ಹಾಸನ: `ದೇವೇಗೌಡ ಅವರದ್ದು ಜನಶಕ್ತಿ ಅಲ್ರಿ ದೈವಶಕ್ತಿ. ಮಾಟ ಮಂತ್ರಗಳೇ ಅವರ ಜೀವಾಳ. ಆ ಪುಣ್ಯಾತ್ಮ ಜಿಲ್ಲೆಯ ಜನರಿಗೆ ಅದೇನು ಮಂಕುಬೂದಿ ಎರಚುವನೋ ಗೊತ್ತಿಲ್ಲ. ಹಿಗ್ಗಾ ಮುಗ್ಗಾ ಬಯ್ಯುವ ಸ್ವಜಾತಿ ಬಾಂಧವರೇ ಕೊನೆ ಸುತ್ತಿನಲ್ಲಿ ಅವರ ಮಾತಿಗೆ ಮರುಳಾಗಿ ಬಿಡ್ತಾರೆ....'
ಶ್ರವಣಬೆಳಗೊಳದ ಬೀದಿಯಲ್ಲಿ ಇರುವ ಅರಳಿಕಟ್ಟೆಯಲ್ಲಿ ಮಾತಿಗೆ ಸಿಕ್ಕ ರೈತ ಸಂಘದ ಮುಖಂಡ ಪಿ. ಎ. ನಾಗರಾಜ್ ಅವರ ಈ ಮಾತಿನಲ್ಲಿ ಇಡೀ ಹಾಸನ ಜಿಲ್ಲೆ ರಾಜಕೀಯದ ಸಿಕ್ಕುಗಳೆಲ್ಲ ಬಿಚ್ಚಿಕೊಳ್ಳುತ್ತವೆ.
`ಇದುವರೆಗೆ ಮಾತೇ ಆಡದ ಗೌಡ್ರು ಚುನಾವಣೆ ಬರುತ್ತಿದ್ದಂತೆ ಸಖತ್ ಫಾಸ್ಟ್ ಆಗಿ ಬಿಟ್ಟವ್ರೆ. ಇಬ್ಬರೂ ಮಕ್ಕಳಿಗಿಂತಲೂ ಹೆಚ್ಚು ಚುರುಕಾಗಿದ್ದಾರೆ. ದೇವೇಗೌಡರ ರಾಜಕೀಯ ತಂತ್ರಗಾರಿಕೆಯಿಂದ ಜನರು ನಿರಂತರವಾಗಿ ಮೋಸಕ್ಕೆ ಹೋಗುತ್ತಿದ್ದರೂ ಕಣ್ಣುಮುಚ್ಚಿ ಬೆಂಬಲಿಸುತ್ತಾರೆ. ಜಿಲ್ಲೆಯಲ್ಲಿ ಕಾನೂನು ಉಲ್ಲಂಘನೆಯೇ ರಾಜಕೀಯ ಕಸುಬು ಆಗಿಬಿಟ್ಟಿದೆ' ಎನ್ನುವ ಅವರ ಮಾತುಗಳಲ್ಲಿ ಹತಾಶ ಆಕ್ರೋಶ ಮಡುಗಟ್ಟಿದಂತಿತ್ತು.
`ಸದ್ಯಕ್ಕೆ ಹಾಳು ಹಂಪೆಯಂತಾಗಿರುವ `ಬಳ್ಳಾರಿ ರಿಪಬ್ಲಿಕ್'ನಂತೆ ಹಾಸನದ ಏಕಚಕ್ರಾಧಿಪತ್ಯವೂ ಅವಸಾನದ ಅಂಚಿಗೆ ಬಂದು ನಿಂತಿದೆ. ಜನರಿಗೆ ಬೇಕಾಗಿರುವುದು ಗೌಡ್ರ ಕುಟುಂಬಕ್ಕೆ ಬೇಕಾಗಿಲ್ಲ. ಗೌಡ್ರರಿಗೆ ಇಷ್ಟವಾದದ್ದು ಜನರಿಗೆ ಉಪಯೋಗ ಇಲ್ಲ. ಗೌಡರ ಅಭಿವೃದ್ಧಿ ಮಾದರಿಯೇ ಅರ್ಥವಾಗುವುದಿಲ್ಲ' ಎಂದು ಅಲ್ಲಿಯೇ ಕುಳಿತಿದ್ದ ಬೊಮ್ಮನಹಳ್ಳಿಯ ನಿಂಗೇಗೌಡ್ರು ವಿಷಾದಿಸಿದರು.
