ADVERTISEMENT

ಗಂಡು ತನ್ನ ಪ್ರತಿಸ್ಪರ್ಧಿ ಎಂದು ಹೆಣ್ಣು ಭಾವಿಸಬೇಕಿಲ್ಲ: ಚಂಪಾ

​ಪ್ರಜಾವಾಣಿ ವಾರ್ತೆ
Published 31 ಮೇ 2015, 19:30 IST
Last Updated 31 ಮೇ 2015, 19:30 IST

ಬೆಂಗಳೂರು: ‘ಹೆಣ್ಣುಮಕ್ಕಳು ಬರೆಯುವುದೇ ಬಂಡಾಯ. ಹಾಗಾಗಿ, ಗಂಡು ತನ್ನ ಪ್ರತಿಸ್ಪರ್ಧಿ ಎಂದು ಹೆಣ್ಣು  ಭಾವಿಸಬೇಕಾಗಿಲ್ಲ’ ಎಂದು ಹಿರಿಯ ಲೇಖಕ  ಪ್ರೊ. ಚಂದ್ರಶೇಖರ  ಪಾಟೀಲ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಆಯೋಜಿಸಿದ್ದ  ಸಮಾರಂಭದಲ್ಲಿ ಹಿರಿಯ ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಅವರಿಗೆ 2015ರ ಸಾಲಿನ ‘ಅನುಪಮಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಯಾವುದಕ್ಕೂ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಸ್ತ್ರೀಶಕ್ತಿಯ ಅನಾವರಣವಾಗಿದೆ. ತನಗೆ ಒಂದು ಅಸ್ಮಿತೆ ಇದೆ. ಅದನ್ನು ಸ್ಥಾಪಿಸಬೇಕು ಎಂಬುದು ಮಹಿಳಾ ಸಾಹಿತ್ಯದ ಮೊದಲ ಆದ್ಯತೆಯಾಗಿತ್ತು.  ಈಗ ಆ ಅಸ್ಮಿತೆ ಸ್ಥಾಪಿಸಿಯಾಗಿದೆ’ ಎಂದರು. 

ಪುರುಷ ಪ್ರಧಾನ ಸಮಾಜದಲ್ಲಿ ‘ಪುರುಷ’ ಎಂಬ ಪದಕ್ಕೆ ಆಕಾರ ಬರುವುದು ಗಂಡ ಎಂಬ ಮನ್ನಣೆಯಿಂದ. ಆತ ಅಧಿಕೃತವಾಗಿ ಸಮಾಜದ ಮನ್ನಣೆ ಪಡೆದು ಹೆಣ್ಣನ್ನು ಸುಲಿಗೆ ಮಾಡುವವ. ಆದರೆ, ಗಂಡಿನ ಪಾರಮ್ಯವನ್ನು ಕಡೆಗಣಿಸಿ ಮುಂದೆ ಹೋಗುವ ಹಂತಕ್ಕೆ ಹೆಣ್ಣು ಬೆಳೆದಿದ್ದಾಳೆ. ಗಂಡು ಎಂಬುದು ವ್ಯಸನವಾಗಿ ಮಹಿಳೆಯರನ್ನು ಕಾಡಬೇಕಾದ ಅವಶ್ಯಕತೆ ಈಗ ಅಷ್ಟಾಗಿ ಉಳಿದಿಲ್ಲ. ಹಾಗಾಗಿ ಹೆಣ್ಣುಮಕ್ಕಳು ಬದುಕಿನ ಇತರ ಅನುಭವ, ಸಾಧ್ಯತೆಯ ಕಡೆಗೆ ಗಮನಹರಿಸುವ ಅಗತ್ಯವಿದೆ’ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.

ಪುರುಷ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯ ಎಂಬ ಸಮಾನಾಂತರ ಗೆರೆಗಳು ಅಳಿಸಿ ಹೋಗಿ ಒಟ್ಟಾರೆ ಸಾಹಿತ್ಯ ಬೆಳೆಯಬೇಕಾಗಿದೆ ಎಂದು ಹೇಳಿದರು.

ಸಲ್ಲೇಖನ ಸ್ತ್ರೀವಾದ: ಶಶಿಕಲಾ ವೀರಯ್ಯಸ್ವಾಮಿ ಅವರ ಬದುಕು–ಬರಹ ಕುರಿತು   ಮಾತನಾಡಿದ  ಲೇಖಕ ಡಾ. ವೆಂಕಟಗಿರಿ ದಳವಾಯಿ, ‘ಶಶಿಕಲಾ ವೀರಯ್ಯಸ್ವಾಮಿ ಅವರದು ಸಲ್ಲೇಖನ ಸ್ತ್ರೀ ವಾದ’ ಎಂದು ವಿಶ್ಲೇಷಣೆ ಮಾಡಿದರು.

‘ಎಲ್ಲ ನೋವುಗಳನ್ನು ಆರ್ದ್ರತೆಯೊಳಗೆ ಇರಿಸಿಕೊಂಡು ಮೌನವಾಗಿ ಪ್ರತಿಭಟಿಸುವ ಶಶಿಕಲಾ ಅವರ ಗುಣ, ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬರುತ್ತಿರುವ   ಸಲ್ಲೇಖನ ವ್ರತದಂತೆ ಕಾಣುತ್ತದೆ’ ಎಂದರು.

ಧಾರಾವಾಹಿಗಳನ್ನು ವಿರೋಧಿಸಿ: ‘ಟೀವಿ ಧಾರಾವಾಹಿಗಳಲ್ಲಿ ಮಹಿಳೆಯರನ್ನು ಖಳನಾಯಕಿಯರನ್ನಾಗಿ ಬಿಂಬಿಸಲಾಗುತ್ತಿದೆ. ಇದು ಅನಾಹುತಕಾರಿ ಬೆಳವಣಿಗೆ. ಇದನ್ನು ಎಲ್ಲ ಮಹಿಳೆಯರೂ ವಿರೋಧಿಸಬೇಕು’ ಎಂದು ಶಶಿಕಲಾ ವೀರಯ್ಯ ಸ್ವಾಮಿ ಹೇಳಿದರು. ಬರೇ ಕುತ್ಸಿತ ಬುದ್ಧಿಯ ಮಹಿಳೆಯರ ಚಿತ್ರಣಗಳನ್ನು ಧಾರಾವಾಹಿಗಳಲ್ಲಿ ಬಿಂಬಿಸಲಾಗುತ್ತಿದೆ. ವಿಚಿತ್ರ ಮುಖಭಾವ, ವೇಷ ಭೂಷಣಗಳು ಮಹಿಳೆಯರ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತದೆ. ಧಾರಾವಾಹಿಗಳಲ್ಲಿ ಕನ್ನಡ ಭಾಷೆಯನ್ನು ನಾಶ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.