ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಶೋಧಕಿ ಹನುಮಾಕ್ಷಿ ಗೋಗಿ ಅವರಿಗೆ ‘ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಟಿ.ಎಸ್.ಶೈಲಜಾ ಅವರು ಪರಿಷತ್ತಿನಲ್ಲಿ ಇಟ್ಟಿರುವ ದತ್ತಿ ನಿಧಿಯಿಂದ ಈ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ₹ 20 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ‘ಗರ್ಭದಿಂದ ಗೋರಿಯವರೆಗೆ ಹೆಣ್ಣು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಮಹಿಳೆಗೆ ಗೌರವ ನೀಡುವುದರ ಜತೆಗೆ ಸಾಮಾಜಿಕ ಭದ್ರತೆಯನ್ನು ನೀಡಬೇಕು ಮತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹನುಮಾಕ್ಷಿ ಗೋಗಿ, ‘ಶಾಲಾ ದಿನಗಳಲ್ಲಿಯೇ ಅಶೋಕನ ಶಾಸನಗಳು ನನ್ನನ್ನು ಇತಿಹಾಸ ಸಂಶೋಧನೆಯತ್ತ ಸೆಳೆದವು. ಇತಿಹಾಸಕಾರರು ದಕ್ಷಿಣ ಕರ್ನಾಟಕದ ಬಗ್ಗೆ ಹಲವು ಸಂಶೋಧನೆ ಮಾಡಿದ್ದಾರೆ. ಆದರೆ, ಉತ್ತರ ಕರ್ನಾಟಕದ ಅಷ್ಟಾಗಿ ಸಂಶೋಧನೆಗಳು ನಡೆದಿಲ್ಲ. ಉತ್ತರ ಕರ್ನಾಟಕದ ಇತಿಹಾಸದ ಬಗ್ಗೆಯೂ ಹೆಚ್ಚು ಸಂಶೋಧನೆಗಳು ನಡೆಯಬೇಕು’ ಎಂದರು.
ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ‘ಸಾಹಿತ್ಯ ಪರಿಷತ್ತು ಮಹಿಳೆಯರನ್ನು ನಿರ್ಲಕ್ಷಿಸಿಲ್ಲ. ಶತಮಾನೋತ್ಸವ ವರ್ಷಾಚರಣೆ ಯಲ್ಲಿರುವ ಪರಿಷತ್ತಿನ ವತಿಯಿಂದ ಮಹಿಳೆಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಆಗಸ್ಟ್ 29 ಮತ್ತು 30ರಂದು ಬೆಳಗಾವಿಯಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.