ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ನೆರೆ ರಾಜ್ಯಗಳ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಕನ್ನಡ ಪುಸ್ತಕ ವಿತರಣೆ ಮಾಡುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಇದರ ಪರಿಣಾಮ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ಈ ವರ್ಷವೂ ಕನ್ನಡ ಪುಸ್ತಕ ದೊರೆಯುವುದು ದುಸ್ತರವಾಗಿದೆ.
ಕಳೆದ 30–35 ವರ್ಷಗಳಿಂದ ಗಡಿ ಕನ್ನಡ ಶಾಲೆಗಳಲ್ಲಿ ಕನ್ನಡ ಮಾತೃಭಾಷೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಪುಸ್ತಕ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದಾಗ ರಾಜ್ಯದ ಅಧಿಕಾರಿಗಳು ಒಂದಿಷ್ಟು ಪುಸ್ತಕ ಪೂರೈಕೆ ಮಾಡುವುದು ನಡೆದುಕೊಂಡು ಬಂದಿದೆ.
ಕಳೆದ ವರ್ಷ ಫೆ. 24ರಂದು ‘ಪ್ರಜಾವಾಣಿ’ಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ವರದಿ ಪ್ರಕಟವಾಗಿದ್ದರ ಪರಿಣಾಮ ಸದನದಲ್ಲಿ ಮರುದಿನ ಚರ್ಚೆಯಾಗಿತ್ತು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಗಡಿ ರಾಜ್ಯಗಳ ಕನ್ನಡ ಶಾಲೆಗಳಿಗೆ ಕನ್ನಡ ಪುಸ್ತಕ ವಿತರಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು.
ಆದರೆ, ಈ ಭರವಸೆ ಈಡೇರಿದಂತೆ ಕಾಣುತ್ತಿಲ್ಲ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಒಟ್ಟು 19 ಕನ್ನಡ ಶಾಲೆಗಳಿದ್ದು, 3,300 ವಿದ್ಯಾರ್ಥಿಗಳಿ ದ್ದಾರೆ. ಆದರೆ ಇಲ್ಲಿ ಅಗತ್ಯವಿರುವಷ್ಟು ಪುಸ್ತಕಗಳು ಬಂದಿಲ್ಲ ಎನ್ನುತ್ತಾರೆ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಮೀನಹಳ್ಳಿ ಗಿರಿಜಾಪತಿ ಮಠ್.
‘ಉಪ ನಿರ್ದೇಶಕರ ಕಚೇರಿಗೆ ಸಾಕಷ್ಟು ಸಲ ಅಲೆದಾಡಿದ್ದು, 1800 ಕನ್ನಡ ಪುಸ್ತಕಗಳನ್ನು ಪಡೆದುಕೊಳ್ಳಲಾಗಿದೆ. ಉಳಿದ ಪುಸ್ತಕಗಳನ್ನು ಕೇಳಿದರೆ ಇಂದು– ನಾಳೆ ಎಂದು ಹೇಳುತ್ತಾರೆ. ಹೀಗಾಗಿ ಹಳೆಯ ಕನ್ನಡ ಪುಸ್ತಕಗಳನ್ನೇ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪುಸ್ತಕ ನೀಡುವಂತೆ ಸರ್ಕಾರಿ ಆದೇಶವಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅಗತ್ಯವಿರುವಷ್ಟು ಪುಸ್ತಕ ದೊರೆ ಯುತ್ತಿಲ್ಲ. ಸಾಕಷ್ಟು ತೊಂದರೆಗಳ ನಡುವೆಯೂ ಮಾತೃಭಾಷೆಯಲ್ಲಿ ಓದಲು ಆಸಕ್ತಿ ಹೊಂದಿರುವ ಮಕ್ಕಳಿಗೆ ಕನ್ನಡ ಪುಸ್ತಕ ಪೂರೈಸಲು ಸತಾಯಿಸುತ್ತಿರು ವುದು ಸರಿಯೇ’ ಎಂದು ಅವರು ಪ್ರಶ್ನಿಸುತ್ತಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಪುಸ್ತಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದೂ ಅವರು ಮನವಿ ಮಾಡುತ್ತಾರೆ.
ಗಡಿಯಲ್ಲಿ ಇರುವ ನೂರಾರು ಕನ್ನಡ ಶಾಲೆಗಳ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಬೇಕು. ಪಠ್ಯಪುಸ್ತಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ.
ಡಾ.ವೂಡೇ ಪಿ. ಕೃಷ್ಣ, ನಿಕಟಪೂರ್ವ ಅಧ್ಯಕ್ಷ, ಗಡಿ ಸಾಹಿತ್ಯ ಸಮ್ಮೇಳನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.