`ಗೌಡ್ರರನ್ನು ಎದುರು ಹಾಕಿಕೊಂಡು ರಾಜಕೀಯ ದಾಳ ಉದುರಿಸಿದ ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿಯೂ ಆಗಿರುವ ಅವರನ್ನು `ನೀವು ಒಕ್ಕಲಿಗರಾಗಿದ್ರೂ, ಲಿಂಗಾಯತ ಮುಖಂಡರನ್ನು ಹೊಗಳುವಿರಲ್ಲ' ಎಂದು ಕಾಲೆಳೆದಾಗ, `ಯಡಿಯೂರಪ್ಪನೋರು ಯಾರೂ ಮಾಡದ ತಪ್ಪೇನೂ ಮಾಡಿಲ್ವಲ್ಲ. ಅವರನ್ನು ಜೈಲಿಗೆ ಕಳಿಸಿದವರಲ್ಲಿ ಅನೇಕರ ಕೈವಾಡ ಇದೆ ಬಿಡಿ' ಎಂದು ಅರ್ಥಗರ್ಭಿತವಾಗಿ ಮಾತನಾಡುತ್ತಲೇ ಹೋದರು.
ಅಭಿವೃದ್ಧಿಯ ಆ ಮುಖ, ಈ ಮುಖ: ಬೆಂಗಳೂರಿನಿಂದ ಹಾಸನದ ಉದ್ದಕ್ಕೂ ಮೈಚಾಚಿಕೊಂಡು ಮಲಗಿರುವ ಹೆದ್ದಾರಿಯು ಕುಣಿಗಲ್ ನಂತರ ಮಧ್ಯೆ, ಮಧ್ಯೆ ಅಡ್ಡಾದಿಡ್ಡಿ ಚಲಿಸುತ್ತ, ದುರಸ್ತಿ ಕಾಣುತ್ತ, ತಿರುವು ಪಡೆಯುತ್ತ ಸಾಗುತ್ತದೆ. ಹಾಸನ ಜಿಲ್ಲೆಯ ರಾಜಕೀಯ ಪರಿಸ್ಥಿತಿಯೂ ಹೀಗೆಯೇ ಇದೆ. ಕೆಲವೆಡೆ ಅಭಿವೃದ್ಧಿ ಕಂಡರೆ, ಇನ್ನೊಂದೆಡೆ ಅಭಿವೃದ್ಧಿಯೇ ಕಾಣಲಾರದು.
ಜಿಲ್ಲೆಯ ಜನರ ರಕ್ತದಲ್ಲಿಯೇ ರಾಜಕೀಯ ಹಾಸು ಹೊದ್ದುಕೊಂಡು ಮಲಗಿದೆ. ಮದುವೆ ಕರೆಯೋಲೆಯಲ್ಲಿ ಆಶೀರ್ವಾದ ಹೆಸರಿನಲ್ಲಿ ರಾಜಕಾರಣಿಗಳ ಹೆಸರು ಮುದ್ರಿಸುವ ಜನರು, ಮದುವೆ ಛತ್ರಗಳ ಹೊರಭಾಗದಲ್ಲಿ ವಧು ವರರ ಹೆಸರಿನ ಹೂವಿನ ಫಲಕದಲ್ಲಿಯೂ ರಾಜಕಾರಣಿಗಳ ಚಿತ್ರವನ್ನೂ ಬರೆಸುವ ಅತಿಯಾದ ಸ್ವಾಮಿನಿಷ್ಠೆ ಪ್ರವೃತ್ತಿಯನ್ನೂ ಮೈಗೂಡಿಸಿಕೊಂಡಿದ್ದಾರೆ.
