ADVERTISEMENT

ಚಕ್ರದ ಅಚ್ಚು ಮುರಿದು ನೆಲಕ್ಕಪ್ಪಳಿಸಿದ ಕೊಟ್ಟೂರೇಶ್ವರ ತೇರು

60 ಅಡಿ ರಥದ ಕೆಳಗೆ ಹಲವು ಭಕ್ತರು ಸಿಲುಕಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:38 IST
Last Updated 21 ಫೆಬ್ರುವರಿ 2017, 19:38 IST
ಮಂಗಳವಾರ ನಡೆದ ಕೊಟ್ಟೂರೇಶ್ವರ ರಥೋತ್ಸವ ಸಂದರ್ಭದಲ್ಲಿ ಚಕ್ರದ ಅಚ್ಚು ಮುರಿದು ತೇರು ಉರುಳಿ ಬಿತ್ತು
ಮಂಗಳವಾರ ನಡೆದ ಕೊಟ್ಟೂರೇಶ್ವರ ರಥೋತ್ಸವ ಸಂದರ್ಭದಲ್ಲಿ ಚಕ್ರದ ಅಚ್ಚು ಮುರಿದು ತೇರು ಉರುಳಿ ಬಿತ್ತು   

ಕೊಟ್ಟೂರು (ಬಳ್ಳಾರಿ ಜಿಲ್ಲೆ): ಜಿಲ್ಲೆಯ ಸುಪ್ರಸಿದ್ಧ ಕೊಟ್ಟೂರೇಶ್ವರ ರಥೋತ್ಸವ ಮಂಗಳವಾರ ಸಂಜೆ ಕೊನೆಯ ಘಟ್ಟವನ್ನು ಕಾಣುವ ಘಳಿಗೆಯಲ್ಲೇ ಸಂಜೆ ಚಕ್ರದ ಅಚ್ಚು ಮುರಿದು ತೇರು ಉರುಳಿಬಿದ್ದ ಘಟನೆ ನಡೆದಿದೆ. ಉತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ದುರ್ಘಟನೆ ನಡೆದಿದೆ.

8ರಿಂದ 10 ಸೆಕೆಂಡುಗಳಲ್ಲಿ, ಏಕಾಏಕಿ ನಡೆದ ಈ ಘಟನೆಯಿಂದ, ಸ್ಥಳದಲ್ಲಿದ್ದ ಸಾವಿರಾರು ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು. ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

ಘಟನೆ ನಡೆದ ಕೂಡಲೇ ಎಚ್ಚೆತ್ತ ಮಠದ ಎಂಟರಿಂದ ಹತ್ತು ಮಂದಿ ಪೂಜಾರಿಗಳು ಗಾಯಗೊಂಡರೂ ಲೆಕ್ಕಿಸದೆ, ಉತ್ಸವಮೂರ್ತಿಯನ್ನು ತೆಗೆದುಕೊಂಡು ಮಠದ ಕಡೆಗೆ ಓಡಿದರು.

ADVERTISEMENT

ಸಂಜೆ 5ಕ್ಕೆ ಸರಿಯಾಗಿ ಉತ್ಸವ ಆರಂಭವಾಯಿತು. ನೆಲೆಯಿಂದ ಪಾದಗಟ್ಟೆಗೆ ತೆರಳಿದ ತೇರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮತ್ತೆ ತೇರು ನೆಲೆಯ ಕಡೆಗೆ ಸಾಗಿತ್ತು. ಭಕ್ತರು ಕೊನೆ ಘಳಿಗೆಯ ಉತ್ಸಾಹದಲ್ಲಿದ್ದಾಗಲೇ  ತೇರು ವಾಲಿ ಬಿತ್ತು.

‘ಘಟನೆ ನಡೆದಾಗ ಸಂಜೆ 6.20 ಸಮೀಪಿಸಿತ್ತು. ಎರಡು ನಿಮಿಷ ಮುಂದಕ್ಕೆ ಹೋಗಿದ್ದರೆ ತೇರು ಮೂಲ ನೆಲೆಯಲ್ಲಿ ನಿಂತುಬಿಡುತ್ತಿತ್ತು. ಅಷ್ಟರಲ್ಲೇ ಅನಾಹುತ ಸಂಭವಿಸಿತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಾಗುತ್ತಿದ್ದ ತೇರಿನ ಚಕ್ರಕ್ಕೆ ಸನ್ನೆ ಹಾಕಿದ ರಭಸಕ್ಕೆ ಮುಂದಿನ ಬಲಭಾಗದ ಗಾಲಿಯ ಅಚ್ಚು ಮುರಿದು ತೇರು ಬಲಕ್ಕೆ ವಾಲಿತ್ತು. ಜಗಳೂರು ರಸ್ತೆಗೆ ತೇರು ಉರುಳಿ ಬಿತ್ತು. ಅಂಗಡಿ ಮುಂಗಟ್ಟುಗಳು ಇದ್ದ ಸ್ಥಳದಲ್ಲಿ ಬಿದ್ದಿದ್ದರೆ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು.  ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, 108 ತುರ್ತು ವಾಹನಗಳ ಸಿಬ್ಬಂದಿ ಹಾಗೂ ಪೊಲೀಸರು ತುರ್ತು ರಕ್ಷಣಾ ಕಾರ್ಯಕ್ಕಾಗಿ ಜನದಟ್ಟಣೆಯನ್ನು ದಾಟಿ ತೇರಿನ ಸ್ಥಳಕ್ಕೆ ಹೋಗಲು ಹರಸಾಹಸ ಮಾಡಬೇಕಾಯಿತು.

ಹಳೆಯ ಅಚ್ಚು ಕಾರಣ?
ತೇರಿಗೆ ಅಳವಡಿಸಿದ್ದ ಅಚ್ಚು ಅತಿ ಹಳೆಯದಾಗಿರುವುದೇ ಚಕ್ರ ಮುರಿಯಲು ಕಾರಣವಾಗಿರಬಹುದು ಎಂದೂ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ: ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ರಾಮ್‌ಪ್ರಸಾದ್‌ಮನೋಹರ್‌ ತಿಳಿಸಿದ್ದಾರೆ. ಕ್ರೇನ್‌ ಸಹಾಯದಿಂದ ತೇರನ್ನು ಮೇಲಕ್ಕೆ ಎತ್ತಲಾಗುವುದು. ಸ್ಥಳದಲ್ಲಿ ಹೊಸಪೇಟೆ ಉಪವಿಭಾಗಾಧಿಕಾರಿ ಪ್ರಶಾಂತಕುಮಾರ್‌ ಮಿಶ್ರಾ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.