ಕೋಲಾರ: ಬರಗಾಲ ಪೀಡಿತ ಜಿಲ್ಲೆಯಾದ ಕೋಲಾರ ಈಗ ಹೊಸ ರೀತಿಯಲ್ಲಿ ಎಚ್ಚೆತ್ತುಕೊಂಡಿದೆ. ಶಾಶ್ವತ ನೀರಾವರಿಯನ್ನು ಕನಸು–ಎಚ್ಚರದಲ್ಲೂ ಕನವರಿಸುತ್ತಿರುವ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ವರ್ಗಾವಣೆಗೆ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ.
‘ಜನರ ಜಿಲ್ಲಾಧಿಕಾರಿಯಾಗಿರುವ ಅವರನ್ನು ಬಿಟ್ಟುಕೊಡಲಾರೆವು’ ಎನ್ನುತ್ತಿದ್ದಾರೆ ಜನ. ಗುರುವಾರ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ.
2013ರ ಆಗಸ್ಟ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿವರೆಗೆ ತಮ್ಮ ಜನಪರ ಆಡಳಿತ ವೈಖರಿಯಿಂದ ಜಿಲ್ಲಾಧಿಕಾರಿ ಮನೆ ಮಾತಾಗಿದ್ದಾರೆ. ಇದುವರೆಗೆ ಜಿಲ್ಲೆಯ ಯಾವೊಬ್ಬ ಜಿಲ್ಲಾಧಿಕಾರಿಯೂ ಇಲ್ಲಿನ ಜನರ ಈ ಪರಿಯ ಪ್ರೀತಿಗೆ ಪಾತ್ರರಾಗಿರಲಿಲ್ಲ.
ಬ್ಯಾಟು ಹಿಡಿದರೆ ಅವರು ಉತ್ತಮ ಕ್ರಿಕೆಟಿಗ. ಕೋಟು ಧರಿಸಿಯೇ, ಜನರ ನಡುವೆ ಪೂಜಾ ಕುಣಿತದ ಪಟ ಹೊತ್ತು ಸಂಭ್ರಮದಿಂದ ಕುಣಿಯುತ್ತಾರೆ. ಬಡ ದಲಿತರ ಮನೆಗೆ ಪತ್ನಿ ಸಮೇತ ಹೋಗಿ ಊಟ ಮಾಡುತ್ತಾರೆ.
ಸರ್ಕಾರಿ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುತ್ತಾರೆ. ಗಡಾರಿ ಹಿಡಿದು ರಸ್ತೆ ಕಾಮಗಾರಿ ಗುಣಮಟ್ಟವನ್ನೂ ಅಳೆಯುತ್ತಾರೆ. ಅಕ್ರಮ ಎಸಗುವವರಿಗೆ ಯಾವ ಮುಲಾಜೂ ಇಲ್ಲದೆ ಕಾನೂನು ದಂಡ ಬೀಸುವ ಜಿಲ್ಲಾಧಿಕಾರಿ ಎಂದೇ ಅವರು ಪ್ರಸಿದ್ಧರು. ಜಿಲ್ಲಾಧಿಕಾರಿಯನ್ನು ನೋಡುವುದೇ ಕಷ್ಟ ಎಂಬ ಭಾವನೆ ಇವತ್ತಿಗೂ ಹಳ್ಳಿ ಮತ್ತು ಪಟ್ಟಣಗಳ ಜನರಲ್ಲಿ ಬೇರೂರಿದೆ. ಆದರೆ ಡಿ.ಕೆ.ರವಿ ಅವರು ಬಂದ ಬಳಿಕ ಜಿಲ್ಲಾಧಿಕಾರಿ ಕೊಠಡಿಗೆ ಸಾಮಾನ್ಯರಿಗೂ ಮುಕ್ತ ಪ್ರವೇಶಾವಕಾಶ ದೊರಕಿತ್ತು.
ಐಎಎಸ್ ಪಾಠ: ಐಎಎಸ್ ಕನಸು ಹೊತ್ತ ನೂರಾರು ಯುವಕ–ಯುವತಿಯರಿಗೆ ಪ್ರತಿ ಭಾನುವಾರ ಅವರು ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಓದಿನ ಪಾಠಗಳನ್ನೂ ಮಾಡುತ್ತಾರೆ, ಅದೂ ನಿರಂತರ ಮೂರು ಗಂಟೆ ಕಾಲ.
