ಬೆಂಗಳೂರು: ಸುಮಾರು ಹತ್ತು ವರ್ಷದಿಂದ ಉಮೇಶ್ ರೆಡ್ಡಿ ಸೂರ್ಯನ ಬೆಳಕನ್ನೇ ಕಂಡಿಲ್ಲ. ಜೈಲಿನಲ್ಲಿ ಕೋಣೆಯೊಂದರಲ್ಲಿ ಈತನನ್ನು ಏಕಾಂಗಿಯಾಗಿ ಇರಿಸಲಾಗಿದೆ. ಎಷ್ಟೊ ಬಾರಿ ಈತ ಈ ಕೋಣೆಯ ಶೌಚಾಲಯದಲ್ಲೇ ಮಲಗುತ್ತಾನೆ..! ಉಮೇಶ್ ರೆಡ್ಡಿಯ ಇಂತಹ ಹತ್ತಾರು ವಿಕ್ಷಿಪ್ತ ಅಂಶಗಳನ್ನು ಈತನ ಪರ ವಕೀಲರು ಅರ್ಜಿಯಲ್ಲಿ ಕಾಣಿಸಿದ್ದಾರೆ.
‘ಎಷ್ಟೋ ವೇಳೆ ಈತ ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾನೆ. ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಸ್ನಾನ ಮಾಡುವುದೇ ಇಲ್ಲ. ಜೈಲಿನಲ್ಲಿರುವ ಇಬ್ಬರು ಕೈದಿಗಳಿಂದಲೇ ಈತನಿಗೆ ಸ್ನಾನ ಮಾಡಿಸಲಾಗುತ್ತಿದೆ. ಆತನ ಕೋಣೆಯನ್ನೂ ಇತರರೇ ಸ್ವಚ್ಛ ಮಾಡುತ್ತಾರೆ. ಈತ ಇತರರ ಯಾವುದೇ ಮಾತುಗಳಿಗೆ ಸ್ಪಂದಿಸುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಕೆನ್ನೆಗೆ ಹೊಡೆದೇ ಎಚ್ಚರಗೊಳಿಸಿ ವಾಸ್ತವಕ್ಕೆ ತಂದು ಮಾತನಾಡಿಸಬೇಕಿದೆ. ಕೆಲವು ಸಂದರ್ಭಗಳಲ್ಲಿ ವಿಕಾರವಾಗಿ ಕಿರಚಿಕೊಳ್ಳುತ್ತಾನೆ. ಪ್ರತಿ ನಿತ್ಯ ಈತನನ್ನು ಜೈಲಿನ ವೈದ್ಯಾಧಿಕಾರಿ ತಪಾಸಣೆ ಮಾಡುತ್ತಾರೆ.
ಮನೋವೈದ್ಯರು ಈತನನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ‘ನಿಮ್ಹಾನ್ಸ್’ಗೆ ಕಳುಹಿಸುವಂತೆ ಸಲಹೆ ಮಾಡಿದ್ದಾರೆ. ಆದರೆ ಈತನಕ ಕಳುಹಿಸಲಾಗಿಲ್ಲ. ಈತ ಏಕಾಂಗಿ ವಾಸದಲ್ಲಿ ಇರುವುದರಿಂದ ಇಂತಹ ಸ್ಥಿತಿ ತಲುಪಿದ್ದಾನೆ.
ಜೈಲಿನ ಕಾರ್ಯಕ್ರಮಗಳನ್ನು ಹೊರತುಪಡಿಸಿದಂತೆ ಪ್ರತಿನಿತ್ಯ 30 ರಿಂದ 60 ನಿಮಿಷಗಳವೆರೆಗೆ ಮಾತ್ರ ಈತನನ್ನು ಸೆಲ್‌ನಿಂದ ಹೊರಗೆ ಬಿಡಲಾಗುತ್ತಿದೆ. ಇತರೆ ಕೈದಿಗಳೊಂದಿಗೆ ಸಹಭೋಜನಕ್ಕೆ ಅವಕಾಶ ನೀಡುತ್ತಿಲ್ಲ. ಊಟವನ್ನು ಆತನ ಕೋಣೆಯೊಳಗೇ ನೀಡಲಾಗುತ್ತಿದೆ. ದಿನದ 23 ಗಂಟೆಗಳಿಗೂ ಹೆಚ್ಚು ಕಾಲ ಈತನನ್ನು ಕೋಣೆಯೊಳಗೆ ಬಂದಿಯಾಗಿ ಇರಿಸಲಾಗುತ್ತಿದೆ.
18 ವರ್ಷ ಆರು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವ ಉಮೇಶ್ ರೆಡ್ಡಿ ವಿವರ ಇಂತಿದೆ.
*28.02.1998– ಬೆಂಗಳೂರಿನ ಯಶವಂತಪುರದ ಮರಡಿ ಸುಬ್ಬಯ್ಯ ಎಂಬುವವರ ಪತ್ನಿ ಜಯಶ್ರಿ ಅತ್ಯಾಚಾರಕ್ಕೆ ಈಡಾಗಿ ಹತ್ಯೆಯಾದರು. ಈ ಪ್ರಕರಣದ ಆರೋಪಿ ಉಮೇಶ್ ರೆಡ್ಡಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 302 ಮತ್ತು 392ರ ಅಡಿಯಲ್ಲಿ ದೂರು ದಾಖಲು.
*2.03.1998–ಉಮೇಶ್ ರೆಡ್ಡಿ ಬಂಧನ.
*25.04.1998–ಉಮೇಶ್ ರೆಡ್ಡಿ ವಿರುದ್ಧ ಐಪಿಸಿ ಕಲಂ 376, 302 ಮತ್ತು 392ರ ಅಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ.
*27.10.2016–ಬೆಂಗಳೂರಿನ ತ್ವರಿತ ವಿಚಾರಣೆಯ ಸೆಷನ್ಸ್ ನ್ಯಾಯಾಲಯ–7 ರಲ್ಲಿ ಪ್ರಕರಣದ ವಿಚಾರಣೆ ಪೂರೈಸಿ ಗಲ್ಲು ಶಿಕ್ಷೆ ಆದೇಶ.
*26.10.2006–ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ.
*18.02.2009– ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಜಾ
*7.09.2011–ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ವಿಶೇಷ ಮೇಲ್ಮನವಿ ವಜಾ
*15.05.2013–ಈತನ ತಾಯಿ ಗೌರಮ್ಮ ಸಲ್ಲಿಸಿದ ಕ್ಷಮಾದಾನದ ಅರ್ಜಿ ರಾಷ್ಟ್ರಪತಿಗಳಿಂದ ತಿರಸ್ಕಾರ
*18.05.2013–ರಾಷ್ಟ್ರಪತಿಗಳು ಕ್ಷಮಾದಾನದ ಅರ್ಜಿ ತಿರಸ್ಕರಿಸಿದ್ದ ಬಗ್ಗೆ ಉಮೇಶ್ ರೆಡ್ಡಿಗೆ ಮಾಹಿತಿ.
*3.10.2016–ಉಮೇಶ್ ರೆಡ್ಡಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರೀಂ ಕೋರ್ಟ್‌ನಿಂದ ತಿರಸ್ಕಾರ. ಗಲ್ಲು ಶಿಕ್ಷೆ ಕಾಯಂ.
*17.10.2016– ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ವಿಚಾರಣೆ ಆರಂಭ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.