>
ಮಗ್ಗುಲ ಮುಳ್ಳು: ಜಿಲ್ಲೆಯಲ್ಲಿ ಎಲ್ಲಿಯೂ ಕಾಣಿಸದ ದಾಸಗೌಡ - ಮುಳ್ಳುಗೌಡರ ನಡುವಣ ಒಡಕು ಹಾಸನ ಮತಕ್ಷೇತ್ರದಲ್ಲಿ ಢಾಳಾಗಿ ಕಾಣಿಸಿಕೊಳ್ಳುತ್ತದೆ. ಹಿರಿಯ ಮುಳ್ಳುಗೌಡರು ಮತ್ತು ಅವರ ಪುತ್ರ ರೇವಣ್ಣ ಅವರ'ು ದಾಸಗೌಡರ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ಒಂದೆಡೆ ನೆಲೆಸಿರುವ ದಾಸಗೌಡರ ರಾಜಕೀಯ ಬಲ ಮುರಿಯಬೇಕು ಎನ್ನುವ ಏಕೈಕ ಉದ್ದೇಶಕ್ಕೆ ಅವರನ್ನು ಒಕ್ಕಲೆಬ್ಬಿಸಲು ಅಪ್ಪ- ಮಗ ಹೆಣೆಯದ ಕಾರ್ಯತಂತ್ರವೇ ಇಲ್ಲ.
ಹಾಸನದ ಪಕ್ಕದಲ್ಲಿಯೇ ಇರುವ ಚಿಕ್ಕಗೊಂಡಗುಳ ಕೊಪ್ಪಲು ಪ್ರದೇಶದಲ್ಲಿ 500 ಎಕರೆ ಭೂಮಿಯನ್ನು ಗೃಹ ನಿರ್ಮಾಣ ಮಂಡಳಿ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುವಂತೆ ಮಾಡುವಲ್ಲಿ ಗೌಡರ ಕುಟುಂಬ ಯಶಸ್ವಿಯಾಗಿದ್ದೇ ಇದಕ್ಕೊಂದು ಉತ್ತಮ ನಿದರ್ಶನ. ಈ ಸಂಚಿನ ವಿರುದ್ಧ ಹೋರಾಟ ನಡೆಸಿದ ಸ್ಥಳೀಯರು ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಭೂ ಸ್ವಾಧೀನ ಕೈಬಿಡುವಂತೆ (ಡಿನೋಟಿಫಿಕೇಶನ್) ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
`ರೇವಣ್ಣ ಮತ್ತು ಎಚ್. ಎಸ್. ಪ್ರಕಾಶ್ ಅವರು ನಮಗೆಲ್ಲ ಅನ್ಯಾಯ ಮಾಡಿದ್ದರು. ಯಡಿಯೂರಪ್ಪ ನಮ್ಮನ್ನು ಉಳಿಸಿದರು' ಎಂದು ಸ್ಥಳೀಯ ನಿವಾಸಿ ಅಪ್ಪಾಜಿ ಅವರು ಬಿಎಸ್‌ವೈ ಅವರ ನೆರವನ್ನು ಸ್ಮರಿಸಿಕೊಳ್ಳುತ್ತಲೇ ಈ ಬಾರಿ ಜೆಡಿಎಸ್ ಎರಡು ಸ್ಥಾನಕ್ಕಷ್ಟೇ ತೃಪ್ತಿಪಡಲಿ ಎಂದೂ ಹಿಡಿಶಾಪ ಹಾಕಿದರು.
