ಮೈಸೂರು: ಸಂಶೋಧಕ ಡಾ.ಎಂ.ಎಂ. ಕಲುಬರ್ಗಿ ಹತ್ಯೆಯನ್ನು ಖಂಡಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸ್ಥಾನಕ್ಕೆ ಸಾಹಿತಿ, ಇಲ್ಲಿನ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಅರವಿಂದ ಮಾಲಗತ್ತಿ ರಾಜೀನಾಮೆ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ ರಾಜೀನಾಮೆ ಪತ್ರವನ್ನು ಇ-ಮೇಲ್ ಮೂಲಕ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ಅವರಿಗೆ ಕಳುಹಿಸಿದ್ದಾರೆ. ಡಾ.ಎಂ.ಎಂ. ಕಲುಬುರ್ಗಿ ಅವರು ಹತ್ಯೆಯಾದ ಪ್ರಸಂಗ ಅಭಿವ್ಯಕ್ತಿಯ ಸ್ವಾತಂತ್ರ್ಯದ ಹರಣದ ಪ್ರತೀಕವಾಗಿದೆ. ಇದು ಕೇವಲ ಎಂ.ಎಂ. ಕಲಬುರ್ಗಿ ಅವರ ಹತ್ಯೆಯಲ್ಲ.
ಅದು ವಿಚಾರವಾದದ ಹತ್ಯೆಯೂ ಆಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆಯನ್ನು ನೀಡಬೇಕಿತ್ತು. ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸಭೆ ಕರೆದಾಗ ಘಟನೋತ್ತರವಾಗಿ ಹೇಳಿಕೆಯನ್ನು ಸಮ್ಮತಿಗೆ ಮಂಡಿಸಬಹುದಿತ್ತು.
ಯಾವುದೇ ಸರ್ಕಾರಿ ಸಂಸ್ಥೆ ಇದ್ದಾಗಲೂ ಅಧ್ಯಕ್ಷರಿಗೆ ಸಾಂದರ್ಭಿಕ ವಿವೇಚನೆಯ ನಿಲುವಿಗೆ ಅವಕಾಶ ಇದ್ದೇ ಇರುತ್ತದೆ. ಇದನ್ನು ಅಧ್ಯಕ್ಷರು ಬಳಸಿಕೊಳ್ಳಬಹುದಿತ್ತು. ಹತ್ಯೆಯ ಪ್ರಕರಣವನ್ನು ಖಂಡಿಸಿ ಪ್ರಕಟಣೆ ನೀಡಿದ್ದರೆ ಅಕಾಡೆಮಿಯ ಘನತೆ ಹೆಚ್ಚುತ್ತಿತ್ತು.
ಕಲಬುರ್ಗಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಮೇಲಾಗಿ, ಕೇಂದ್ರದ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಇಂಥವರ ಹತ್ಯೆಯ ಸಂದರ್ಭದಲ್ಲಿ ಅಕಾಡೆಮಿಯು ಮೌನವಾಗಿರುವುದು ಸಮರ್ಥನೀಯವಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.