ಕಂದಾಯ ಅದಾಲತ್: ಶಿಸ್ತು, ಸರಳತೆ, ಪ್ರಾಮಾಣಿಕತೆ, ಕಾನೂನು ಪಾಲನೆ, ಯಾರಿಗೂ ಹೆದರದ ಆತ್ಮಸ್ಥೈರ್ಯವನ್ನಷ್ಟೇ ನೆಚ್ಚಿಕೊಂಡಿರುವ ಜಿಲ್ಲಾಧಿಕಾರಿಯ ವಿಶಾಲವಾದ ಆಡಳಿತಾತ್ಮಕವಾದ ಆಲೋಚನೆ ಎಂಥದ್ದು ಎಂಬುದು ಜಿಲ್ಲೆಗೆ, ನಂತರ ರಾಜ್ಯಕ್ಕೆ ಗೊತ್ತಾಗಿದ್ದು ಅವರು ಹಮ್ಮಿಕೊಂಡ ಕಂದಾಯ ಅದಾಲತ್ ಮತ್ತು ಪೋಡಿ ಅದಾಲತ್‌ಗಳ ಮೂಲಕ.
ಒತ್ತುವರಿ ತೆರವು: ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಹೈಕೋರ್ಟಿನ ಸೂಚನೆಯನ್ನು ಪಾಲಿಸುವುದು ಕೂಡ ಕೋಲಾರದಂಥ ಜಿಲ್ಲೆಯಲ್ಲಿ ಕಡುಕಷ್ಟ ಎಂಬ ಅಭಿಪ್ರಾಯ ದಟ್ಟವಾಗಿದ್ದ ಸಮಯದಲ್ಲೇ ಜಿಲ್ಲಾಧಿಕಾರಿ ಜಾತಿ, ಧರ್ಮ, ಬಡವರು–ಶ್ರೀಮಂತರು ಎಂಬ ಮುಲಾಜುಗಳನ್ನು ಪಕ್ಕಕ್ಕಿಟ್ಟು ತೆರವು ಕಾರ್ಯಾಚರಣೆ ಶುರು ಮಾಡಿದ್ದರು.
ಜನಪ್ರತಿನಿಧಿಗಳ ಕೈವಾಡ?: ಜನಪರವಾಗಿರುವ ಜಿಲ್ಲಾಧಿಕಾರಿ ವರ್ಗಾವಣೆ ಹಿಂದೆ ಶಾಸಕರು ಮತ್ತು ಸಂಸದರ ನೇರ ಕೈವಾಡವಿದೆ ಎಂದೇ ಜಿಲ್ಲೆಯ ಎಲ್ಲ ಸಂಘಟನೆಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅ. 20ರಂದು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ನೇರ ಆರೋಪ ಮಾಡಿದ್ದರು.
ಬಂಗಾರಪೇಟೆ ತಾಲ್ಲೂಕಿನ ಕಾನ್ಫಿಡೆಂಟ್ ಗ್ರೂಪ್, ಸರ್ಕಾರಿ ಜಮೀನು ಒತ್ತುವರಿ ಮಾಡಿದೆ. ಕೂಡಲೇ ತೆರವುಗೊಳಿಸಿ ಎಂದು ಅವರು ಆದೇಶ ನೀಡಿದ ಬಳಿಕ ಅವರ ವರ್ಗಾವಣೆ ಹುನ್ನಾರ ಶುರುವಾಯಿತು. ಆ ಗ್ರೂಪ್ನಲ್ಲಿ ನಿರ್ದೇಶಕರಾಗಿದ್ದ ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ ಅವರೇ ಜಿಲ್ಲಾಧಿಕಾರಿ ವರ್ಗಾವಣೆಗೆ ವೇದಿಕೆ ಸಜ್ಜುಗೊಳಿಸಿದರು ಎಂಬ ಆರೋಪವೂ ಕೇಳಿಬಂದಿತ್ತು.
ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿ ಕೋಲಾರ ನಗರಸಭೆ, ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳು ನಿರ್ಣಯ ಅಂಗೀಕರಿಸಿದ್ದವು. ವರ್ಗಾವಣೆ ಮಾಡಬಾರದು ಎಂಬ ತೀವ್ರ ಒತ್ತಡದ ನಡುವೆಯೇ ರವಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಡಿ.ಕೆ ರವಿ ಸೇರಿ ನಾಲ್ವರ ವರ್ಗ
ಬೆಂಗಳೂರು: ಕೋಲಾರ ಜಿಲ್ಲಾಧಿಕಾರಿ ಡಿ.ಕೆ.ರವಿ ಸೇರಿದಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ರವಿ ಅವರನ್ನು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ (ಜಾರಿ) ಹುದ್ದೆಗೆ ವರ್ಗಾಯಿಸಿದ್ದು, ಈ ಹುದ್ದೆಯಲ್ಲಿದ್ದ ಡಾ. ಕೆ.ವಿ. ತ್ರಿಲೋಕಚಂದ್ರ ಅವರನ್ನು ಕೋಲಾರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ವಿನೋದ ಪ್ರಿಯಾ ಅವರನ್ನು ಸಕಾಲ ಮಿಷನ್‌ನ ಹೆಚ್ಚುವರಿ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ (ಆಡಳಿತ) ಕೆ.ಎಸ್.ಮಂಜುನಾಥ್ ಅವರನ್ನು ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.