ADVERTISEMENT

ಕೈ ಶುದ್ಧವಿದ್ದರೆ ಯಾರೂ ಮಣಿಸಲಾರರು: ಕೋ.ಚೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2013, 19:59 IST
Last Updated 11 ಫೆಬ್ರುವರಿ 2013, 19:59 IST

ವಿಜಾಪುರ: `ಸಾಹಿತಿಗಳು ಸರ್ಕಾರದ ದಾಸರಾಗಬೇಕಿಲ್ಲ. ಕೈ ಶುದ್ಧವಿದ್ದರೆ, ನೈತಿಕ ಧೈರ್ಯವಿದ್ದರೆ ನಮ್ಮನ್ನು ಯಾರೂ ಮಣಿಸಲಾರರು' ಎಂದು ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚೆನ್ನಬಸಪ್ಪ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ಮಾಧ್ಯಮ ಕೇಂದ್ರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸಾಹಿತಿಗಳು ಯಾವ ರೀತಿ ಬರೆಯಬೇಕು ಎಂದು ಹೇಳಲು ಅಧಿಕಾರಸ್ಥರು ಯಾರು? ಆದರೆ ಕೆಲ ಸಾಹಿತಿಗಳು ಪ್ರಶಸ್ತಿ, ಗೌರವ, ಚಿನ್ನದ ಕಡಗದ ಆಸೆಗೆ ಒಳಗಾಗಿ ದಾಸರಾಗುತ್ತಾರೆ. ಇದು ಪತ್ರಕರ್ತರಿಗೂ ಅನ್ವಯಿಸುತ್ತದೆ. ಪತ್ರಿಕೆಗೆ ಸುದ್ದಿ ಸಂಗ್ರಹಿಸಲು ಅನುಕೂಲವಾಗಲಿ ಎಂದು ನೀಡಿರುವ `ಪ್ರೆಸ್ ಪಾಸ್' ಬಳಸಿಕೊಂಡು ಹಲವರು ಏನೇನೋ ಕೆಲಸ ಮಾಡಿಸುತ್ತಾರೆ' ಎಂದು ವಿಷಾದಿಸಿದರು.

ಯಾರೂ ಯಾರಿಗೂ ಅಡಿಯಾಳುಗಳಲ್ಲ. ಅದೇ ರೀತಿ ಯಾರೂ ಯಾರಿಗೂ ಮೇಲಲ್ಲ. ಅವರವರ ಕ್ಷೇತ್ರಕ್ಕೆ ಸೀಮಿತವಾಗಿ ಇನ್ನೊಬ್ಬರ ಕ್ಷೇತ್ರದಲ್ಲಿ ಕಾಲಿಡಬಾರದು. ಆಗ ಮಾತ್ರ ಯಾವುದೇ ಗೊಂದಲವಿರುವುದಿಲ್ಲ ಎಂದು ಅವರು ನುಡಿದರು.

ಬೌದ್ಧ ಧರ್ಮ: ಗೋಧ್ರೋತ್ತರ ಕಾಳ್ಗಿಚ್ಚಿಗೆ ಬಲಿಯಾಗುವುದಕ್ಕಿಂತ ಬೌದ್ಧರಾಗಿ ಉಳಿಯುವುದು ಉತ್ತಮ ಎಂಬ ಅಂಶವನ್ನು ಅಧ್ಯಕ್ಷೀಯ ಭಾಷಣದಲ್ಲಿ ಉಲ್ಲೇಖಿಸಲು ನಾನು 30 ದಿನಗಳ ಕಾಲ ಯೋಚನೆ ಮಾಡಿದ್ದೇನೆ. ಬೌದ್ಧ ಧರ್ಮ ಯಾವ ಧರ್ಮದ ವಿರುದ್ಧವೂ ಇಲ್ಲ. ಜೀವನಕ್ಕೆ ಬಡಿದಿರುವ ರೋಗವೇ ದುಃಖ. ದುಃಖ ನಿವಾರಣೆ ಇಂದಿನ ಅಗತ್ಯ. ದೇಶದ ಭದ್ರತೆ, ಏಕತೆ  ಕಾಪಾಡುವ ಕೆಲಸವಾಗಬೇಕಿದೆ.

