ಬೆಂಗಳೂರು: ದೇವದಾಸಿ ಪದ್ಧತಿ ನಿಷೇಧಿಸಿ ರಾಜ್ಯ ಸರ್ಕಾರ 1982ರಲ್ಲೇ ಕಾನೂನು ಜಾರಿ ಮಾಡಿದ್ದರೂ, ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ರಾಜ್ಯದಲ್ಲಿ 23,787 ಮಂದಿ ದೇವದಾಸಿಯರು ಇರುವುದನ್ನು ಪತ್ತೆಮಾಡಿದೆ. ಈ ಪದ್ಧತಿಗೆ ಅಂತ್ಯ ಹಾಡುವಲ್ಲಿ ಸರ್ಕಾರ ವಿಫಲವಾಗಿರುವುದು ಸಮೀಕ್ಷೆಯ ಮೂಲಕ ಬಯಲಾಗಿದೆ.
ಸಮೀಕ್ಷೆ ನಡೆಸಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿಯರ ಸಂಖ್ಯೆಯನ್ನು ವಾಸ್ತವಕ್ಕಿಂತ ಹೆಚ್ಚಾಗಿ ತೋರಿಸಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ನಿಗಮವು ಹೇಳಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇವದಾಸಿಯರು ರಾಜ್ಯದಲ್ಲಿದ್ದಾರೆ. ಆದರೆ ಸರ್ಕಾರ ಈ ಕುರಿತು ಕುರುಡಾಗಿದೆ ಎಂದು ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ.
ದೇವದಾಸಿಯರ ಅಭಿವೃದ್ಧಿಗಾಗಿ ರೂಪಿಸಲಾದ ಹಲವಾರು ಯೋಜನೆಗಳ ಅಡಿ 42.14 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ನಿಗಮವು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಈ ಕುರಿತು ಇತ್ತೀಚೆಗೆ ಪರಿಶೀಲನೆ ನಡೆಸಿದ್ದರು.
ದೇವದಾಸಿಯರ ಪಿಂಚಣಿ ಯೋಜನೆಯಡಿ 12 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಸಲಹೆ ಮಾಡಿದ್ದರು.
ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ 1982ರಲ್ಲೇ ಜಾರಿ ಮಾಡಿದೆ. 1993-94ರಲ್ಲಿ ನಡೆದ ಸಮೀಕ್ಷೆಯೊಂದು ರಾಜ್ಯದ 10 ಜಿಲ್ಲೆಗಳಲ್ಲಿ ಒಟ್ಟು 22,873 ದೇವದಾಸಿಯರು ಇರುವುದನ್ನು ಪತ್ತೆ ಮಾಡಿತ್ತು. ಆದರೆ 2007-08ರಲ್ಲಿ 13 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಮಹಿಳಾ ಅಭಿವೃದ್ಧಿ ನಿಗಮ, ರಾಜ್ಯದಲ್ಲಿ 28 ಸಾವಿರ ದೇವದಾಸಿಯರು ಇರುವುದನ್ನು ಪತ್ತೆ ಮಾಡಿತು. ಈ ಸಮೀಕ್ಷೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತಗಳು ಪಾಲ್ಗೊಂಡಿದ್ದವು.
ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇವದಾಸಿಯರು ರಾಜ್ಯದಲ್ಲಿ ಇಲ್ಲ ಎಂದ ಅಧಿಕಾರಿಗಳು, ಇಡೀ ಸಮೀಕ್ಷೆ ಪ್ರಕ್ರಿಯೆಯನ್ನು 2010ರ ಫೆಬ್ರುವರಿಯಲ್ಲಿ ಪುನಃ ವಿಮರ್ಶೆಗೆ ಒಳಪಡಿಸಿ, ರಾಜ್ಯದಲ್ಲಿರುವ ದೇವದಾಸಿಯರ ಸಂಖ್ಯೆ 23,787 ಎಂಬ ತೀರ್ಮಾನಕ್ಕೆ ಬಂದರು.