ಅಲ್ಲೇ ಸನಿಹದಲ್ಲಿಯೇ ಗುಂಪುಗೂಡಿದ್ದ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರನ್ನು ಮಾತಿಗೆ ಎಳೆದಾಗ, `ರೋಸ್ ಹಿಡಿದೈತಿ ರಾಜಕೀಯ ನೋಡಿ. ಇಲ್ಲಿ ರಸ್ತೆನೂ ಇಲ್ಲ, ಗಿಸ್ತೇನೂ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಗೌಡ್ರ ಕುಟುಂಬ ಒಳ್ಳೆಯದು ಮಾಡವ್ರೆ, ಕೆಲವರಿಗೆ ಹೆಲ್ಪೂ ಮಾಡವ್ರೆ' ಎಂದು ಹೇಳಿದರೂ, ಯಾರಿಗೆ ವೋಟ್ ಹಾಕ್ತೀರಿ? ಯಾರಾದ್ರೂ ದುಡ್ಡು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಕ್ಕೆ `ಇನ್ನೂ ನಿರ್ಧರಿಸಿಲ್ಲ. ಯಾರೂ ದುಡ್ಡೂ ಕೊಟ್ಟಿಲ್ಲ' ಎಂದು ಚಾಣಾಕ್ಷ ರಾಜಕಾರಣಿಗಳ ಧಾಟಿಯಲ್ಲಿಯೇ ಉತ್ತರಿಸಿದರು.
ಭೂಸ್ವಾಧೀನ ಮತ್ತು ನೀರು:
ಇಡೀ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ರಾಜಕೀಯ ಬಿಟ್ಟರೆ, ಭೂಸ್ವಾಧೀನ ಮತ್ತು ನೀರಿನ ಸಮಸ್ಯೆಗಳೂ ಮುಖ್ಯವಾಗಿವೆ. ಹಾಸನದಲ್ಲಂತೂ ಕೈಗಾರಿಕಾ ಎಸ್ಟೇಟ್, ಐಟಿಐ, ವಿಮಾನ ನಿಲ್ದಾಣ ನಿರ್ಮಾಣ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿ ಇದುವರೆಗೂ ಸದ್ಬಳಕೆಯಾಗಿಲ್ಲ. ವರ್ತುಲ ರಸ್ತೆ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿರದಿದ್ದರೂ ಕೈಗಾರಿಕಾ ಎಸ್ಟೇಟ್‌ನಲ್ಲಿ ಇನ್ನೂ ಸಾಕಷ್ಟು ಭೂಮಿ ಖಾಲಿಯಾಗಿಯೇ ಇದೆ.
ಹೊಸದಾಗಿ ಭೂಸ್ವಾಧೀನಕ್ಕೆ ಗುರುತಿಸಿರುವ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ದೊಡ್ಡ ಬಸವನಹಳ್ಳಿಯ ರಾಜುಗೌಡ ಅವರ ಮಾತಿನಲ್ಲಿಯೇ ಹೇಳುವುದಾದರೆ, `ಜನರಲ್ಲಿ ಒಗ್ಗಟ್ಟಿಲ್ಲ. ಕೆಲವರಿಗೆ ದುಡ್ಡು ಬೇಕು. ಏನು ಮಾಡೋದು. ಬಂದದ್ದು ಬರಲಿ' ಎಂದು ಮುನ್ನಡೆದರು.
