ADVERTISEMENT

ಗೊಲ್ಲರಹಟ್ಟಿಯ ಸೂತಕದ ಮನೆಗಳು

‘ಸರ್ಕಾರದ ನಿರ್ಲಕ್ಷ್ಯವೇ ಅನಿಷ್ಟ ಆಚರಣೆಗೆ ಪ್ರೇರಣೆ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 19:30 IST
Last Updated 1 ನವೆಂಬರ್ 2014, 19:30 IST

ಬಳ್ಳಾರಿ: ಅವಳಿನ್ನೂ 12ರ ಬಾಲೆ. ತಿಂದುಂಡು, ಆಡಿಕೊಂಡಿರುವ ವಯಸ್ಸು.  ಋತುಮತಿಯಾದ ಕಾರಣ ಆಕೆಗೆ ಮೂರು ದಿನ ಮನೆಯೊಳಗೆ ಪ್ರವೇಶ ನಿಷಿದ್ಧ. ಈಗಿನಿಂದಲೇ ಆರಂಭವಾಗಿ­ರುವ ಆಕೆಯ ಯಾತನೆ ಇನ್ನು ಪ್ರತಿ ತಿಂಗಳೂ ಮುಂದುವರಿಯುತ್ತದೆ.
ಇದು ಕೂಡ್ಲಿಗಿ ತಾಲ್ಲೂಕಿನ ಮೊರಬ ಗೊಲ್ಲರ­ಹಟ್ಟಿ ಗ್ರಾಮದಲ್ಲಿ ಆಚರಣೆಯಲ್ಲಿ ಇರುವ ಅನಿಷ್ಟ ಸೂತಕ ಪದ್ಧತಿಗೆ ನಿದರ್ಶನ.

ಕೂಡ್ಲಿಗಿ ಮಾತ್ರವಲ್ಲದೆ, ಜಿಲ್ಲೆಯ ಸಂಡೂರು ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಇರುವ ಗೊಲರಹಟ್ಟಿಗಳಲ್ಲೂ ಕೆಲವೆಡೆ ‘ಸೂತಕ’ದ ಆಚರಣೆ ಈಗಲೂ ಮುಂದುವರಿ­ದಿದ್ದು, ‘ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಇದಕ್ಕೆ ಪ್ರಮುಖ ಕಾರಣ’ ಎಂಬ ಅಭಿಪ್ರಾಯ ಸಮುದಾಯದ ಜನರದ್ದು. ಕೂಡ್ಲಿಗಿ ತಾಲ್ಲೂಕಿನಲ್ಲೇ 33 ಗೊಲ್ಲರಹಟ್ಟಿ­ಗಳಿದ್ದು, ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 20ನೇ ವಾರ್ಡ್‌ ವ್ಯಾಪ್ತಿಯ ಗೋವಿಂದಗಿರಿ­ಯಲ್ಲೂ ಗೊಲ್ಲರ ನೂರಾರು ಕುಟುಂಬಗಳು ವಾಸಿಸುತ್ತಿವೆ. ಆದರೆ, ಶಿಕ್ಷಣ ಪಡೆದವರ ಮನೆಗಳಲ್ಲಿ ಈ ಅನಿಷ್ಟ ಪದ್ಧತಿಗೆ ಈಗ ಜಾಗವಿಲ್ಲ.

‘ಮುಟ್ಟು, ಹೆರಿಗೆ ಮತ್ತು ಹುಡುಗಿಯರು ಋತುಮತಿಯರಾದ ಸಂದರ್ಭ ‘ಸೂತಕ’ ಆಚರಿಸುವ ಪದ್ಧತಿಯು  ಕುಗ್ರಾಮಗಳಲ್ಲಿ ಮುಂದುವರಿದಿದೆ. ಕಾಡುಗೊಲ್ಲರ ಸಮುದಾ­ಯದಲ್ಲಿ ಈ ಪದ್ಧತಿ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಇತ್ತಾದರೂ ಕಾಲಕ್ರಮೇಣ ಕಡಿಮೆ­ಯಾಗಿದೆ. ಆದರೆ, ಜಾಗೃತಿ, ಶಿಕ್ಷಣದ ಕೊರತೆ ಮತ್ತು ಬಡತನದಿಂದಾಗಿ ಮೂಢನಂಬಿ­ಕೆಯು ಪೂರ್ಣವಾಗಿ ದೂರವಾಗಿಲ್ಲ. ಸರ್ಕಾರ ನಮ್ಮ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಮೂಲ ಸೌಲಭ್ಯ ನೀಡಲು ಮುಂದಾಗದಿರುವುದೇ ಅನಿಷ್ಟ ಪದ್ಧತಿ ಮುಂದುವರಿಕೆಗೆ ಪ್ರಮುಖ ಕಾರಣ’ ಎಂದು ಗೊಲ್ಲರ ಸಂಘದ ಕೂಡ್ಲಿಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ ಯಾದವ ‘ಪ್ರಜಾವಾಣಿ’ ಎದುರು ಆರೋಪಿಸಿದರು.

‘ಮೂಢನಂಬಿಕೆ ಕೈಬಿಡದ, ಅನಕ್ಷರಸ್ಥ ‘ಸಂಪ್ರ­ದಾಯವಾದಿ’ ಹಿರಿಯರು ಇರುವ ಕೆಲವು ಕುಟುಂಬ­ಗಳಲ್ಲಿ ಅಮಾನವೀಯವಾದ ‘ಸೂತಕ’ದ ಆಚರಣೆ ಮುಂದುವರಿದಿದೆ’ ಎಂದು ಅವರು ದೂರಿದರು. ‘105 ಜಾತಿಗಳನ್ನು ಒಳಗೊಂಡಿರುವ ಪ್ರವರ್ಗ–1ರ ಅಡಿ ಗೊಲ್ಲರಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾಡುಗಳಲ್ಲೇ ಜೀವನ ನಡೆಸುವ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅರ್ಹತೆ ಇದ್ದರೂ  ಕಡೆಗಣಿಸಲಾಗಿದೆ’ ಎಂದು ಅವರು ಆಪಾದಿಸಿದರು.

‘ರಾಜಕಾರಣಿಗಳಿಗೆ ಗೊಲ್ಲರಹಟ್ಟಿಗಳು ನೆನಪಾಗುವುದು ಕೇವಲ ಚುನಾವಣೆ ಸಂದರ್ಭ­ದಲ್ಲಿ ಮಾತ್ರ. ನಮ್ಮ ಹಳ್ಳಿಗಳಲ್ಲಾದರೂ ಚುನಾವಣೆಗೆ ನಿಲ್ಲಲು ನಮಗೇ ಅವಕಾಶ ನೀಡಿದರೆ ರಾಜಕೀಯವಾಗಿ ಅಭಿವೃದ್ಧಿ ಸಾಧಿಸಿ,  ಮೌಢ್ಯವನ್ನು ನಿರ್ಮೂಲನೆ ಮಾಡಬೇಕೆಂದರೂ ಆಗುತ್ತಿಲ್ಲ’ ಎಂಬುದು ಅವರ ಕೊರಗು.

‘ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ತಾಲ್ಲೂ­ಕು­ಗಳಲ್ಲಿ ಇರುವ ಗೊಲ್ಲರಿಗೆ ಈ ಪದ್ಧತಿ ಕೈಬಿಡು­ವಂತೆ ಹತ್ತಾರು ವರ್ಷಗಳಿಂದ ಸಮುದಾಯದ ಅಕ್ಷರಸ್ಥರೇ ಜಾಗೃತಿ ಮೂಡಿಸಿದ್ದೇವೆ. ಸರ್ಕಾರ ಗಮನಹರಿಸಿದರೆ ಖಂಡಿತ ಅನಿಷ್ಟ ಆಚರಣೆಗೆ ಮಂಗಳ ಹಾಡಬಹುದಾಗಿದೆ’ ಎಂಬುದು ಗೊಲ್ಲರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಗಾದೆಪ್ಪ ಅವರ ಆಶಾಭಾವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.