ADVERTISEMENT

ಚಂದ್ರಯಾನ –2 ಅಧ್ಯಯನಕ್ಕೆ ರಷ್ಯಾ ಉಪಕರಣ

ಲ್ಯಾಂಡರ್‌ ಮತ್ತು ರೋವರ್‌ ಸ್ವದೇಶಿ

ಎಸ್.ರವಿಪ್ರಕಾಶ್
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಚಂದ್ರಯಾನ –2  ಅಧ್ಯಯನಕ್ಕೆ  ರಷ್ಯಾ ಉಪಕರಣ
ಚಂದ್ರಯಾನ –2 ಅಧ್ಯಯನಕ್ಕೆ ರಷ್ಯಾ ಉಪಕರಣ   
ಬೆಂಗಳೂರು: 2018 ರಲ್ಲಿ ಚಂದ್ರಯಾನ–2 ಬಾಹ್ಯಾಕಾಶ ನೌಕೆ ಮೂಲಕ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಚಂದ್ರನ ಅಂಗಳಕ್ಕೆ  ಕಳುಹಿಸುವ ಇಸ್ರೊ ಅಲ್ಲಿ ನಡೆಸಲಿರುವ ಪ್ರಮುಖ ಅಧ್ಯಯನಕ್ಕೆ  ರಷ್ಯಾದ ಉಪಕರಣವನ್ನು ಬಳಸಲಿದೆ.
 
ಚಂದ್ರನ ಅಂಗಳದ ಕಲ್ಲು ಮತ್ತು ಮಣ್ಣಿನಲ್ಲಿರುವ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ನಡೆಸುವುದು ಚಂದ್ರಯಾನ–2 ರ ಮುಖ್ಯ ಉದ್ದೇಶ. ಇದಕ್ಕೆ  ಅಗತ್ಯವಿರುವ ಉಪಕರಣ ‘ಸಿಎಂ–244 ಅಲ್ಫಾ ಎಮಿಟರ್‌’ ಅನ್ನು ರಷ್ಯಾದ ಐಸೊಟೋಪ್‌ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಇದನ್ನು ಇಸ್ರೊ ಖರೀದಿಸಿದೆ.
 
ಅಲ್ಫಾ ಕಿರಣಗಳನ್ನು ಹೊರಸೂಸಿ ಚಂದ್ರನಲ್ಲಿರುವ ಯಾವುದೇ ಕಲ್ಲು ಮತ್ತು ಮಣ್ಣಿನಲ್ಲಿರುವ ರಾಸಾಯನಿಕ ಸಂಯೋಜನೆಯನ್ನು ಅಲ್ಫಾ ಎಮಿಟರ್‌ ಪತ್ತೆ ಮಾಡುತ್ತದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.
 
ಆರಂಭದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಎರಡನ್ನೂ ರಷ್ಯಾದಿಂದ ಅಭಿವೃದ್ಧಿಪಡಿಸಿ ಪಡೆಯುವ ಯೋಜನೆ ಇಸ್ರೊದ್ದಾಗಿತ್ತು. ಇದನ್ನು ಸಕಾಲದಲ್ಲಿ ರಷ್ಯಾ ಪೂರೈಕೆ ಮಾಡುವಲ್ಲಿ ವಿಫಲವಾಯಿತು. ಹೀಗಾಗಿ ಇವೆರಡರ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಇಸ್ರೊ ಕೈಗೆತ್ತಿಕೊಂಡಿತು ಎಂದು ಮೂಲಗಳು ಹೇಳಿವೆ.
 
 ಕಕ್ಷೆಯಲ್ಲಿ ಪರಿಭ್ರಮಣ ನಡೆಸಿ ಚಿತ್ರವನ್ನು ಸೆರೆ ಹಿಡಿದು ಭೂಮಿಗೆ ಕಳಿಸುವ ವ್ಯವಸ್ಥೆ  ಚಂದ್ರಯಾನ – 1 ರಲ್ಲಿ ಇತ್ತು. ಚಂದ್ರಯಾನ– 2 ಭಾರತದ ಬಾಹ್ಯಾಕಾಶ ವಿಜ್ಞಾನದ ಮಟ್ಟಿಗೆ ಐತಿಹಾಸಿಕ ಆಗಲಿದೆ. ಇದು ಲ್ಯಾಂಡರ್‌ ಇಳಿಸಿ ರೋವರ್‌ ಮೂಲಕ  ಅಧ್ಯಯನ ನಡೆಸುತ್ತದೆ ಎಂದು  ಮೂಲಗಳು ಹೇಳಿವೆ.
 
