ADVERTISEMENT

ಘಾಟಿ ಭೂಕುಸಿತ ತಡೆಗೆ ಪಿಡಬ್ಲ್ಯುಡಿ ಸಜ್ಜು

ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಸಲು ಸಜ್ಜಾಗುತ್ತಿರುವ ಇಲಾಖೆ

ವಿ.ಎಸ್.ಸುಬ್ರಹ್ಮಣ್ಯ
Published 13 ಫೆಬ್ರುವರಿ 2019, 20:00 IST
Last Updated 13 ಫೆಬ್ರುವರಿ 2019, 20:00 IST
ಕಳೆದ ಮಳೆಗಾಲದಲ್ಲಿ ಶಿರಾಡಿ ಘಾಟಿಯಲ್ಲಿ ಸಂಭವಿಸಿದ್ದ ಭೂಕುಸಿತದ ಸಂಗ್ರಹ ಚಿತ್ರ
ಕಳೆದ ಮಳೆಗಾಲದಲ್ಲಿ ಶಿರಾಡಿ ಘಾಟಿಯಲ್ಲಿ ಸಂಭವಿಸಿದ್ದ ಭೂಕುಸಿತದ ಸಂಗ್ರಹ ಚಿತ್ರ   

ಮಂಗಳೂರು: ಕಳೆದ ಮಳೆಗಾಲದಲ್ಲಿ ಕರಾವಳಿಯ ಜನರನ್ನು ದುಸ್ವಪ್ನದಂತೆ ಕಾಡಿದ್ದ ಶಿರಾಡಿ ಮತ್ತು ಸಂಪಾಜೆ ಘಾಟಿ ಮಾರ್ಗದಲ್ಲಿ ಮತ್ತೆ ಭೂಕುಸಿತ ಸಂಭವಿಸದಂತೆ ತಡೆಯಲು ಲೋಕೋಯಪಯೋಗಿ ಇಲಾಖೆ ಮುಂದಾಗಿದೆ. ಶಾಶ್ವತವಾಗಿ ಭೂಕುಸಿತ ತಡೆಗೆ ಮಳೆಗಾಲ ಆರಂಭಕ್ಕೂ ಮುನ್ನವೇ ಕಾಮಗಾರಿ ಕೈಗೊಳ್ಳಲು ಇಲಾಖೆ ಸಜ್ಜಾಗುತ್ತಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮಣ್ಣು ಎಂಜಿನಿಯರಿಂಗ್‌ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಆರ್‌.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ಎರಡೂ ಘಾಟಿ ಮಾರ್ಗಗಳಲ್ಲಿ ಅಧ್ಯಯನ ನಡೆಸಿದ್ದು, ಮಧ್ಯಂತರ ವರದಿ ಸಲ್ಲಿಸಿದೆ. ಕೆಲವೇ ದಿನಗಳೊಳಗೆ ಅಂತಿಮ ವರದಿ ಸಲ್ಲಿಸಲಿದೆ. ಈಗ ಮಧ್ಯಂತರ ವರದಿಯಲ್ಲಿನ ಸಲಹೆಗಳನ್ನು ಆಧರಿಸಿ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ರಾಷ್ಟ್ರೀಯ ಹೆದ್ದಾರಿ ವಿಭಾಗ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕೆಲಸ ಆರಂಭಿಸಿದೆ.

ಈ ಎರಡೂ ಘಾಟಿ ಮಾರ್ಗಗಳಲ್ಲಿ 2018ರ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ಶಿರಾಡಿ ಘಾಟಿಯಲ್ಲಿ 14 ಕಡೆ ಭೂಕುಸಿತದಿಂದ ರಸ್ತೆಯೇ ಮುಚ್ಚಿಹೋಗಿತ್ತು. ಮೂರು ಸ್ಥಳಗಳಲ್ಲಿ ತಿಂಗಳುಗಟ್ಟಲೆ ಗುಡ್ಡ ಕುಸಿದು ಬೀಳುತ್ತಲೇ ಇತ್ತು. ಈ ಕಾರಣದಿಂದ ನಾಲ್ಕು ತಿಂಗಳ ಕಾಲ ಈ ಮಾರ್ಗವನ್ನು ಮುಚ್ಚಲಾಗಿತ್ತು. 14 ಕಿಲೋಮೀಟರ್‌ ಉದ್ದದ ಸಂಪಾಜೆ ಘಾಟಿಯ ಬಹುಭಾಗ ಮಳೆಯ ರುದ್ರನರ್ತನಕ್ಕೆ ಕೊಚ್ಚಿ ಹೋಗಿತ್ತು. ಈ ಮಾರ್ಗ ಕೂಡ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬಂದ್‌ ಆಗಿತ್ತು.

