ಶ್ರವಣಬೆಳಗೊಳ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೊದಲ ಬಾರಿಗೆ ದಲಿತ ಕವಿಯೊಬ್ಬರು ಸಮ್ಮೇಳನಾಧ್ಯಕ್ಷರಾಗಿರುವುದಕ್ಕೆ ಸಾಕ್ಷಿಯಾಗಿರುವ ಜೈನರ ಬೀಡು ಶ್ರವಣಬೆಳಗೊಳವು, ಹಾಸನ ಜಿಲ್ಲೆಯ ದಲಿತ ಸಮುದಾಯದ ಮೊದಲ ಕವಿ ಡಿ. ಗೋವಿಂದ ದಾಸ್ ಅವರ ನೆಲೆ ಎಂಬುದು ಮತ್ತೊಂದು ವಿಶೇಷವಾಗಿದೆ.
ಬಹುಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಗೋವಿಂದ ದಾಸ್ ಅವರ ಹೆಸರು ಕವಿ, ಹೋರಾಟಗಾರ, ಸಮಾಜ ಸುಧಾರಕ ಹಾಗೂ ರಾಜಕಾರಣಿ.... ಹೀಗೆ ಹಲವು ವಿಶೇಷಣಗಳೊಂದಿಗೆ ತಳುಕು ಹಾಕಿಕೊಂಡಿದೆ.
ಗೋವಿಂದ ದಾಸ್ ಅವರು ಶ್ರವಣಬೆಳಗೊಳದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ದಮ್ಮನಿಂಗಳ ಗ್ರಾಮದಲ್ಲಿ ಕೆಂಪಮ್ಮ– ದಾಸಪ್ಪ ದಂಪತಿಗೆ 1910ರಲ್ಲಿ ಜನಿಸಿದರು. ಆ ಕಾಲದಲ್ಲಿ ಮೈಸೂರು, ಕೆ.ಆರ್. ಪೇಟೆ ಹಾಗೂ ಕಿಕ್ಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಸಪ್ಪ ಅವರ ಕುಟುಂಬ ಚರ್ಮದ ವ್ಯಾಪಾರದಲ್ಲಿ ಹೆಸರುವಾಸಿಯಾಗಿತ್ತು.
ಶಿಕ್ಷಕನಾಗಿ ಕೆಲಸ: ಮಗ ಲೆಕ್ಕ ಹಾಕುವಷ್ಟು ಮಾತ್ರ ಓದಿದರೆ ಸಾಕು ಎಂಬ ತಂದೆ ದಾಸಪ್ಪ ಅವರ ಆಶಯಕ್ಕೆ ವಿರುದ್ಧವಾಗಿ ಗೋವಿಂದ ದಾಸ್ ಅವರು ಕದ್ದು ಶ್ರವಣಬೆಳಗೊಳದ ಶಾಲೆಯೊಂದಕ್ಕೆ ಪ್ರಾಥಮಿಕ ಶಿಕ್ಷಣಕ್ಕೆ ಸೇರಿದರು. ನಂತರದ ವಿದ್ಯಾಭ್ಯಾಸವನ್ನು ತುಮಕೂರು, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಮುಗಿಸಿದರು. ನಂತರ ಅಲ್ಲೇ ಶಿಕ್ಷಕನಾಗಿ ವೃತ್ತಿ ಆರಂಭಿಸಿದರು.