ದೇಶದಲ್ಲಿ ಒಂದೇ ಜಾತಿ, ಒಂದೇ ಪಂಥ ಇರಲು ಸಾಧ್ಯವಿಲ್ಲ. ಬಸವಣ್ಣ ಕೂಡ ಜಾತಿ ಬಿಟ್ಟು ಧರ್ಮ ಕಟ್ಟಿದನೇ ಹೊರತು ಇನ್ನೊಂದು ಜಾತಿ ಕಟ್ಟಲಿಲ್ಲ. ಆದ್ದರಿಂದ ಸನಾತನಿಗಳ ಅಗ್ನಿಕುಂಡಕ್ಕೆ ಹಾನಿಯಾಗುವುದಕ್ಕಿಂತ ಮತಾಂತರ ಒಳಿತು ಎಂದು ಹೇಳಿದ್ದೇನೆ. ಅಮೆರಿಕದ ಅಬ್ರ್ರಹಾಂ ಲಿಂಕನ್ ಕೂಡ, ಅಮೆರಿಕ ಒಂದಾಗಿ ಉಳಿಯುವುದಾದರೆ ಗುಲಾಮಗಿರಿ ಒಪ್ಪಿಕೊಳ್ಳುತ್ತೇನೆ ಎಂದಿದ್ದ. ದೇಶ ವಿಭಜನೆಯಾಗುತ್ತದೆ ಎಂಬುದಾದರೆ ಒಪ್ಪಲ್ಲ ಎಂದು ಘೋರ ನಾಗರಿಕ ಯುದ್ಧ ಘೋಷಿಸಿದ್ದ ಎಂದು ಕೋ.ಚೆ ಹೇಳಿದರು.

ಭ್ರಷ್ಟಾಚಾರ: ಭ್ರಷ್ಟಾಚಾರ ವ್ಯಾಪಕವಾಗಲು ಜನರೇ ಕಾರಣ. ಅವರು ಪ್ರೋತ್ಸಾಹ ನೀಡುತ್ತಿರುವುದರಿಂದಲೇ ಇಂದು ಭ್ರಷ್ಟಾಚಾರ ವ್ಯಾಪಕವಾಗಿದೆ. ಶಾಲೆಯಿರಲಿ, ಬೋರ್ಡ್ ಕೂಡ ಇಲ್ಲದ ಅನೇಕ ಶಾಲೆಗಳ ಹೆಸರಲ್ಲಿ ಹಣ ದೋಚುತ್ತಿದ್ದುದನ್ನು ಹಿಂದೆ ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಪತ್ತೆ ಹಚ್ಚಿದ್ದರು. ಕನ್ನಡ ಶಾಲೆಗೆ ಅನುಮತಿ ಪಡೆದ ಚುನಾಯಿತ ಪ್ರತಿನಿಧಿಯೇ ಅಲ್ಲಿ ಇಂಗ್ಲಿಷ್ ಶಾಲೆ ನಡೆಸುತ್ತಾನೆ. ಇಂಥವರು ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದರು.

ಸಮ್ಮೇಳನ:  ಮನುಷ್ಯರ ಮನಸ್ಸನ್ನು ಶುದ್ಧಗೊಳಿಸಲು ಇಂಥ ಸಮ್ಮೇಳನಗಳು ಪದೇ ಪದೇ ನಡೆಯಬೇಕು. ವರ್ಷಕ್ಕೊಮ್ಮೆ ನಡೆಸಬೇಕೇ ಅಥವಾ ಎರಡು ವರ್ಷಕ್ಕೊಮ್ಮೆ ಆಗಬೇಕೆ ಎಂಬ ಚರ್ಚೆ ಇದೆ. ಸಾಧ್ಯವಾದರೆ ವಾರ ವಾರವೂ ಸಮ್ಮೇಳನಗಳನ್ನು ಏರ್ಪಡಿಸಿ ಎಂದು ಪಕ್ಕದಲ್ಲಿ ಕುಳಿತಿದ್ದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ಸಲಹೆ ಮಾಡಿದರು.

