ಗೊಟಗೋಡಿ (ಹಾವೇರಿ ಜಿಲ್ಲೆ): ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ರಾಜೀನಾಮೆ ನೀಡಿದ್ದು, ಪ್ರಭಾರ ಕುಲಪತಿಯಾಗಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಡಿ.ಬಿ. ನಾಯಕ ಗುರುವಾರ ಅಧಿಕಾರ ಸ್ವೀಕರಿಸಿದರು.
‘ಅನಾರೋಗ್ಯದ ಹಿನ್ನೆಲೆಯಲ್ಲಿ ಮತ್ತು ಒತ್ತಡದ ಕೆಲಸ ಹಾಗೂ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದ್ದು, ವೈಯಕ್ತಿಕವಾಗಿ ನಿರ್ಧಾರ ಕೈಗೊಂಡು ರಾಜೀನಾಮೆ ನೀಡಿದ್ದೇನೆ.
ವಿಶ್ವವಿದ್ಯಾಲಯದ ಕುಲಪತಿಯಾಗಿ ನಿರ್ವಹಿಸಿದ ಕರ್ತವ್ಯ ಹಾಗೂ ಕೈಗೊಂಡ ಯೋಜನೆಗಳು ಮತ್ತು ಈ ಅವಧಿಯಲ್ಲಿ ರಾಜ್ಯಪಾಲರು, ಸರ್ಕಾರ, ವಿ.ವಿ.ಯ ಎಲ್ಲ ಸಹೋದ್ಯೋಗಿಗಳು ಹಾಗೂ ಹಾವೇರಿ ಜನತೆ ನೀಡಿದ ಸಹಕಾರದ ಬಗ್ಗೆ ತುಂಬು ಹೃದಯದ ಕೃತಜ್ಞತೆ ಹೇಳಲು ಬಯಸುತ್ತೇನೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸರ್ ಆಗಿ ಕೆಲಸ ಮುಂದುವರಿಸುತ್ತೇನೆ’ ಎಂದು ಅಧಿಕಾರ ಹಸ್ತಾಂತರಿಸಿದ ಬಳಿಕ ಚಿನ್ನಪ್ಪ ಗೌಡ ಹೇಳಿದರು.
ಚಿನ್ನಪ್ಪ ಗೌಡ ಅವರು 2015ರ ನವೆಂಬರ್ 9ರಂದು ಜಾನಪದ ವಿಶ್ವವಿದ್ಯಾಲಯದ ಎರಡನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ವರ್ಷದ ಜನವರಿ 17ರಂದೇ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದರು.
ಇದೇ 8ರಂದು ರಾಜೀನಾಮೆ ಅಂಗೀಕೃತವಾದ ಕಾರಣ, ಗುರುವಾರ ಬೆಳಿಗ್ಗೆ ಪ್ರಭಾರ ಕುಲಪತಿಗೆ ಅಧಿಕಾರ ಹಸ್ತಾಂತರಿಸಿದರು. ಈ ವರ್ಷದ ಆಗಸ್ಟ್ 31ಕ್ಕೆ ಅವರು ನಿವೃತ್ತರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.