`ತಿರುಚಿದ ಸಮೀಕ್ಷೆ~: ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಪ್ರಾಧ್ಯಾಪಕ (ಪ್ರಸ್ತುತ ಬೆಂಗಳೂರು ವಿ.ವಿ.ಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ) ಪ್ರೊ. ಜೋಗನ್ ಶಂಕರ್, `ಸರ್ಕಾರ ದೇವದಾಸಿಯರ ಅಭಿವೃದ್ಧಿ ಯೋಜನೆಗಳನ್ನು ಆಕರ್ಷಕವಾಗಿ ಪ್ರಚಾರ ಮಾಡುತ್ತಿದೆ. ಆದರೆ ಇದರಿಂದ ಯೋಜನೆಗಳ ಉದ್ದೇಶ ಈಡೇರುತ್ತಿಲ್ಲ~ ಎಂದರು.
`ದೇವದಾಸಿಯರ ಬಗ್ಗೆ ಸರ್ಕಾರ ನಡೆಸಿದ ಎಲ್ಲ ಸಮೀಕ್ಷೆಗಳನ್ನೂ ತಿರುಚಲಾಗಿದೆ. ಸಮೀಕ್ಷೆಗಳನ್ನು ಅರ್ಹ ವ್ಯಕ್ತಿಗಳು ನಡೆಸಿಲ್ಲ. ಇಂಥ ಸಮೀಕ್ಷೆಗಳನ್ನು ಸ್ವತಂತ್ರ ಸಂಘ-ಸಂಸ್ಥೆಗಳಿಂದ ಮಾಡಿಸಬೇಕು. ಇಲ್ಲಿ, ಸರ್ಕಾರ ನಿಜವಾದ ದೇವದಾಸಿಯರನ್ನು ಸಮೀಕ್ಷೆಯಿಂದ ಕೈಬಿಟ್ಟಿದೆ ಅಥವಾ ದೇವದಾಸಿ ಅಲ್ಲದವರನ್ನೂ ದೇವದಾಸಿಯರೆಂದು ಹೇಳುತ್ತಿದೆ~ ಎಂದು ಪ್ರೊ. ಶಂಕರ್ ಹೇಳಿದರು.
30 ವರ್ಷಗಳ ಹಿಂದೆ ಕರ್ನಾಟಕ - ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲೇ 1.5 ಲಕ್ಷ ದೇವದಾಸಿಯರು ಇದ್ದಾರೆ ಎಂದು ಅಂದಾಜಿಸಲಾಗಿತ್ತು ಎಂಬುದಾಗಿ ಅವರು ತಿಳಿಸಿದರು.
ಮಹಿಳೆಯರು ಸಾಮೂಹಿಕವಾಗಿ ದೇವದಾಸಿಯರಾಗುವುದು ನಿಂತಿದ್ದರೂ, ಇಂದಿಗೂ ಕೆಲವರು ಚಿಕ್ಕಪುಟ್ಟ ದೇವಸ್ಥಾನಗಳಲ್ಲಿ ದೇವದಾಸಿಯರಾಗಿ ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೇವದಾಸಿಯರ ಅಭಿವೃದ್ಧಿಗೆ ಮೀಸಲಿಡಲಾದ ಹಣವನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಿದರು.
ಸರ್ಕಾರ ಕೆಲವೊಂದು ಯೋಜನೆಗಳ ಮೂಲಕ ತಮಗೆ ಸೌಕರ್ಯಗಳನ್ನು ಒದಗಿಸುತ್ತದೆ ಎಂಬ ಗುಂಗಿನಲ್ಲಿ ಕೆಲವು ದೇವದಾಸಿಯರು ದುಡಿಮೆಯನ್ನು ಕಡೆಗಣಿಸಿದ್ದಾರೆ. ಇತ್ತ ಸರ್ಕಾರ ಕೂಡ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.