ತೋಟದ ಹಾದಿ ಮಧ್ಯೆಯೇ ಎದುರಾದ ಶಿವಣ್ಣ, ದಾಸಗೌಡರ ನೆಲೆಗಳನ್ನು ಛಿದ್ರ ಛಿದ್ರ ಮಾಡಲು ಹೊರಟಿರುವ ಅಪ್ಪ ಮಕ್ಕಳ ದರ್ಬಾರಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ನಗರದ ಪಕ್ಕದಲ್ಲಿಯೇ ಇದ್ದರೂ ಇವರದ್ದೂ ಸೇರಿದಂತೆ ಕೆಲ ತೋಟದ ಮನೆಗಳ ಮತದಾರರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದ್ದಾರೆ ನೋಡಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ - ಕೃಷ್ಣಾ ನದಿಗಳ ನೀರಾವರಿ ಯೋಜನೆಗಳ ಬಗ್ಗೆ ಕಣ್ಣೀರು ಹರಿಸುವ ಜೆ.ಡಿ (ಎಸ್) ನಾಯಕರು, ಸ್ವಂತ ಜಿಲ್ಲೆಯ ನೀರಿನ ಸಮಸ್ಯೆಯನ್ನೇ ತೃಪ್ತಿಕರವಾಗಿ ಬಗೆಹರಿಸಿಲ್ಲ. ಕಾವೇರಿ ನದಿ ನೀರು ಪ್ರಾಧಿಕಾರದ ಅಡಚಣೆ ಹೆಸರಿನಲ್ಲಿ ಅನೇಕ ಯೋಜನೆಗಳಿಗೆ ಇವರೇ ಮುಂದೆ ನಿಂತು ಎಳ್ಳುನೀರು ಬಿಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೂರು ನದಿಗಳು (ಹೇಮಾವತಿ ಯಗಚಿ, ಕಾವೇರಿ), ಮತ್ತು ಮೂರು ಅಣೆಕಟ್ಟೆಗಳಿದ್ದರೂ (ವಾಟೆಹೊಳೆ, ಹೇಮಾವತಿ, ಯಗಚಿ) ಅವುಗಳ ಸಮರ್ಪಕ ಬಳಕೆಯಾಗಿಲ್ಲ. ಬಯಲುಸೀಮೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಳೇಬೀಡು -ಮಾದಿ ಹಳ್ಳಿ ಏತ ನೀರಾವರಿ ಯೋಜನೆಯಡಿ ಮಳೆಗಾಲದಲ್ಲಿ ನೀರು ಹರಿಸಿದರೂ 44 ಕೆರೆಗಳನ್ನು ತುಂಬಿಸಬಹುದಾಗಿದೆ.
ರಾಜಕಾರಣಿಗಳು 30 ವರ್ಷಗಳಿಂದ ನೀರು ಹರಿಸುವ, ಕುಡಿಸುವ ಮಾತುಗಳನ್ನಾಡುತ್ತ ಬಾಯಿ ಪಸೆ ಒಣಗಿಸಿಕೊಂಡಿದ್ದೇ ದೊಡ್ಡ ಸಾಧನೆಯಾಗಿದೆ.
ಖಳನಾಯಕ: ಏತ ನೀರಾವರಿ ಯೋಜನೆಗಳ ಜಾರಿ ಇರಲಿ, ಹೇಮಾವತಿ ಸಕ್ಕರೆ ಕಾರ್ಖಾನೆ ಪರಭಾರೆ, ಬಾಗೂರು ನವಿಲೆ ಸುರಂಗದ ಸಂತ್ರಸ್ತ ರೈತರಿಗೆ ಪರಿಹಾರ ಕೊಡುವ ವಿಷಯದಲ್ಲಿ ಯಾರು ಖಳನಾಯಕರು ಎನ್ನುವುದು ಜಿಲ್ಲೆಯಲ್ಲಿ ಜನಜನಿತವಾಗಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳುತ್ತಾರೆ.
ಜಿಲ್ಲೆಯ ಜನರ ಎದೆ ಮೇಲೆಯೇ ನದಿಗಳು ಹರಿದು ಹೋಗಿದ್ದರೂ, ಬಹುತೇಕ ಕೆರೆಗಳು ಬತ್ತಿರುವುದು ಜನರಲ್ಲಿ ಆಕ್ರೋಶ ಮಡುಗಟ್ಟುವಂತೆ ಮಾಡಿದೆ.
`ಬಿ-ಫಾರಂ' ರಗಳೆ
ಬುಧವಾರ ಮಧ್ಯಾಹ್ನ ಬೇಲೂರಿನ ಚೆನ್ನಕೇಶವ ದೇವಸ್ಥಾನದ ಮೆಟ್ಟಿಲ ಮೇಲೆ ಎದುರಾದ ಜೆಡಿಎಸ್ ಅಭ್ಯರ್ಥಿ ಕೆ. ಎಸ್. ಲಿಂಗೇಶ್ ಅವರನ್ನು, ಅಭ್ಯರ್ಥಿ ಘೋಷಣೆ ಇಷ್ಟೇಕೆ ತಡ ಎಂದು ಪ್ರಶ್ನಿಸಿದರೆ, ಅವರ ಬಳಿ ಸ್ಪಷ್ಟ ಉತ್ತರ ಇದ್ದಿರಲಿಲ್ಲ.