 ನಾಸಾ 1997 ರಲ್ಲಿ ಮಂಗಳ ಗ್ರಹಕ್ಕೆ ಕಳುಹಿಸಿದ ಮಾರ್ಸ್‌ ಪಾಥ್‌ ಫೈಂಡರ್‌,  ಆ ಬಳಿಕ 2004 ರಲ್ಲಿ ಆಪರ್ಚ್ಯುನಿಟಿ, 2012 ರಲ್ಲಿ ಕ್ಯೂರಿಯಾಸಿಟಿ ಬಾಹ್ಯಾಕಾಶ ನೌಕೆಗಳಿಗೂ  ರಷ್ಯಾದ ಇದೇ ಕಂಪೆನಿ ಉಪಕರಣ ಪೂರೈಕೆ ಮಾಡಿತ್ತು.
 
2014 ರಲ್ಲಿ ಬಾಹ್ಯಾಕಾಶ ವಿಜ್ಞಾನ  ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ನಾಸಾ, ರೊಸೆಟ್ಟಾ ಬಾಹ್ಯಾಕಾಶ ನೌಕೆಯನ್ನು  ಧೂಮಕೇತುವಿನ (Churyumov–Gerasimenko)ಮೇಲೆ  ಇಳಿಸಿತ್ತು.

ಈ ನೌಕೆಯಲ್ಲಿದ್ದ ಲ್ಯಾಂಡರ್‌ ಫಿಲೆಯಲ್ಲಿ ಸಿಎಂ–244 ಉಪಕರಣ ಅಳವಡಿಸಲಾಗಿತ್ತು. ಇದು ಆಕಾಶಕಾಯ  ಅಧ್ಯ ಯನದ ಮಾಹಿತಿಯನ್ನು ಅತ್ಯಂತ ನಿಖರವಾಗಿ ಭೂಮಿಗೆ ರವಾನಿಸಿತ್ತು. ಸಿಎಂ–244 ಅನ್ನು ವಿಶ್ವದಲ್ಲಿ ಅಮೆರಿಕಾ ಮತ್ತು ರಷ್ಯಾ ಮಾತ್ರ ತಯಾರಿಸುತ್ತಿವೆ.
 
**
ಚಳ್ಳಕೆರೆಯಲ್ಲಿ ಪರೀಕ್ಷೆ

ಬಾಹ್ಯಾಕಾಶ ನೌಕೆಯಿಂದ  ಲ್ಯಾಂಡರ್‌ ಇಳಿಸುವ ಪರೀಕ್ಷೆಯನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆಸಲಾಗಿದೆ. 2016 ರ ನವೆಂಬರ್‌ನಲ್ಲಿ ಒಂದು ಪರೀಕ್ಷೆ ನಡೆದಿದ್ದು, ಫೆಬ್ರುವರಿಯಲ್ಲಿ ಮತ್ತೊಂದು ಪರೀಕ್ಷೆ ನಡೆದಿದೆ.

ಚಂದ್ರನ ಮೇಲ್ಮೈಯಲ್ಲಿರುವಂತೆ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿ, ನಿಗದಿತ ಎತ್ತರದಿಂದ ಲ್ಯಾಂಡರನ್ನು ಕಮಾಂಡ್‌ಗಳ ಮೂಲಕ ಮೆಲ್ಲಗೆ ಇಳಿಸುವ ಪ್ರಯೋಗ ನಡೆದಿದೆ.ಲ್ಯಾಂಡರ್‌ ಮೂಲಕ ಚಂದ್ರನ ಅಂಗಳದ ಮೇಲೆ ಇಳಿಯುವ  ರೋವರ್‌ ಭೂಮಿ ಒಂದು ದಿನ ಅಂದರೆ ಚಂದ್ರನ 14 ದಿನಗಳಷ್ಟು ಕಾರ್ಯ ನಿರ್ವಹಿಸುತ್ತದೆ. ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.