ಹರಿಜನ ತರುಣ ಕವಿ: ಶಿಕ್ಷಕರಾಗಿದ್ದರೂ ದಾಸ್ ಅವರ ಮನಸ್ಸು ತುಡಿಯುತ್ತಿದ್ದದ್ದು ಕಾವ್ಯದ ಕಡೆಗೆ. ಅದಕ್ಕಾಗಿಯೇ ಅವರು, ‘ನನಗೆ ಸರ್ಕಾರಿ ಶಾಲೆ ಬೇಡ. ನಾನು ಭಾಷೆ ಮತ್ತು ಸಮಾಜ ಸುಧಾರಣೆಯ ಕೆಲಸ ಮಾಡುತ್ತೇನೆ’ ಎಂದು ತಮ್ಮ ವೃತ್ತಿ ತೊರೆದು ಕಾವ್ಯ ವೃತ್ತಿ ಆರಂಭಿಸಿದರು. ಜಾತೀಯತೆ, ಅಸ್ಪೃಶ್ಯತೆ, ವ್ಯಕ್ತಿ ಚಿತ್ರಣ, ವೈಚಾರಿಕತೆ, ಪರಿಸರ, ಸ್ವಾತಂತ್ರ್ಯ ಹೋರಾಟ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಕವಿತೆಗಳನ್ನು ದಾಸ್ ಅವರು ರಚಿಸಿದ್ದಾರೆ.
ಜತೆಗೆ, ‘ವಿಜಯ ವಿಕ್ರಮ’, ‘ನಡು ನೀರಿನ ಹಡಗು‘ ಹಾಗೂ ‘ಕಲಿಯುಗದ ಮನು‘ ಎಂಬ ನಾಟಕಗಳನ್ನೂ ಕೂಡ ಅವರು ರಚಿಸಿದ್ದರು. 1937ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಬಿ.ಎಂ. ಶ್ರೀಕಂಠಯ್ಯ ಅವರ ಪ್ರೋತ್ಸಾಹದೊಂದಿಗೆ ‘ಹರಿಜನಾಭ್ಯುದಯ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿದ್ದರು.
ವಿಪರ್ಯಾಸವೆಂದರೆ, ದಾಸ್ ಅವರ ಸಾಹಿತ್ಯವು ಪ್ರಕಟವಾಗಿದ್ದಕ್ಕಿಂತ ಅಪ್ರಕಟವಾಗಿದ್ದೇ ಹೆಚ್ಚು. ಸದ್ಯ ಡಾ.ಎಂ.ಎಸ್. ಶೇಖರ್ ಅವರ ಸಂಪಾದನೆಯಲ್ಲಿ ‘ಡಿ. ಗೋವಿಂದ ದಾಸ್ ಸಮಗ್ರ ಸಾಹಿತ್ಯ’ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದೆ. ಉಳಿದ ಅಪ್ರಕಟಿತ ಬರಹಗಳನ್ನು ಒಟ್ಟುಗೂಡಿಸಿ ಪ್ರಕಟಿಸುವ ಕಾರ್ಯದಲ್ಲಿ ದಾಸ್ ಅವರ ಪುತ್ರ ಜಿ. ನಿರಂಜನ್ ದಾಸ್ ರಾಜ್ಬಾನ್ ಅವರು ನಿರತರಾಗಿದ್ದಾರೆ.
ಸಮಾಜ ಸುಧಾರಕ ಮತ್ತು ಹೋರಾಟಗಾರ: ಆ ಕಾಲದ ಸಮಕಾಲೀನ ಸಾಹಿತಿಗಳಿಂದ ಪ್ರಭಾವಿತರಾಗಿದ್ದ ಗೋವಿಂದ ದಾಸ್ ಅವರು, ತಮ್ಮನ್ನು ಕೇವಲ ಕಾವ್ಯಕ್ಕೆ ಸೀಮಿತಗೊಳಿಸಿಕೊಳ್ಳದೆ, ಅಸ್ಪೃಶ್ಯತೆ ವಿರೋಧಿ ಚಳವಳಿ, ಹರಿಜನರ ದೇವಾಲಯ ಪ್ರವೇಶ, ಸಮಾಜ ಸುಧಾರಣೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ವಿಶ್ವವಿಖ್ಯಾತ ಶ್ರವಣಬೆಳಗೊಳದ ಬೆಟ್ಟದ ಗೊಮ್ಮಟೇಶ್ವರನ ದರ್ಶನಕ್ಕೆ ದಲಿತರಿಗೆ ಪ್ರವೇಶ ನಿಷಿದ್ಧದ ಕುರಿತು 1934ರಲ್ಲಿ ಉಗ್ರ ಪ್ರತಿಭಟನೆ ನಡೆಸಿದ್ದ ಅವರು, ಈ ವೇಳೆ ‘ನಾನೆಂಥ ಭಾಗ್ಯಹೀನನೊ ಹೇ ಗೊಮ್ಮಟೇಶ, ನೀನೆಂಥ ಪಕ್ಷಪಾತಿಯೊ ಹೇ ಭಕ್ತಿ ಕೋಶ’ ಎಂಬ ಕವಿತೆಯೊಂದನ್ನು ಬರೆದಿದ್ದರು. ಅಲ್ಲದೆ, ಅಂದಿನಿಂದ ಗೊಮ್ಮಟೇಶ್ವರನ ದರ್ಶನಕ್ಕೆ ದಲಿತರಿಗೂ ಅವಕಾಶ ನೀಡಲಾಯಿತು.