ADVERTISEMENT

ಎರಡೂ ಮಾರ್ಗಗಳಲ್ಲಿ ಶಾಶ್ವತವಾಗಿ ಭೂಕುಸಿತ ತಡೆಗೆ ಕ್ರಮ ಕೈಗೊಳ್ಳುವ ಸಂಬಂಧ ಅಧ್ಯಯನ ನಡೆಸಲು ಪ್ರೊ.ಬಿ.ಆರ್‌.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯನ್ನು ನೇಮಿಸಲಾಗಿತ್ತು. ನಿವೃತ್ತ ಪ್ರಧಾನ ಎಂಜಿನಿಯರ್‌ ಹಾಗೂ ಲೋಕೋಪಯೋಗಿ ಇಲಾಖೆಯ ಟೆಂಡರ್‌ ಪರಿಶೀಲನಾ ತಾಂತ್ರಿಕ ಸಮಿತಿ ಅಧ್ಯಕ್ಷ ಜೈಪ್ರಸಾದ್, ಸೇತುವೆ ನಿರ್ಮಾಣ ಕ್ಷೇತ್ರದ ತಜ್ಞ ಸಲಹೆಗಾರ ಜಯಗೋಪಾಲ್‌ ಸಮಿತಿ ಸದಸ್ಯರಾಗಿದ್ದಾರೆ.

‘ಎರಡೂ ಘಾಟಿಗಳಲ್ಲಿ ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದ್ದ ಅಧ್ಯಯನ ಸಮಿತಿ ವಿಸ್ತೃತವಾಗಿ ಪರಿಶೀಲನೆ ನಡೆಸಿದೆ. ಸಮಿತಿ ಮೊದಲ ಹಂತದ ಸಲಹೆಗಳನ್ನು ನೀಡಿತ್ತು. ಈಗ ಅಂತಿಮ ವರದಿ ನಿರೀಕ್ಷಿಸುತ್ತಿದ್ದೇವೆ. ಭೂಕುಸಿತ ತಡೆಗೆ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ವಿಧಾನ ಬಳಕೆ: ಭೂಕುಸಿತದ ಪ್ರಮಾಣ ಮತ್ತು ಆ ಸ್ಥಳದ ಸ್ವರೂಪ ಆಧರಿಸಿ ಪ್ರತ್ಯೇಕವಾದ ಮೂರು ವಿಧಾನಗಳಲ್ಲಿ ಕಾಮಗಾರಿ ಕೈಗೊಳ್ಳಲು ಇಲಾಖೆ ಯೋಚಿಸಿದೆ. ಎತ್ತರದ ಗುಡ್ಡಗಳಿರುವ ಪ್ರದೇಶದಲ್ಲಿ ಸಾಯಿಲ್‌ ನೇಲಿಂಗ್‌, ಕಡಿಮೆ ಎತ್ತರದ ದಿಬ್ಬಗಳಿರುವ ಸ್ಥಳಗಳಲ್ಲಿ ಗೇಬಿಯನ್‌ ವಾಲ್‌ ನಿರ್ಮಾಣ ಮತ್ತು ರಸ್ತೆಯ ವಿಸ್ತೀರ್ಣ ಕಡಿಮೆ ಇರುವ ಪ್ರದೇಶಗಳಲ್ಲಿ ಮೈಕ್ರೋ ಪಿಲ್ಲಿಂಗ್‌ ತಂತ್ರಜ್ಞಾನ ಬಳಸಿ ಭೂಕುಸಿತ ತಡೆಯುವ ಯೋಜನೆ ರೂಪಿಸಲಾಗುತ್ತಿದೆ.

‘ಈಗ ಕಾಮಗಾರಿ ಚಾಲ್ತಿಯಲ್ಲಿರುವ ಸ್ಥಳಗಳಲ್ಲಿ ಅದೇ ಅನುದಾನದಲ್ಲಿ ಭೂಕುಸಿತ ತಡೆ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗುವುದು. ಉಳಿದ ಸ್ಥಳಗಳಲ್ಲಿ ಹೊಸದಾಗಿ ಅನುದಾನ ಮಂಜೂರಾತಿಯಾದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಮಳೆಗಾಲ ಆರಂಭಕ್ಕೂ ಮುನ್ನವೇ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಸಚಿವರು ಸೂಚಿಸಿದ್ದಾರೆ’ ಎಂದು ಗಣೇಶ್‌ ವಿವರಿಸಿದರು.

ನಿರ್ವಹಣಾ ಕಾಮಗಾರಿಗೆ ಸಿದ್ಧತೆ

ಚಾರ್ಮಾಡಿ ಘಾಟಿಯಲ್ಲೂ ಕಳೆದ ವರ್ಷ ಮಳೆಗಾಲದಲ್ಲಿ ಹಲವೆಡೆ ಭೂಕುಸಿತ ಸಂಭವಿಸಿತ್ತು. ಅಲ್ಲಿಯೂ ವಾರ್ಷಿಕ ನಿರ್ವಹಣಾ ಕಾಮಗಾರಿಯ ಅವಧಿಯಲ್ಲೇ ಭೂಕುಸಿತ ತಡೆಗೆ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.

‘ಚಾರ್ಮಾಡಿ ಘಾಟಿ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಯೋಜನೆ ಇಲ್ಲ. ಈಗ ಇರುವ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುವುದು. ಅದೇ ಸಮಯದಲ್ಲಿ ಭೂಕುಸಿತ ನಡೆದ ಸ್ಥಳಗಳಲ್ಲೂ ತಡೆಗೋಡೆ ನಿರ್ಮಾಣ ಮಾಡಲಾಗುವುದು’ ಎಂದು ಮುಖ್ಯ ಎಂಜಿನಿಯರ್‌ ಗಣೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.