ಈ ಅಸ್ಪಷ್ಟತೆ ಮಧ್ಯೆಯೇ ಅವರು ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ವೈ. ಎನ್. ರುದ್ರೇಶಗೌಡ ಅವರು 2 ದಿನಗಳ ಮೊದಲು ನಾಮಪತ್ರ ಸಲ್ಲಿಸುವಾಗ ಜೆಡಿಎಸ್‌ಗಿಂತ ಎರಡು ಪಟ್ಟು ಬೆಂಬಲಿಗರು ಸೇರಿದ್ದರಂತೆ.
ಎರಡೂ ಮುಕ್ಕಾಲು ಗಂಟೆಗೆ ತಾಲ್ಲೂಕು ಕಚೇರಿ ಪ್ರವೇಶಿದಾಗ ಜೆಡಿಎಸ್ ಕಾರ್ಯಕರ್ತರಲ್ಲಿ ಮತ್ತು ಇಬ್ಬರು ಅಭ್ಯರ್ಥಿಗಳಾದ ಲಿಂಗೇಶ್ ಮತ್ತು ಬಿ. ಸಿ. ಮಂಜುನಾಥ ಮತ್ತವರ ಹಿಂಬಾಲಕರಲ್ಲಿ ಮೊಗದಲ್ಲಿ ಇನ್ನೂ ಆತಂಕ ನಿವಾರಣೆಯಾಗಿರಲಿಲ್ಲ.
ರೇವಣ್ಣ ಬರ್ತಾರೆ ಎಂಬ ಭರವಸೆಗೆ ಅವರನ್ನು ಸಂದರ್ಶಿಯೇ ಅರಸೀಕೆರೆಗೆ ಹೋಗಬೇಕೆಂದು ಬಯಸಿದ್ದ ನಮಗೆ ರೇವಣ್ಣ ಕೊನೆಗೂ ಬರದೇ ಇದ್ದಾಗ, ಅವರನ್ನು ನಾವು ಕೂಡ ಶಪಿಸಬೇಕಾಯಿತು.
ಬೇಲೂರಿನಷ್ಟೇ ಅಲ್ಲ, ಹಾಸನದಲ್ಲೂ ಇದೇ ಬಗೆಯ ಗೊಂದಲ, ಅನಿಶ್ಚಿತತೆ ಇತ್ತು. ಎರಡೂ ಕಡೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ, ಬಿ-ಫಾರಂ ವಿತರಿಸುವುದನ್ನು ಸಾಕಷ್ಟು ಗೋಜಲುಗೊಳಿಸಲಾಗಿತ್ತು. ಹಾಸನ ಅಥವಾ ಬೇಲೂರಿನಲ್ಲಿ ಭವಾನಿ ರೇವಣ್ಣ ಅವರೂ ನಾಮಪತ್ರ ಸಲ್ಲಿಸಬಹುದು ಎನ್ನುವ ವದಂತಿಗಳಿಗೂ ರೆಕ್ಕೆಪುಕ್ಕ ಬಂದಿದ್ದವು. ಬೇಲೂರಿನಲ್ಲಿ ಕೊನೆಗೂ `ಬಿ ಫಾರಂ', ಲಿಂಗೇಶ್ ಅವರಿಗೆ ಎನ್ನುವುದು ಖಚಿತವಾಗುತ್ತಿದ್ದಂತೆ ಕುರುಬರ ಜನಾಂಗದ ಮಂಜುನಾಥ ಅವರು, `ರೇವಣ್ಣ ಮೋಸ ಮಾಡಿದ್ರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.