ಹೊರತು ಅವರ ಚಿಂತನಾವೈಖರಿಯನ್ನಲ್ಲ.

ಇನ್ನೇನು ಎಟುಕಿದರು ಎನ್ನುವಾಗಲೇ ಕೈಯಳತೆಯ ದೂರವೇ ಉಳಿದುಬಿಡುವ ಕೆ.ಜಿ.ಎಸ್ ಹೀಗಾದುದಕ್ಕೆ ಅವರು ಎತ್ತರದಲ್ಲಿ ಉಳಿದುಬಿಟ್ಟದ್ದು ಕಾರಣವಲ್ಲ. ಅವರ ಎತ್ತರಕ್ಕೆ ಏರುವ ಸಾಹಸವನ್ನು ನಮ್ಮವರಾರೂ ಮಾಡಲಿಲ್ಲ ಎಂಬುದೇ ಹೆಚ್ಚು ಸೂಕ್ತ. ಬಂಗಾಳಿಗಳಿಗಿಂತ ಹೆಚ್ಚು ಬಂಗಾಳಿಯಾಗಿದ್ದ  ಕೆ.ಜಿ.ಎಸ್ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದು ನಮ್ಮೊಂದಿಗೆಲ್ಲ ಒಡನಾಡಿ ಊರಿಗೆ ಹಿಂದಿರುಗಿದ ಎರಡು ವಾರಗಳ ನಂತರ ಅವರದ್ದೇ ವಿಶಿಷ್ಟ ಹಸ್ತಾಕ್ಷರದ ಲಕೋಟಿ ನಮ್ಮಲ್ಲನೇಕರಿಗೆ ತಲುಪಿತು. ಒಳಗೊಂದು ಅವರದ್ದೇ ಛಾಪಿನ, ಅವರೇ ರಚಿಸಿದ್ದ ಒಂದು ಪ್ರಾಣಿಯ ಜಲವರ್ಣದ ಅಸಲಿ ಕೃತಿಯಿತ್ತು.

ಇನ್ನಾದರೂ ಅನುಕರಿಸುವುದನ್ನು ನಿಲ್ಲಿಸಿ, ನೀವೂ ಅನನ್ಯರಾಗಿ ಎಂಬ ಅದರಲ್ಲಿನ ಅಲಿಖಿತ ಸಂದೇಶವನ್ನು ಮಾತ್ರ ಬಹಳಷ್ಟು ಮಂದಿ ಈಗ ಓದಬೇಕಾಗಿದೆ. ಯಾವುದು ಕ್ಷೀಣಿಸುತ್ತದೆಯೋ ಅದು ದಂತಕಥೆಯಾಗಲಾರದು. ಆದರೆ ಅದರ ಉಳಿಯುವಿಕೆಗೆ ಪುನರಾವರ್ತನೆ ಎಂಬುದು ಅನಿವಾರ್ಯವೋ ಏನೋ. ಕಲೆಯಲ್ಲೇ ದೈವೀಕತೆಯನ್ನು ಆವಾಹಿಸಿಕೊಂಡಿದ್ದ ಕೆ.ಜಿ.ಎಸ್ ಅವರು ದೈವವೂ ತಲೆದೂಗುವಂತಹ ದೃಶ್ಯಸಂಸ್ಕೃತಿಯನ್ನು ಕುರಿತಾದ ಇಚ್ಛಾಶಕ್ತಿಯನ್ನು ರೂಪಿಸಿಕೊಂಡಿದ್ದರು. ನಮಗೆ ಅವರು ಕೊಟ್ಟ ಚಿತ್ರಕ್ಕಿಂತಲೂ ಅವರು ತೋರಿದ ಮಾರ್ಗವನ್ನು ಸ್ಪಷ್ಟವಾಗಿ ಕಂಡುಕೊಂಡು ಅದರಲ್ಲಿ ಸಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.