ಸಮ್ಮೇಳನದ ಉದ್ದೇಶ ಮನುಷ್ಯನ ಮನಸ್ಸು ಹಾಗೂ ಆತನ ಜೀವನ ಸ್ಥಿತ್ನಿ ಬೆಳೆಸುವುದಾಗಿದೆ. ಮನುಷ್ಯನ ದುಃಖವನ್ನು ನಿತ್ಯವೂ ತೊಳೆಯಬೇಕು. ಈ ಕೆಲಸ ಕತೆ, ಕಾವ್ಯದ ಮೂಲಕ ದಿನವೂ ಹೇಳಬೇಕು. 100 ಜನ ಕವಿಗಳು ಮಾಡಲಾಗದ ಇಂಥ ಕೆಲಸವನ್ನು ಒಂದು ಸಮ್ಮೇಳನ ಮಾಡುತ್ತದೆ ಎಂದು ಕುವೆಂಪು ಹೇಳಿದ್ದರು. ಆದರೆ ಇಷ್ಟೆಲ್ಲಾ ಖರ್ಚನ್ನು ನೋಡಿದಾಗ ಚಿಂತೆ ಮೂಡುತ್ತದೆ ಎಂದರು.

ನಿರ್ಣಯಗಳು: ಒಂದೇ ವಿಚಾರವನ್ನು ಹಲವಾರು ಬಾರಿ ಹೇಳುತ್ತಿದ್ದರೆ ಅದರ ಅನುಷ್ಠಾನ ಸಾಧ್ಯ ಎಂದು ಸಮ್ಮೇಳನಗಳಲ್ಲಿ ಅಂಗೀಕರಿಸುವ ನಿರ್ಣಯಗಳು ಜಾರಿಯಾಗಿಲ್ಲದಿದ್ದರೂ ಮತ್ತೆ ಮತ್ತೆ ಅದೇ ನಿರ್ಣಯಗಳನ್ನು ಕೈಗೊಳ್ಳುವ ಸಂಗತಿಯನ್ನು ಕೋ.ಚೆ ಸಮರ್ಥಿಸಿಕೊಂಡರು.

ಕಸಾಪಕ್ಕೆ ಮತ್ತು ಅದು ರಚಿಸುವ ಸಮಿತಿಗೆ ಸಾಂವಿಧಾನಿಕ ಅಧಿಕಾರವಿಲ್ಲ. ನಿರ್ಣಯಗಳ ಮೂಲಕ ನಾಡನ್ನು ಕಾಡುತ್ತಿರುವ ಸಮಸ್ಯೆಗಳನ್ನು ಲಕ್ಷಾಂತರ ಜನರ ಮುಂದೆ ಹೇಳಲಾಗುತ್ತದೆ. ಅಂದ ಮಾತ್ರಕ್ಕೆ ಅವೆಲ್ಲವೂ ಜಾರಿಯಾಗುತ್ತದೆ ಎಂಬ ಭ್ರಮೆಯೂ ನಮಗಿಲ್ಲ. ಕನ್ನಡಿಗರ ಕೂಗು, ಬದ್ಧತೆಯನ್ನು ಪರಿಣಾಮಕಾರಿಯಾಗಿ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ನಡೆದಿದೆ ಎಂದು ಹಾಲಂಬಿ ಹೇಳಿದರು.

ಹಣ ಬಿಡುಗಡೆ: ಸರ್ಕಾರ ಹಣವನ್ನು ನೇರವಾಗಿ ಜಿಲ್ಲಾಧಿಕಾರಿ ಅವರಿಗೆ ಬಿಡುಗಡೆ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೋ.ಚೆ, ಕೊಟ್ಟ ಹಣ ಸದುಪಯೋಗವಾಗಿಲ್ಲ ಎಂಬ ಸಂಶಯದ ಮೇಲೆ ಹಾಗೂ ಖರ್ಚು ವೆಚ್ಚದ ಮೇಲೆ ನಿಗಾ ಇಡಲು ಈ ರೀತಿ ಮಾಡಿರಬಹುದು. ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿದರೆ ಲೆಕ್ಕಪರಿಶೋಧನೆಗೆ ಒಳಪಡಿಸಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಆರ್.ರಂಗನಾಥ್ ಸ್ವಾಗತಿಸಿದರು. ವಾರ್ತಾ ಇಲಾಖೆ ಉಪ ನಿರ್ದೇಶಕ ಬಸವರಾಜ ಕಂಬಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT