ಧಾರವಾಡ: ಎಲ್ಲೋ ಎಂದೋ ಕಂಡ ಘಟನೆ, ಬಾಲ್ಯದ ಅನುಭವಗಳು, ಅನಿರೀಕ್ಷಿತ ಪ್ರಸಂಗ, ಚಿಂತನಾ ಲಹರಿ, ಇವೆಲ್ಲಕ್ಕೊಂದಷ್ಟು ಕಲ್ಪನೆ ಸೇರಿಸಿ ಚೌಕಟ್ಟು ಹಾಕಬೇಕು. ಎಲ್ಲ ಎಳೆ ಹಿಡಿದು, ಅಚ್ಚುಕಟ್ಟಾಗಿ ಪೋಣಿಸಬೇಕು. ಅಷ್ಟೇ ಅಲ್ಲ; ಇದಕ್ಕೆ ಆ ರಚನೆಗಾರನ ತಾತ್ವಿಕ ಉದ್ದೇಶವೂ ಸೇರಿಕೊಳ್ಳಬೇಕು. ಆಗಲೇ `ಕಥೆ' ಹುಟ್ಟುತ್ತದೆ!
ಗೋಷ್ಠಿಯ ವಿಷಯ `ಕಥೆ ಹುಟ್ಟುವ ರೀತಿ' ಎಂದಷ್ಟೇ ಇದ್ದರೂ ಅದು ವಿಷಯದ ಪರಿಧಿಯಾಚೆಗೆ ಜಿಗಿಯಿತು. ಕಥೆ ಹುಟ್ಟುವುದು, ಅದನ್ನು ಮುಂದುವರಿಸುವುದು ಹಾಗೂ ಕೊನೆ ಹೇಗೆ ಎಂಬ ವ್ಯಾಪ್ತಿಯನ್ನೂ ಆವರಿಸಿತು. ಗೋಷ್ಠಿಯ ನಿರ್ದೇಶಕರಾಗಿದ್ದ ಪ್ರಹ್ಲಾದ ಅಗಸನಕಟ್ಟೆ ಅವರು ಕಥೆಗಾರರಾದ ವೈದೇಹಿ, ಅಮರೇಶ ನುಗಡೋಣಿ ಹಾಗೂ ಲೋಹಿತ್ ನಾಯ್ಕರ ಜತೆಗೆ ನಡೆಸಿದ ಪ್ರಶ್ನೋತ್ತರವು ಕಥೆಗಾರರ ಬಗ್ಗೆ ಓದುಗನಲ್ಲಿನ ಕುತೂಹಲವನ್ನು ತಕ್ಕಮಟ್ಟಿಗದರೂ ತಣಿಸುವಲ್ಲಿ ಸಫಲವಾಯಿತು.
ಕಥೆಯೆಂದರೆ ಏಕಕಾಲಕ್ಕೆ ಅದು ಕವಿತೆ, ಪ್ರಬಂಧ, ನಾಟಕವಾಗಿರುತ್ತದೆ. ಬರೆಯಲು ಸುಲಭವೆನಿಸಿದರೂ ಸವಾಲಿನದು. ಅನೇಕ ಮಿತಿಗಳ ಮಧ್ಯೆ ಕಥೆಗಾರ ತನ್ನ ಪ್ರತಿಭೆ ತೋರಿಸಬೇಕು. ಹಾಗಿದ್ದರೆ ಕಥೆ ಅಂಕುರಿಸುವುದಾದರೂ ಹೇಗೆ ಎಂಬ ಪ್ರಶ್ನೆಯೊಂದಿಗೆ ಮಾತು ಶುರು ಮಾಡಿದ್ದು ಪ್ರಹ್ಲಾದ ಅಗನಸಕಟ್ಟೆ.
ಮೊದಲು ಪ್ರತಿಕ್ರಿಯೆ ನೀಡಿದ ವೈದೇಹಿ, ಮನಸ್ಸಿನಲ್ಲಿ ನೂರಾರು ಕಥೆಗಳು ಇರುತ್ತವೆ. ಆದರೆ ಬರೆಯಲು ಕುಳಿತುಕೊಂಡರೆ ಬೇಡದ್ದೆಲ್ಲ ಮನಸ್ಸಿನಲ್ಲಿ ಬರುತ್ತವೆ. ಮೊದಲು ಗಟ್ಟಿಯಾಗಿ ಕುಳಿತುಕೊಳ್ಳುವೆ; ನಂತರ ಹಲವು ಘಟನೆಗಳನ್ನು ಜೋಡಿಸಿಕೊಂಡು ಬರೆಯುವೆ ಎಂದರು. ಅಮರೇಶ ನುಗಡೋಣಿ ಅವರಿಗೆ ಎಂದೂ ಮನಸ್ಸಿನಿಂದ ಮಾಸದ ಬಾಲ್ಯದ ಅನುಭವಗಳೇ ಪ್ರಮುಖ. ಮಾನವ ಹಕ್ಕುಗಳ ಕಾರ್ಯಕರ್ತ, ಕಾನೂನು ವಿದ್ಯಾರ್ಥಿಯೂ ಆದ ಲೋಹಿತ್ ನಾಯ್ಕರ ಅವರಿಗೆ ಮಾನವನ ಬದುಕಿನಲ್ಲಿ ಮೌಲ್ಯಗಳು ಬದಲಾಗುವುದೇಕೆ? ಎಂಬ ಸಂಶಯವೇ ಕಥಾವಸ್ತು ಚಿಗುರಲು ಕಾರಣವಂತೆ.
ಕಥೆ ಸ್ವರೂಪ ಹೇಗೆ?: ಬರೆಯುತ್ತ ಕಥಾವಸ್ತು ಮುಂದುವರಿಯುತ್ತದೆಯೋ? ಅಥವಾ ಕಥಾವಸ್ತು ತನಗೆ ಬೇಕಾದ ಸ್ವರೂಪ ಪಡೆಯುತ್ತ ಸಾಗುತ್ತದೋ ಎಂಬ ಪ್ರಶ್ನೆಗೆ ಮೂವರ ಅಭಿಪ್ರಾಯ ವಿಶಿಷ್ಟವಾಗಿತ್ತು. ಒಂದೇ ಸಲಕ್ಕೆ ಕಥೆ ಸರಿಯಾಗದಿದ್ದರೆ ಬರೆದಿದ್ದನ್ನು ಮತ್ತೆ ತಿದ್ದುವೆ. ತನ್ನಷ್ಟಕ್ಕೆ ತಾನೇ ಮುಂದುವರಿದು ತಾರ್ಕಿಕ ಅಂತ್ಯ ಕಾಣುತ್ತದೆ ಎಂದು ವೈದೇಹಿ ಹೇಳಿಕೆಗೆ ವಿಭಿನ್ನವಾಗಿ, ಆರಂಭ- ಅಂತ್ಯ ಅಂತ ಹೇಳೋಕಾಗಲ್ಲ. ನನ್ನ ಕಥೆಯೇ ಎಲ್ಲವನ್ನೂ ಪಡೆದುಕೊಳ್ಳುತ್ತ ಹೋಗುತ್ತದೆ ಎಂಬ ಅನುಭವ ಹಂಚಿಕೊಂಡಿದ್ದು ನುಗಡೋಣಿ. ಪೂರ್ವತಯಾರಿಯೊಂದಿಗೆ ಎಲ್ಲಕ್ಕೂ ಒಂದು ಚೌಕಟ್ಟು ಹಾಕಿ ಬರೆಯುವ ವಿದ್ಯಾರ್ಥಿಯ ಶಿಸ್ತು ನಾಯ್ಕರ್ ಅವರದು!
ಕಲ್ಪಿತ ವಾಸ್ತವ: ಕಥೆಯೆಂದರೆ ಬರಿ ಕಲ್ಪನೆಯಲ್ಲ; ಅದರಲ್ಲಿ ವಾಸ್ತವ ಕೂಡ ಇರುತ್ತದೆ ಎಂಬ ವೈದೇಹಿಯವರ ಮಾತಿಗೆ ದನಿಗೂಡಿಸಿದ್ದು ನಾಯ್ಕರ. ವಾಸ್ತವವೋ ? ಕಲ್ಪನೆಯೋ ಎನ್ನುವುದು ಸಮಂಜಸವಲ್ಲ. ಅದು ಕಲ್ಪಿತ ವಾಸ್ತವ ಎಂದು ವ್ಯಾಖ್ಯಾನಿಸಿದ್ದು ನುಗಡೋಣಿ.
ಕಥೆ ಬರೆಯುತ್ತ ಬರೆಯುತ್ತ ನಮ್ಮ ಪ್ರಜ್ಞೆ, ಯೋಚನೆಗಳನ್ನು ದಾಟಿ ಯಾರೂ ಊಹಿಸಲಾಗದಂಥ ಮಟ್ಟ ತಲುಪುತ್ತದೆ.
ಈ ಕ್ರಿಯಾಶೀಲ ಕೆಲಸ ಒಂದು ರೀತಿ ಚದುರಂಗದಾಟ. ಸಣ್ಣ ಕಾಯಿ ಎತ್ತಿಟ್ಟರೂ ಆಟ ಬೇರೆ ಆಗಿಬಿಡುತ್ತದೆ. ಅದೇ ತೆರನಾದ ತಿರುವು ಕಥೆಯಲ್ಲಿ ಇರುತ್ತದೆ ಎಂದು ವಿಶ್ಲೇಷಿಸಿದ ಪ್ರಹ್ಲಾದ ಅಗಸನಕಟ್ಟೆ, ಈ ಇಡೀ ಪ್ರಕ್ರಿಯೆಯಲ್ಲಿ ಉಂಟಾಗುವ ಅನುಭವಗಳನ್ನು ಕಥೆಗಾರರು ತೆರೆದಿಡುವಂತೆ ಮಾಡುವಲ್ಲಿ ಸಫಲರಾದರು. ಸಭಾಂಗಣದಲ್ಲಿ ನಿಲ್ಲಲು ಸಹ ಜಾಗವಿಲ್ಲದಂತೆ ಕಿಕ್ಕಿರಿದು ತುಂಬಿದ್ದ ಜನರನ್ನು ಒಂದೂವರೆ ಗಂಟೆಯ ಕಾಲ ಹಿಡಿದಿಟ್ಟ ಹೆಗ್ಗಳಿಕೆ ಈ ಮೂವರು ಕಥೆಗಾರರಿಗೆ ಸಂದಿತು.
ಪಾತ್ರಗಳ ತಕರಾರು!
ಕಥೆ ಎಂದರೆ ವಾಸ್ತವ ಘಟನೆಗಳನ್ನು ಆಧರಿಸಿ ಸೃಷ್ಟಿಸಿದ ಕೃತಿ ಎಂಬುದಾದರೆ, ಅದರಲ್ಲಿನ ಪಾತ್ರಗಳು ಕಥೆಗಾರನಿಗೆ ಪ್ರತಿಕ್ರಿಯಿಸಿವೆಯೇ?
ಸಭಿಕರೊಬ್ಬರ ಕುತೂಹಲದ ಈ ಪ್ರಶ್ನೆ ಗೋಷ್ಠಿಯನ್ನು ನಗೆಗಡಲಲ್ಲಿ ಮುಳುಗಿಸಿತು. ತಕ್ಷಣ ವೈದೇಹಿ `ಬಂದಿಲ್ಲ... ಇಲ್ಲ' ಎಂದು ಉತ್ತರಿಸಿದರು. ನುಗಡೋಣಿಯವರಿಗೆ ಮಾತ್ರ ಆಕ್ಷೇಪಗಳು ಹೆಚ್ಚು ಬಂದಿವೆಯಂತೆ!
ಪಾತ್ರಕ್ಕೆ ಯಾವುದೋ ಕಾಲ್ಪನಿಕ ಹೆಸರಿಟ್ಟಾಗ ಕಥೆ ಮುಂದೆ ಸಾಗುತ್ತಿರಲಿಲ್ಲ. ಆ ವ್ಯಕ್ತಿಯ ಹೆಸರಿಟ್ಟರೆ ಮಾತ್ರ ಕಥೆ ಸರಾಗವಾಗಿ ಓಡುತ್ತಿತ್ತು ಎಂದು ನುಗಡೋಣಿ ಹೇಳಿದಾಗ ಸಭೆಯಲ್ಲಿ ನಗೆಬುಗ್ಗೆ ಚಿಮ್ಮಿತು. ನಾಯ್ಕರ ಮಾತ್ರ `ಅದು ನನ್ನ ಖಾಸಗಿ ವಿಷಯ ಆಗಿರುವುದರಿಂದ ಹೇಳಲು ನಾನು ಇಷ್ಟಪಡುವುದಿಲ್ಲ' ಎಂದು ಹೇಳಿ ಮತ್ತೊಮ್ಮೆ ಸಭಿಕರಲ್ಲಿ ನಗು ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.