ADVERTISEMENT

ಕೋ.ಚೆನ್ನಬಸಪ್ಪ 79ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ

`ಕನ್ನಡ' ಒಡೆಯುವ ಮಾತು ಬೇಡ

​ಪ್ರಜಾವಾಣಿ ವಾರ್ತೆ
Published 4 ಜನವರಿ 2013, 19:59 IST
Last Updated 4 ಜನವರಿ 2013, 19:59 IST

ಬೆಂಗಳೂರು: ವಿಜಾಪುರದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಕೋ.ಚೆನ್ನಬಸಪ್ಪ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಚೆನ್ನಬಸಪ್ಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.

ಕೋ.ಚೆನ್ನಬಸಪ್ಪ ಅವರ ಆಯ್ಕೆಯ ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಸಾಹಿತ್ಯಲೋಕದಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಾದೇಶಿಕ ಭೇದ ಮರೆತು ರಾಜ್ಯದ ಎಲ್ಲ ಭಾಗದ ಜನತೆ ಈ ನಡೆಯನ್ನು ಸ್ವಾಗತಿಸಿದೆ. ಡಾ.ಎಂ.ಚಿದಾನಂದಮೂರ್ತಿ, ಡಾ.ಎಂ.ಎಂ. ಕಲಬುರ್ಗಿ, ಡಾ.ಬರಗೂರು ರಾಮಚಂದ್ರಪ್ಪ, ಸಾರಾ ಅಬೂಬಕ್ಕರ್, ಡಾ.ಹಂಪ ನಾಗರಾಜಯ್ಯ, ಡಾ. ಸಿದ್ಧಲಿಂಗಯ್ಯ, ನಾ.ಡಿಸೋಜ ಮುಂತಾದ ಸಾಹಿತಿಗಳ ಹೆಸರು ಪಟ್ಟಿಯಲ್ಲಿದ್ದವು. ಆದರೆ ಚೆನ್ನಬಸಪ್ಪ ಅವರು ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿ ಅವರನ್ನು ಹುಡುಕಿಕೊಂಡು ಹೋಗಿದೆ.

ಕೋ.ಚೆ. ಎಂದೇ ಚಿರಪರಿಚಿತರಾಗಿರುವ ಅವರು ಕಾನೂನು ಮತ್ತು ಸಾಹಿತ್ಯ ಎರಡನ್ನೂ ಪ್ರೀತಿಸುತ್ತ, ಅದಕ್ಕಾಗಿ ದುಡಿಯುತ್ತ ಬಂದವರು. ವೃತ್ತಿಯಲ್ಲಿ ನ್ಯಾಯಾಧೀಶರಾಗಿದ್ದುಕೊಂಡು, ಕನ್ನಡ ನಾಡು-ನುಡಿ ಬಗ್ಗೆ ಅದಮ್ಯ ಪ್ರೀತಿ ಬೆಳೆಸಿಕೊಂಡವರು. `ಹಿಂದಿರುಗಿ ಬರಲಿಲ್ಲ', `ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ', `ಅರವಿಂದರು ಮತ್ತು ಅವರ ಆಶ್ರಮ' ಮತ್ತಿತರ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ಹೊಸ ಜವಾಬ್ದಾರಿಗೆ ಹೆಗಲು ಕೊಟ್ಟ ಕೋ.ಚೆ. ಅವರ ನುಡಿಗಳು-

ಹೋರಾಟದ ಆ ದಿನಗಳು...
ಆಂಧ್ರಪ್ರದೇಶದ ಅನಂತಪುರದಲ್ಲಿ ಕಾಲೇಜಿನಲ್ಲಿ ಓದುವಾಗಲೇ ಹೋರಾಟದ ದಿನಗಳು ಆರಂಭವಾದವು. ದೇಶದಲ್ಲಿ ಆಗ ಸ್ವಾತಂತ್ರ್ಯದ ಹಸಿವಿನ ಬಿಸಿ ಏರಿತ್ತು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡನಾಗಿ ಭಾಗವಹಿಸಿದ್ದಕ್ಕೆ ಬಂಧನ, ಸೆರೆಮನೆವಾಸ ಎಲ್ಲವೂ ಆಯಿತು. ಹೊಸ ಅನುಭವಗಳಿಗೆ ವೇದಿಕೆಯಾಯಿತು ಸೆರೆಮನೆ. (ಆಗಿನ ಕಾಲಕ್ಕೆ ಸೆರೆಮನೆ ಬಗ್ಗೆ ಪವಿತ್ರ ಭಾವ ಇತ್ತು. ದೇಶಪ್ರೇಮಿಗಳೂ ಅಲ್ಲಿರುತ್ತಿದ್ದರು) ನನ್ನ ದೇಶ, ಭಾಷೆ ಉಳಿಸಿಕೊಳ್ಳುವ, ಬೆಳೆಸುವ ಸಲುವಾಗಿ ಬಡಿದಾಡುವ ಬಿಸಿ ರಕ್ತದ ಚೈತನ್ಯದ ಚಿಲುಮೆಯ ಪಡೆಯೇ ಸೆರೆಮನೆಯಲ್ಲಿತ್ತು.

