ಹೊಸಪೇಟೆ: `ಜಾತಿ ಕಲಹ ತೊಡೆದುಹಾಕಲು ಪ್ರತಿಯೊಬ್ಬರಲ್ಲೂ ಭಾವೈಕ್ಯದ ಬೀಜ ಬಿತ್ತಬೇಕಿದೆ' ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ `ಭುವನ ವಿಜಯ' ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಕ್ಕು ಮತ್ತು ಅಧಿಕಾರಕ್ಕಾಗಿ ಶತಮಾನಗಳ ಹಿಂದೆಯೇ ಜಾತಿ ಸಂಘಟನೆಗಳು ಹುಟ್ಟಿಕೊಂಡಿದ್ದನ್ನು ನೆನಪಿಸಿದ ಅವರು, ಸಮಾಜದ ವಿಭಜನೆಗೆ ಕಾರಣವಾದ ಸಂಗತಿಗಳನ್ನು ವಿವರಿಸಿದರು. `ಇಂದಿನ ಪರಿಸ್ಥಿತಿಯಲ್ಲಿ ತಳ ಸಮುದಾಯಗಳಲ್ಲಿಯೂ ಈ ಸಮಸ್ಯೆ ಕಂಡು ಬರುತ್ತಿದೆ. ಏಕತೆಯ ಕಡೆಗೆ ಹೆಜ್ಜೆ ಹಾಕಲು ನಾವೆಲ್ಲರೂ ಶ್ರಮಿಸಬೇಕು' ಎಂದರು.
ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ತಳ ಸಮುದಾಯಗಳು, ರಾಜಕೀಯ ಪ್ರಜ್ಞೆಯಿಂದ ಮಾತ್ರ ಒಂದಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರಿಗೆ ಕಿವಿಮಾತು ಹೇಳಿದ ಮಹಾದೇವ, `ಸಂಶೋಧನೆ ಎಂಬುದು ಒಂದು ಪ್ರಕ್ರಿಯೆ ಆಗಬೇಕು. ಕೇವಲ ಒಣ ಅಂಕಿ-ಅಂಶಗಳ ಬದಲು ಒಳಗಣ್ಣಿನಿಂದ ನೋಡುವಂತಹ ಮಾನವೀಯ ವಿಚಾರಗಳಿಗೆ ಒತ್ತು ಕೊಡಬೇಕು. ನಮ್ಮ ಸಾಮಾಜಿಕ ಸಂಬಂಧಗಳನ್ನು ಗುಣಾತ್ಮಕಗೊಳಿಸಿ ಕೊಳ್ಳಬೇಕಾದರೆ ಬುಡಕಟ್ಟುಗಳಲ್ಲಿ ಇರುವ ಆರೋಗ್ಯಕರ ಮೌಲ್ಯಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪರು ಕನಸುಗಳನ್ನು ಹೊತ್ತವರಾಗಬೇಕು. ಕನ್ನಡ ನಾಡಿನ ವಿವಿಧ ಪಠ್ಯಗಳನ್ನು ಕನ್ನಡ ವಿಶ್ವವಿದ್ಯಾಲಯವು ರೂಪಿಸುವಂತಾಗಬೇಕು. ಪಠ್ಯಪುಸ್ತಕ ರಚನೆಗೆ ಕನ್ನಡ ವಿಶ್ವವಿದ್ಯಾಲಯ ಕೇಂದ್ರವಾಗಬೇಕು ಎಂದು ಆಶಿಸಿದರು.
ಡಾ. ರಹಮತ್ ತರೀಕೆರೆ ಸ್ವಾಗತಿಸಿ ಸಂವಾದಕ್ಕೆ ಚಾಲನೆ ನೀಡಿದರು. ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ನಾಡೋಜ ಪ್ರದಾನ: ಗುರುವಾರ ನಡೆದ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಅವರು ದೇವನೂರ ಮಹಾದೇವ ಅವರಿಗೆ `ನಾಡೋಜ' ಗೌರವ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.