ADVERTISEMENT

ಡಿ.30ರಿಂದ ಜೈನ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST
ಡಿ.30ರಿಂದ ಜೈನ ಸಾಹಿತ್ಯ ಸಮ್ಮೇಳನ
ಡಿ.30ರಿಂದ ಜೈನ ಸಾಹಿತ್ಯ ಸಮ್ಮೇಳನ   

ಬೆಂಗಳೂರು: ಫೆಬ್ರುವರಿಯಲ್ಲಿ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಪೂರ್ವಭಾವಿಯಾಗಿ ಡಿ.30ರಿಂದ ಎರಡು ದಿನ  ಶ್ರವಣಬೆಳಗೊಳದಲ್ಲಿ ‘ಕನ್ನಡ ಜೈನ  ಸಾಹಿತ್ಯ ಸಮ್ಮೇಳನ’ ನಡೆಯಲಿದೆ.

ಈ ಕುರಿತು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಸಮಿತಿ ಗೌರವ ಸಲಹೆಗಾರ  ಹಂ.ಪ. ನಾಗರಾಜಯ್ಯ, ‘ಮಹಾಮಸ್ತಕಾಭಿಷೇಕಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಸಂಸ್ಕೃತ ಸಮ್ಮೇಳನ, ಮಹಿಳಾ ಸಮ್ಮೇಳನ, ಯುವ ಸಮ್ಮೇಳನ, ಪ್ರಾಕೃತ ಸಮ್ಮೇಳನ ನಡೆಸಲಾಗಿದೆ. ಕೊನೆಯದಾಗಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಡಿ.30ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸುತ್ತಾರೆ. ನಿವೃತ್ತ ನ್ಯಾಯಾಧೀಶ, ಕವಿ ಜಿನದತ್ತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

‘ಸಮಾಜಮುಖಿ ಚಿಂತನೆಗಳು’, ‘ಸ್ಥಿತ್ಯಂತರದ ಹೊಸ್ತಿಲಲ್ಲಿ ಜೈನ ಸಮಾಜ’, ‘ಬಾಹುಬಲಿ ಶಿಲ್ಪ ಮತ್ತು ಸಾಹಿತ್ಯ’, ‘ಜೈನ ಕನ್ನಡ ಸಾಹಿತ್ಯ: ಸಿಂಹಾವಲೋಕನ’ ಎಂಬ ವಿಷಯಗಳೂ ಸೇರಿ ಎಂಟು ಗೋಷ್ಠಿಗಳು, ಕವಿಗೋಷ್ಠಿ ನಡೆಯುತ್ತವೆ. ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಡಿ.31ರಂದು ಸಂಜೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಸಮ್ಮೇಳನ ಸಮಿತಿ ಅಧ್ಯಕ್ಷ ಪಿ.ವೈ. ರಾಜೇಂದ್ರಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದಂತಹ ಚಂದ್ರಶೇಖರ ಕಂಬಾರ, ಎಸ್.ಎಲ್. ಭೈರಪ್ಪ, ವೆಂಕಟಾಚಲ ಶಾಸ್ತ್ರಿ, ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ಎಸ್.ಪಿ. ಪಾಟೀಲ, ಕೆ.ಎಸ್. ನಿಸ್ಸಾರ್‌ ಅಹಮದ್, ನಾ. ಡಿಸೋಜ, ಶಾಂತಿನಾಥ ದಿಬ್ಬದ, ಎಂ.ಎ. ಜಯಚಂದ್ರ, ಸರಸ್ವತಿ ವಿಜಯಕುಮಾರ್ ಹಾಗೂ ಎಸ್.ಎಸ್. ಉಕ್ಕಲಿ ಅವರನ್ನು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ ಎಂದು ವಿವರಿಸಿದರು.

ಸಮ್ಮೇಳನಕ್ಕೆ ಸಕಲ ಸಿದ್ಧತೆ:

‘ಫೆ.17ರಿಂದ 25ರವರೆಗೆ ನಡೆಯುವ ಮಸ್ತಕಾಭಿಷೇಕಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಅಭಿಷೇಕ ಮಾಡುವದಕ್ಕಾಗಿ ಜರ್ಮನ್ ತಂತ್ರಜ್ಞಾನ ಬಳಸಿಕೊಂಡು ಬೃಹತ್ ಅಟ್ಟಣಿಗೆ ನಿರ್ಮಿಸಲಾಗುತ್ತಿದ್ದು, ಜ.15ಕ್ಕೆ ಪೂರ್ಣಗೊಳ್ಳುತ್ತದೆ. ದೇಶದ ವಿವಿಧ ಭಾಗಗಳಿಂದ ಕಾಲ್ನಡಿಗೆಯಲ್ಲಿ ಬರುತ್ತಿರುವ ದಿಗಂಬರರೂ ಸೇರಿದಂತೆ ಒಟ್ಟು 20,000 ಅತಿಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ತಾತ್ಕಾಲಿಕ ನಗರಗಳನ್ನು ನಿರ್ಮಿಸಲಾಗುತ್ತಿದೆ. ಒಂಭತ್ತು ದಿನ ನಡೆಯುವ ಮಸ್ತಕಾಭಿಷೇಕದಲ್ಲಿ 35 ಲಕ್ಷದಿಂದ 40 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಜಿತೇಂದ್ರಕುಮಾರ್ ಮಾಹಿತಿ ನೀಡಿದರು.

ಸಾಹಿತ್ಯದಲ್ಲಿ ತೊಡಗಿಸಿಕೊಂಡ ಜಿನದತ್ತ ದೇಸಾಯಿ

ಬೆಳಗಾವಿಯಲ್ಲಿ ನೆಲೆಸಿರುವ  ಜಿನದತ್ತ ದೇಸಾಯಿ ಜಿಲ್ಲಾ ನ್ಯಾಯಾಧೀಶರಾಗಿ 1991ರಲ್ಲಿ ನಿವೃತ್ತರಾದ ಬಳಿಕ ತಮ್ಮನ್ನು ಸಂಪೂರ್ಣವಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನೀಲಾಂಜನ, ಮಧುಶಾಲಿನಿ, ಮತ್ತೆ ಬಂದಿದ್ದೇನೆ, ಮಾಗಿ, ಒಳಗಿನ ಮಳೆ ಸೇರಿದಂತೆ 17 ಕವನ ಸಂಕಲನ ಹೊರತಂದಿದ್ದಾರೆ. ಏಳು ಕೃತಿಗಳನ್ನು ಸಂಪಾದಿಸಿದ್ದಾರೆ. ಜಿನದತ್ತ ದೇಸಾಯಿ ಬದುಕು ಮತ್ತು ಬರಹ ಕುರಿತು ಏಳು ಕೃತಿಗಳು ಬಂದಿವೆ. ದೇಸಾಯಿ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಇದೇ ವರ್ಷ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.