ರಾಜ್ಯದಲ್ಲಿ ವಿಭಜನೆಯ ಕೂಗು ಕೇಳಿ ಬರುತ್ತಿದೆ. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ನೀವು ಈ ಬೆಳವಣಿಗೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ಬಹಳ ಹಿಂದೆಯೇ ಕುವೆಂಪು ವಿಶ್ವಮಾನವ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ. ಒಂದೆಡೆ ಜಗತ್ತೇ ಕಿರಿದಾಗುತ್ತಿದೆ. ವಿಶ್ವ ಒಂದಾಗಲು ಹೊರಟಿದೆ. ಇಂತಹ ಸ್ಥಿತಿಯಲ್ಲಿ ನಾವು ಕಷ್ಟಪಟ್ಟು ಕಟ್ಟಿದ ಕರ್ನಾಟಕವನ್ನು ಒಡೆಯುವ ಬಗ್ಗೆ ಮಾತನಾಡಬಾರದು.

ADVERTISEMENT

ಇಂಥದ್ದೊಂದು ಕೂಗು ಕೇಳಿ ಬಂದಿದ್ದಾದರೂ ಏಕೆ? ಮೇಲ್ನೋಟಕ್ಕೆ ಇದು ಬಾಯ್ತಪ್ಪಿ ಬಂದ ಮಾತು ಎನಿಸಿದರೂ ಒಳಗಿರುವ ಅಸಮಾಧಾನದ ಕಿಡಿಯನ್ನು ಎಷ್ಟು ದಿನ ಮುಚ್ಚಿಕೊಳ್ಳಬಹುದು?
ಹೌದು, ಒಡೆಯುವ ಈ ಮಾತಿನ ಹಿಂದೆ ನೋವಿದೆ, ಅಸಮಾಧಾನವಿದೆ, ರೋಷ-ಆಕ್ರೋಶವಿದೆ. ಹಿಂದಿನಿಂದಲೂ ಆಡಳಿತ ನಡೆಸುವವರು ಪ್ರಾದೇಶಿಕ ಸಮಾನತೆಯನ್ನು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಎಲ್ಲರ ನೋವನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಕೆಲಸ ಆಗಿಲ್ಲ. ಉತ್ತರ ಕರ್ನಾಟಕದ ಜನತೆಗೆ ನಿರಂತರ ಅನ್ಯಾಯವಾಗುತ್ತ ಬಂದಿದೆ. ಇದೆಲ್ಲದರ ಫಲವೇ ಇಂದು ಈ ಕೂಗನ್ನು ಹೊರಹೊಮ್ಮಿಸಿದೆ ಎಂದು ಹೇಳಬಹುದು. ಆದರೆ ಹೀಗೆಂದು ನಾಡು ಒಡೆಯುವ ಮಾತು ಬೇಡ. ನಮ್ಮ ಪಾಲನ್ನು ನಾವು ನ್ಯಾಯಯುತವಾಗಿ ಕೇಳೋಣ.

