ADVERTISEMENT

ಗೊಂದಲದ ಗೂಡಾದ ಸಮಾನಾಂತರ ವೇದಿಕೆ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:30 IST
Last Updated 1 ಫೆಬ್ರುವರಿ 2015, 19:30 IST

ಶ್ರವಣಬೆಳಗೊಳ: ಸಮಾನಂತರ ವೇದಿಕೆ ಎಂದು ಹೆಸರಾದ ಡಾ.ಎಸ್.ಕೆ. ಕರೀಂಖಾನ್ ಮಹಾಮಂಟಪದ ಡಾ.ಗೊರೂರು ರಾಮಸ್ವಾಮಿ ಅಯ್ಯಂ­ಗಾರ್ ವೇದಿಕೆಯು ಆರಂಭ­ದಲ್ಲೇ ಗೊಂದಲದ ಗೂಡಾಗಿ ಪರಿಣಮಿಸಿತು.

ನಿಗದಿಯಂತೆ ಭಾನುವಾರ ಮಧ್ಯಾಹ್ನ 2.30ಕ್ಕೆ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಎಂಬ ಗೋಷ್ಠಿ ಆರಂಭವಾಗಿ 4.30ಕ್ಕೆ ಮುಗಿಯಬೇಕಿತ್ತು. ಆದರೆ, ಇದು ಆರಂಭವಾದುದೇ ಸಂಜೆ 4.45ಕ್ಕೆ. ಗೋಷ್ಠಿ ಕೇಳಲು ಚಾತಕ ಪಕ್ಷಿಯಂತೆ ಕಾಯುತ್ತಾ ಸಭಿಕರು ಆಕ್ಷೇಪ ವ್ಯಕ್ತಪಡಿಸಿದಾಗ ಪ್ರಧಾನ ವೇದಿಕೆಯ ವಂದನಾರ್ಪಣೆ ಮುಗಿದ ಬಳಿಕವಷ್ಟೇ ಸಮಾನಂತರ ವೇದಿಕೆಯಲ್ಲಿ ಕಾರ್ಯ­ಕ್ರಮ ಆರಂಭಿಸಬೇಕು ಎಂಬ ಸೂಚನೆ ಇದೆ ಎಂದು ಸಮಜಾಯಿಷಿ ನೀಡಿದರು.

ಈ ವೇದಿಕೆಯು ಪ್ರಧಾನ ವೇದಿಕೆಗೆ ಸಮಾನಾಂತರವಾಗಿ ಹೆಸರಿಗೆ ಮಾತ್ರ ಇತ್ತು. ಆದರೆ, ಅದಕ್ಕೆ ತಕ್ಕಂತೆ ಸ್ವರೂಪ­ದಲ್ಲಿ ರಚನೆಯಾಗಿರಲಿಲ್ಲ. ‘ಓಓಡಿ’ ಪತ್ರ ತೆಗೆದುಕೊಳ್ಳಲು ಹೋಗುವ ಮತ್ತು ಬರುವವರಿಗಾಗಿ ವಿಶ್ರಾಂತಿ ತಾಣವಾಗಿ ಇದು ಬಳಕೆ­ಯಾಯಿತು.

ಜನರಿಗೆ ಇದು ವಿಶ್ರಾಂತಿ ತಾಣವೋ ಅಥವಾ ಗೋಷ್ಠಿಗಳು ನಡೆಯುವ ಬೌದ್ಧಿಕ ವೇದಿಕೆಯೋ ಎಂಬ ಗೊಂದಲ ಮೂಡಿದ್ದೂ ಉಂಟು. ಕೊನೆಗೆ ಪ್ರಧಾನ ವೇದಿಕೆಯಲ್ಲಿ ವಂದನಾರ್ಪಣೆ ಮುಗಿದ ನಂತರ ಬೇಲೂರಿನ ಸಪ್ತಸ್ವರ ತಂಡಕ್ಕೆ 15 ನಿಮಿಷಗಳ ಗಾಯನದ ಅವಕಾಶ ನೀಡಲಾಯಿತು. ಆದರೆ, ಇದಕ್ಕಾಗಿ ಮೈಕ್ ಸರಿಪಡಿಸಲು ತೆಗೆದುಕೊಂಡ ಕಾಲಾವಕಾಶ ಬರೋಬರಿ 20 ನಿಮಿಷ!

ಇದರಿಂದ ರೋಸಿದ ಪ್ರೇಕ್ಷಕರು ಇದೆಂಥ ಕಾರ್ಯಕ್ರಮ ಮೊದಲೇ ಮೈಕ್ ಸರಿಪಡಿಸಿಕೊಂಡು ಇಡಬಾರ­ದಿತ್ತೇ ಎಂದು ಆಕ್ರೋಶ ವ್ಕಕ್ತಪಡಿಸಿದ ನಂತರ ಸರಿಯಾಗದ ಮೈಕ್‌ನಲ್ಲೇ ಅವರು ಗಾಯನ ಕಾರ್ಯಕ್ರಮ ಆರಂಭಿಸಬೇಕಾಯಿತು.

ನಂತರ ಆರಂಭವಾದ ಗೋಷ್ಠಿ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’. ಆದರೆ, ಯಾವುದೇ ತಂತ್ರಜ್ಞಾನದ ನೆರವು ಇಲ್ಲಿರಲಿಲ್ಲ. ಈ ಸಂಬಂಧ ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರೂ ತೀವ್ರ ಅತೃಪ್ತಿ ಹೊರಹಾಕಿದರು.

‘ಮಾಹಿತಿ ತಂತ್ರಜ್ಞಾನ ಕುರಿತ ಗೋಷ್ಠಿಗೆ ಅಂತರ್ಜಾಲ ಸಂಪರ್ಕ ಕೊಡಿ ಎಂದು ಕಳೆದ ಮೂರು, ನಾಲ್ಕು ದಿನಗಳಿಂದ ಹೇಳುತ್ತಲೇ ಇದ್ದೇನೆ. ಅದು ಆಗುವುದಿಲ್ಲ ಎಂದರು. ಸರಿ ಕೊನೆಗೆ ಪ್ರೊಜೆಕ್ಟರ್ ಕೊಡಿ ಎಂದೇ ಅದಕ್ಕೆ ಅದೂ ಸಾಧ್ಯವಿಲ್ಲ ಎಂದರು.

ನಾನೇ ಪ್ರೊಜೆಕ್ಟರ್ ತರುತ್ತೇನೆ ಕೊನೆಪಕ್ಷ ಪರದೆ ಇಲ್ಲವೇ ಒಂದು ಪಂಚೆಯನ್ನಾದರೂ ಕೊಡಿ ಎಂದು ಮನವಿ ಮಾಡಿದೆ ಆದರೆ ಅದನ್ನೂ ಕಸಾಪ ಕಲ್ಪಿಸಲಲಿಲ್ಲ. ಹೀಗಾಗಿ, ತಂತ್ರಜ್ಞಾನದ ನೆರವಿಲ್ಲದೇ ತಂತ್ರಜ್ಞಾನ ಕುರಿತು ಮಾತನಾಡಬೇಕಿದೆ‘ ಎಂದು ವೇದಿಕೆಯ ಮೇಲೆಯೇ ಡಾ.ಯು.ಬಿ. ಪವನಜ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.