ಮೈಸೂರು: ಕಳವು ಮಾಡಿದ ಚಿನ್ನಾಭರಣವನ್ನು ಕ್ಷಮಾಪಣಾ ಪತ್ರದೊಂದಿಗೆ ಕೊರಿಯರ್ ಮೂಲಕ ಮರಳಿಸಿದ ಅಪರೂಪದ ಪ್ರಕರಣವೊಂದು ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು ₨ 8 ಲಕ್ಷ ಮೌಲ್ಯದ ಆಭರಣಗಳ ಪೈಕಿ 207 ಗ್ರಾಂ ಚಿನ್ನವನ್ನು ಹಿಂತಿರುಗಿಸಿದ್ದು, ಉಳಿದ 90 ಗ್ರಾಂ ಚಿನ್ನ ಮತ್ತು 1.5 ಕೆ.ಜಿ. ಬೆಳ್ಳಿ ಸಾಮಗ್ರಿಯನ್ನು ಮರಳಿಸಲು 3 ತಿಂಗಳ ಕಾಲಾವಕಾಶವನ್ನು ಕೇಳಿದ್ದಾರೆ. ಈ ನಡುವೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಏನಿದು ಪ್ರಕರಣ: ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕ, ತೊಣಚಿಕೊಪ್ಪಲು ಬಡಾವಣೆಯ 1ನೇ ಕ್ರಾಸ್ ನಿವಾಸಿ ನಂಜುಂಡಸ್ವಾಮಿ ಅವರು ತಮ್ಮ ಪುತ್ರಿ ಪೂಜಾ ವಿವಾಹಕ್ಕೆ ಚಿನ್ನಾಭರಣ ಖರೀದಿಸಿದ್ದರು. ನ. 18ರಂದು ನಿಶ್ಚಯವಾಗಿದ್ದ ಮದುವೆಗೆ ಆಹ್ವಾನ ಪತ್ರ ವಿತರಿಸಲು ನ. 2ರಂದು ಬೆಳಿಗ್ಗೆ ಬೆಂಗಳೂರಿಗೆ ತೆರಳಿದ್ದರು.
ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯಾಗಿರುವ ಅವರ ಪುತ್ರ ಚಂದನ್ ಮಾತ್ರ ಮನೆಯಲ್ಲಿದ್ದರು. ಈ ವೇಳೆ ಮನೆಗೆ ಬಂದ ಚಂದನ್ ಸ್ನೇಹಿತರು ನ. 3ರವರೆಗೆ ಜೊತೆಯಲ್ಲಿದ್ದರು. ಬೆಂಗಳೂರಿಗೆ ಮರಳಲು ಚಂದನ್ ಮನೆಯ ಬಾಗಿಲು ಹಾಕಿ ಕೀಯನ್ನು ಸ್ಕೂಟರ್ನಲ್ಲಿಟ್ಟು, ದ್ವಿಚಕ್ರ ವಾಹನದ ಕೀ ಅನ್ನು ಮನೆಯ ಕಿಟಕಿಯಲ್ಲಿಟ್ಟಿದ್ದರು.
ನ. 3ರಂದು ಮಧ್ಯಾಹ್ನ ನಂಜುಂಡಸ್ವಾಮಿ ಅವರ ಮನೆಯ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿತ್ತು. ಅನುಮಾನಗೊಂಡ ಮನೆಯ ಮಾಲೀಕರು ನಂಜುಂಡಸ್ವಾಮಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸಂಜೆ ಅವರು ಮರಳಿದಾಗ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಮನೆ ಬೀಗ ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ
ಗಳನ್ನು ದೋಚಿ ಪರಾರಿಯಾಗಿದ್ದರು.
ಎರಡೇ ದಿನದಲ್ಲಿ ವಾಪಸ್: ಘಟನೆ ನಡೆದು ಎರಡು ದಿನಗಳ ಬಳಿಕ ನಂಜುಂಡಸ್ವಾಮಿ ಅವರ ಮನೆಗೆ ಕೊರಿಯರ್ವೊಂದು ಬಂತು. ವಿ.ವಿ. ಮೊಹಲ್ಲಾದಿಂದ ನ. 5ರಂದು ರವಾನೆಯಾದ ಈ ಕೊರಿಯರ್‌ನಲ್ಲಿ 220 ಗ್ರಾಂ ಚಿನ್ನಾಭರಣದ ಜೊತೆಗೆ ಪತ್ರವೊಂದಿತ್ತು.
ವಿವಾಹಕ್ಕೆ ಖರೀದಿ ಮಾಡಿದ ಚಿನ್ನಾಭರಣ ಮರಳಿ ಸಿಕ್ಕಿದ್ದು ನಂಜುಂಡಸ್ವಾಮಿ ಅವರ ಕುಟುಂಬಕ್ಕೆ ಸಮಾಧಾನ ಉಂಟು ಮಾಡಿತು. ಆದರೆ, ಪತ್ರದಲ್ಲಿದ್ದ ಸಾರಾಂಶ ಹಲವು ಸಂಶಯಗಳನ್ನು ಹುಟ್ಟು ಹಾಕಿತು.
‘ನನ್ನ ಪುತ್ರ ತಪ್ಪು ಮಾಡಿದ್ದಾನೆ. ಉಳಿದ ಚಿನ್ನಾಭರಣಗಳನ್ನು ಕೆಲವೇ ದಿನಗಳಲ್ಲಿ ಹಿಂತಿರುಗಿಸುತ್ತೇವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೊಲೀಸರಿಗೆ ನೀಡಿದ ದೂರನ್ನು ಹಿಂಪಡೆಯಿರಿ’ ಎಂದು ರಮೇಶ್ ಎಂಬುವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸ್ನೇಹಿತರ ಮೇಲೆ ಶಂಕೆ: ತನಿಖೆ ಚುರುಕುಗೊಳಿಸಿರುವ ಪೊಲೀಸರು ಘಟನೆ ನಡೆದ ದಿನ ಚಂದನ್ ಅವರೊಂದಿಗೆ ತಂಗಿದ್ದ ಸ್ನೇಹಿತರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ನೇಹಿತರನ್ನು ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಪ್ರಕರಣವನ್ನು ಹಿಂಪಡೆಯುವಂತೆ ನಂಜುಂಡಸ್ವಾಮಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.