ಗೊಟಗೋಡಿ (ಹಾವೇರಿ ಜಿಲ್ಲೆ): ಹಿರಿಯ ಸಂಶೋಧನಾ ಅಧಿಕಾರಿ, ನಿರ್ದೇಶಕ ಡಾ. ಕೆ ಪ್ರೇಮಕುಮಾರ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿ ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಅವರಿಗೆ ಪತ್ರ ಬರೆದಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಸಚಿವರಾಗಿದ್ದ ಪ್ರೇಮಕುಮಾರ್ ಅವರು ಮೂರು ವರ್ಷಗಳ ಅವಧಿಗೆ ಜಾನಪದ ವಿವಿ ಸೇವೆಗೆ ನಿಯೋಜನೆಗೊಂಡಿದ್ದರು. ಅವರ ಸೇವಾ ಹಿರಿತನ ಪರಿಗಣಿಸಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಅವರಿಗೆ ಪದೋನ್ನತಿ ನೀಡಿತ್ತು. ಆದರೆ ಇದಕ್ಕೆ ಸರ್ಕಾರದ ಅನುಮತಿ ಪಡೆಯದ ಕಾರಣ ಕೇಳಿ ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿತ್ತು.
‘ಸರ್ಕಾರದ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಸಿಂಡಿಕೇಟ್ ಸಭೆಯು ಹಾಗೆ ನಡೆದುಕೊಂಡಿಲ್ಲ’ ಎಂದು ಕುಲಸಚಿವ ಡಿ.ಬಿ. ನಾಯಕ ಅವರು ಇಲಾಖೆಯ ನೋಟಿಸ್‌ಗೆ ಉತ್ತರಿಸಿದ್ದರು. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿತ್ತು ಎಂದು ತಿಳಿದುಬಂದಿದೆ.
ಆದೇಶ ಪತ್ರ ಬಂದಿರುವುದನ್ನು ದೃಢೀಕರಿಸಿರುವ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ, ‘ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಈಗಾಗಲೇ ವಿಸ್ತೃತ ಪತ್ರವೊಂದನ್ನು ಬರೆಯಲಾಗಿದೆ. ಅಲ್ಲದೇ, ಇದೇ 30ರಂದು ನಡೆಯುವ ಸಿಂಡಿಕೇಟ್ ಸಭೆಯ ಮುಂದೆ ಉನ್ನತ ಶಿಕ್ಷಣ ಇಲಾಖೆಯ ಆದೇಶ ಪತ್ರ ಇಡಲಾಗುವುದು. ಸಿಂಡಿಕೇಟ್ ಸಭೆ ಕೈಗೊಳ್ಳುವ ನಿರ್ಣಯವನ್ನೂ ಕಳುಹಿಸಿಕೊಡಲಾಗುವುದು. ಅಂತಿಮವಾಗಿ ಉನ್ನತ ಶಿಕ್ಷಣ ಇಲಾಖೆ ನೀಡುವ ಆದೇಶವನ್ನು ಪಾಲಿಸಲಾಗುವುದು’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.