ಕನ್ನಡ ಅಂದು ಇಂದು
ಬಹಳ ವ್ಯತ್ಯಾಸವಿದೆ. ಅಂದು ಹೊರಗಿನವರಿಂದ ಕನ್ನಡ ನಲುಗಿತ್ತು. ಇಂದು ನಮ್ಮವರೇ ಕನ್ನಡದ ನೆಲೆಯನ್ನು ಪ್ರಶ್ನಿಸುತ್ತಿದ್ದಾರೆ. ಗಡಿ ಭಾಗದ ಹಳ್ಳಿಗಳಲ್ಲಿ ಅಂದು ಹೊರಗೆ ಬೇರೆ ಭಾಷೆಯ ಫಲಕ ಹಾಕಿ ಒಳಗಡೆ ಕನ್ನಡದ ಪಾಠ ಮಾಡಲಾಗುತ್ತಿತ್ತು. ಆದರೆ ಈಗ ಹೊರಗೆ ಕನ್ನಡದ ಫಲಕವಿದ್ದರೂ ಒಳಗೆ ಇಂಗ್ಲಿಷ್ ಪಾಠಗಳು ನಡೆಯುತ್ತವೆ.

ಕನ್ನಡ ಉಳಿಸುವ ಕೆಲಸ ಯಾರಿಂದ ಆಗಬೇಕು?
ಪ್ರತಿಯೊಬ್ಬ ಕನ್ನಡಿಗನಿಂದ ಈ ಕೆಲಸ ಆಗಬೇಕು. ಕನ್ನಡ ಉಳಿದರೆ ಸಾಹಿತ್ಯ ಬೆಳೆಯುತ್ತದೆ. ಕೇವಲ ಸರ್ಕಾರದ ಮೇಲೆ ಭರವಸೆ ಇಟ್ಟುಕೊಂಡರೆ ಆಗದು. ಪ್ರತಿಯೊಬ್ಬರೂ ಕನ್ನಡ ಉಳಿಸಲು ಬದ್ಧರಾಗಬೇಕು. ಜನರ ನಾಲಗೆಯ ಮೇಲೆ ಕನ್ನಡ ಕುಣಿದಾಡಬೇಕು. ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು.

ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟ ಸರ್ಕಾರಕ್ಕೆ ನಿಮ್ಮ ಸಂದೇಶ?
ಕೇವಲ ಭಾವನಾತ್ಮಕವಾಗಿ ಮಾತನಾಡಿದರೆ ಆಗದು. ಪ್ರಾಯೋಗಿಕವಾಗಿ, ವ್ಯಾವಹಾರಿಕವಾಗಿಯೂ ಆಲೋಚಿಸಬೇಕಾಗುತ್ತದೆ. ಒಂದು ಹಳ್ಳಿಯಲ್ಲಿ ಒಂದೇ ಮಗು ಶಾಲೆಗೆ ಬಂದರೂ ಶಾಲೆ ನಡೆಸಬೇಕು ಎಂದು ಹೇಳಲಾಗದು. ಗ್ರಾಮೀಣ ಪ್ರದೇಶದಲ್ಲಿ ಒಂದು ಸಾಧಾರಣ ಮಟ್ಟದಲ್ಲಿ ಶಾಲೆ ನಡೆಸಲು ತಿಂಗಳಿಗೆ ಕನಿಷ್ಠ 50 ಸಾವಿರ ರೂ ಖರ್ಚು ಬರುತ್ತದೆ. ಆದ್ದರಿಂದ ಪೋಷಕರೂ ಶಿಕ್ಷಣದ ಮಹತ್ವವನ್ನು ಅರಿತು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು. ಶಾಲೆಯಲ್ಲಿ ಕನಿಷ್ಠ ಸಂಖ್ಯೆಯ ಮಕ್ಕಳು ಇದ್ದರೆ ಅಂತಹ ಶಾಲೆಯನ್ನು ಮುಚ್ಚುವ ಮಾತೇ ಬರುವುದಿಲ್ಲ.

ಕನ್ನಡ ಕಲಿತವರ ಭವಿಷ್ಯ?
ಕನ್ನಡ ಕಲಿತವರಿಗೆ ನೌಕರಿ ಸಿಗುವುದಿಲ್ಲ ಎನ್ನುವುದು ಬಹಳ ಜನರ ನಂಬಿಕೆ. ಹಾಗಾಗಿ, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಎಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ ಕನ್ನಡದಿಂದ ಆತ್ಮಜ್ಞಾನ ವೃದ್ಧಿಯಾಗುತ್ತದೆ. ಹೊಸ ದೃಷ್ಟಿಕೋನ ದೊರೆಯುತ್ತದೆ. ಚೈತನ್ಯ ಮೂಡುತ್ತದೆ. ಇದರಿಂದ ನಮಗೆ ಬೇಕಾದ ಭವಿಷ್ಯವನ್ನು ನಾವೇ ಕಟ್ಟಿಕೊಳ್ಳಬಹುದು.