ರಾಜಕಾರಣದಲ್ಲೂ ಹೆಸರು: ಗೋವಿಂದ ದಾಸ್ ಅವರ ಸಾಹಿತ್ಯ ಮತ್ತು ಸಮಾಜಸೇವೆಯನ್ನು ಗುರುತಿಸಿದ್ದ ಅಂದಿನ ಮೈಸೂರು ಸರ್ಕಾರ, 1942ರಲ್ಲಿ ಅವರನ್ನು ಮೈಸೂರು ಪ್ರಜಾಪ್ರತಿನಿಧಿ ಸಭಾದ ಸದಸ್ಯರನ್ನಾಗಿ ನೇಮಿಸಿತ್ತು. ನಂತರ 1948ರಲ್ಲಿ ರಾಜ್ಯಾಂಗ ಸಭಾದ ಹಾಸನ ಜಿಲ್ಲಾ ಪ್ರತಿನಿಧಿಯಾಗಿ ನೇಮಕಗೊಂಡ ಅವರು, ಕಾಂಗ್ರೆಸ್ ಪಕ್ಷದಿಂದ 1952ರಲ್ಲಿ ಬೇಲೂರು ತಾಲ್ಲೂಕಿನ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಈ ವೇಳೆ ಹಲವು ಜನೋಪಯೋಗಿ ಕೆಲಸಗಳನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಗೋವಿಂದ ದಾಸ್ ಅವರು 1986 ಆಗಸ್ಟ್ 18ರಂದು ತೀರಿಕೊಂಡರು.
ಗೋವಿಂದ ದಾಸ್‌ಗೆ ಗೌರವ
ಜಿಲ್ಲೆಯ ಮೊದಲ ಕವಿಯಾದ ಗೋವಿಂದ ದಾಸ್ ಅವರ ಹೆಸರನ್ನು ಶ್ರವಣಬೆಳಗೊಳದಿಂದ ಕೆ.ಆರ್. ಪೇಟೆ ಸಂಪರ್ಕಿಸುವ ದಾರಿಗೆ ‘ದಮ್ಮನಿಂಗಲ ಗೋವಿಂದ ದಾಸ್ ನೆನಪಿನ ದ್ವಾರ’ ಎಂದು ನಾಮಕರಣ ಮಾಡುವ ಮೂಲಕ ಈ ಸಮ್ಮೇಳನದಲ್ಲಿ ಗೌರವ ಸಲ್ಲಿಸಲಾಗಿದೆ. ಜತೆಗೆ, ಸಮ್ಮೇಳನ ಕುರಿತು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಪ್ರಚಾರ ಯಾತ್ರೆ ಕೈಗೊಂಡಿದ್ದ ಸಾಹಿತ್ಯ ತೇರುಗಳ ಪೈಕಿ ಒಂದರಲ್ಲಿ ದಾಸ್ ಅವರ ಭಾವಚಿತ್ರ ಕೂಡ ಹಾಕಿದ್ದು, ಇಲ್ಲಿನ ಸಾಹಿತ್ಯಾಭಿಮಾನಿಗಳು ಜಿಲ್ಲೆಯ ಮೊದಲ ದಲಿತ ಕವಿಯನ್ನು ಮರೆತಿಲ್ಲ ಎಂಬುದರ ದ್ಯೋತಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.