ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಟಿ.ಪಿ. ಅಶೋಕ ಹಾಗೂ ಎಚ್.ಎಸ್. ಶ್ರೀಮತಿ ಆಯ್ಕೆಯಾಗಿದ್ದಾರೆ.
ಟಿ.ಪಿ. ಅಶೋಕ ಅವರ ‘ಕಥನ ಭಾರತಿ’ ಕೃತಿಯು ಪ್ರಸಕ್ತ ಸಾಲಿನ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿರುವ ಬೆಂಗಾಲಿ ಸಾಹಿತಿ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- ಭಾಗ–1 ಮತ್ತು ಭಾಗ– 2 ಕೃತಿಗಳು ಅನುವಾದ ಪ್ರಕಾರದ ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿಯು ₹ 50,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
2018ರ ಫೆಬ್ರುವರಿ 12ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರೊ.ತೇಜಸ್ವಿ ಕಟ್ಟೀಮನಿ, ಜ.ನಾ. ತೇಜಶ್ರೀ ಹಾಗೂ ಡಾ.ಕೆ.ಆರ್. ಸಂಧ್ಯಾರೆಡ್ಡಿ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದ ಕೃತಿಗಳನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು ಎಂದು ಅವರು ಹೇಳಿದರು.
ದೇಶದ 24 ಭಾಷೆಗಳಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಕಾವ್ಯ, ಸಣ್ಣ ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ ಹಾಗೂ ನಾಟಕ ವಿಭಾಗದ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ 2016ನೇ ಸಾಲಿನ ಪ್ರಶಸ್ತಿ ದೊರತಿತ್ತು.
**
ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಕಂಬಾರ
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದ್ದು, ಕನ್ನಡದ ಹೆಸರಾಂತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಒಳಗೊಂಡಂತೆ ಮೂವರು ಸ್ಪರ್ಧೆಯಲ್ಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಒಟ್ಟು ಆರು ಜನ ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ಡಾ.ಕಂಬಾರ, ಮರಾಠಿಯ ಸಾಹಿತಿ ಬಾಲಚಂದ್ರ ನೇಮಾಡೆ, ಒಡಿಯಾ ಸಾಹಿತಿ ಪ್ರತಿಭಾ ರಾಯ್ ಅವರು ಕಣದಲ್ಲಿ ಉಳಿದಿದ್ದಾರೆ ಎಂದು ಕೆ.ಶ್ರೀನಿವಾಸರಾವ್ ಹೇಳಿದರು.
ಭೈರಪ್ಪ ಅವರಿಗೆ ಆಹ್ವಾನ: ಫೆಬ್ರುವರಿ 12ರಿಂದ 17ರವರೆಗೆ ನವದೆಹಲಿಯಲ್ಲಿ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂವಾದ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂವಾದದಲ್ಲಿ ಪಾಲ್ಗೊಳ್ಳುವಂತೆ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಆರು ದಿನ ನಡೆಯುವ ಸಾಹಿತ್ಯದ ಉತ್ಸವದಲ್ಲಿ ದೇಶದ ವಿವಿಧ ಭಾಗಗಳ ಸಾಹಿತಿಗಳು, ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದು, ಸಾಹಿತ್ಯ ಕ್ಷೇತ್ರದ ಸ್ಥಿತಿಗತಿ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.