ಸರಳತೆಯೇ ವಿಶೇಷ
ಸರಳತೆಯೇ ಈ ಬಾರಿಯ ಸಮ್ಮೇಳನದ ವಿಶೇಷ. ಉತ್ತರ ಕರ್ನಾಟಕದ ಜನತೆ ಇನ್ನೂ ಬರದ ಬೇನೆಯಿಂದ ಹೊರಗೆ ಬಂದಿಲ್ಲ. ಈ ಬಾರಿಯೂ ಮಳೆ ಕೊರತೆಯ ಕಾರಣ, ರೈತನ ಮುಖದ ಮೇಲೆ ಮಂದಹಾಸ ಮೂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದ್ದೂರಿತನ ಪ್ರದರ್ಶನ ಮಾಡಲಾಗದು. ಸಾಹಿತ್ಯ ಸಮ್ಮೇಳನದ ಗಾಂಭಿರ್ಯಕ್ಕೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಲಾಗುವುದು. ನಮ್ಮ ಭಾಗದ ಬಡವರ ಊಟ ಸಜ್ಜೆ ರೊಟ್ಟಿ, ಬದನೆ ಪಲ್ಯ, ಮೊಸರು, ಚಟ್ನಿ. ಸಾಮಾನ್ಯ ವಸತಿ ವ್ಯವಸ್ಥೆ ಮಾಡಲಾಗುವುದು.
-ಉಸ್ತುವಾರಿ ಸಚಿವ ಎಸ್.ಕೆ.ಬೆಳ್ಳುಬ್ಬಿ

ಸಮ್ಮೇಳನ ಒಂದು ದಿನ ಮುಂದಕ್ಕೆ
ಸಮ್ಮೇಳನ ಫೆಬ್ರುವರಿ 8ರ ಬದಲಾಗಿ, 9ರಂದು ಆರಂಭವಾಗಿ, 11ರವರೆಗೆ ನಡೆಯಲಿದೆ. ವಿಜಾಪುರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ಕಾರಣಗಳಿಂದ ವಿಶೇಷವಾಗಿದೆ. 90 ವರ್ಷಗಳ ನಂತರ ಮತ್ತೆ ವಿಜಾಪುರದಲ್ಲಿ ಸಮ್ಮೇಳನ ನಡೆಯುತ್ತಿರುವುದು ಒಂದು ಕಾರಣ. ಎರಡನೆಯದಾಗಿ ಇಂತಹ ಐತಿಹಾಸಿಕ ಸ್ಥಳದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ 90 ವರ್ಷದ ಉತ್ಸಾಹಿ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು.

ಸಮ್ಮೇಳನಕ್ಕೆ 5ರಿಂದ 6 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಆದರೆ ಪ್ರಾಥಮಿಕ ಹಂತದಲ್ಲಿ ಒಂದು ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಇನ್ನೂ ಎರಡು ಕೋಟಿ ಹಣವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವಂತೆ ಕೋರಲಾಗಿದೆ. ವಿಜಾಪುರ ಜಿಲ್ಲಾ ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನೂ ಸಮ್ಮೇಳನಕ್ಕೆ ಬಳಸಿಕೊಳ್ಳಲಾಗುವುದು. ಸಚಿವರು, ಶಾಸಕರು ಸಮ್ಮೇಳನಕ್ಕೆ ಧನ ಸಹಾಯ ನೀಡಲಿದ್ದಾರೆ.

ಈ ಹಣದಲ್ಲಿ ಕನಿಷ್ಠ 50 ಲಕ್ಷ ರೂಪಾಯಿ ಉಳಿಸಿ ಸಾಹಿತ್ಯ ಭವನ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬಾರಿ ಸಮ್ಮೇಳನ ವಿಜಾಪುರದಲ್ಲಿ ನಡೆಯುವುದರಿಂದ ಇಲ್ಲಿನ ಗಜಲ್ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಕನ್ನಡ ಗಜಲ್‌ಗಳನ್ನು ಹಾಡಲು ವಿಶೇಷ ವೇದಿಕೆ ಒದಗಿಸಲಾಗುವುದು.
-ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.