ADVERTISEMENT

ತಡವಾಗಿಯಾದರೂ ಪ್ರಶಸ್ತಿ ನೀಡಿದರಲ್ಲ

ಸಮಾರಂಭದಲ್ಲಿ ವಿಮರ್ಶಕ ಜಿ.ಎಚ್‌.ನಾಯಕ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2017, 19:30 IST
Last Updated 25 ಜೂನ್ 2017, 19:30 IST
ಅ.ರಾ.ಮಿತ್ರ, ಜಿ.ಎಚ್‌. ನಾಯಕ, ಗಿರಡ್ಡಿ ಗೋವಿಂದರಾಜ, ನೀಳಾದೇವಿ ಅವರಿಗೆ ‘ಮಾಸ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಂಶೋಧಕ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಮಾಸ್ತಿ ಟ್ರಸ್ಟ್‌ ಕಾರ್ಯದರ್ಶಿ ಸಿದ್ರಾಮ ಸಿಂಧೆ, ಎನ್‌.ಸಂತೋಷ್‌ ಹೆಗ್ಡೆ, ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಎ.ಎಚ್‌.ರಾಮರಾವ್‌, ಮಾಸ್ತಿ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ಇದ್ದಾರೆ. –ಪ್ರಜಾವಾಣಿ ಚಿತ್ರ
ಅ.ರಾ.ಮಿತ್ರ, ಜಿ.ಎಚ್‌. ನಾಯಕ, ಗಿರಡ್ಡಿ ಗೋವಿಂದರಾಜ, ನೀಳಾದೇವಿ ಅವರಿಗೆ ‘ಮಾಸ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಂಶೋಧಕ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಮಾಸ್ತಿ ಟ್ರಸ್ಟ್‌ ಕಾರ್ಯದರ್ಶಿ ಸಿದ್ರಾಮ ಸಿಂಧೆ, ಎನ್‌.ಸಂತೋಷ್‌ ಹೆಗ್ಡೆ, ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಎ.ಎಚ್‌.ರಾಮರಾವ್‌, ಮಾಸ್ತಿ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾಸ್ತಿ ಪ್ರಶಸ್ತಿಗೆ ಭಾಜನರಾದವರ ಪೈಕಿ ನಾನು 41ನೇ ವ್ಯಕ್ತಿ. ಈ ಪ್ರಶಸ್ತಿಗೆ ನಾನು ಅರ್ಹನೆಂದು ಗುರುತಿಸಲು ಇಷ್ಟು ವಿಳಂಬವಾದದ್ದೇಕೆ ಎಂದು ಅರ್ಥವಾಗುತ್ತಿಲ್ಲ. 25 ವರ್ಷಗಳವರೆಗೆ ಅದನ್ನು ತಡೆದವರು ಪ್ರಶಸ್ತಿಯನ್ನು ನೀಡದೆಯೂ ಇರಬಹುದಿತ್ತು. ಆದರೆ, ಈಗಲಾದರೂ ನೀಡಿದ್ದಾರಲ್ಲ.’ –ವಿಮರ್ಶಕ ಜಿ.ಎಚ್‌.ನಾಯಕ ಅವರ ಪ್ರತಿಕ್ರಿಯೆ ಇದು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಪ್ರೊ.ಅ.ರಾ.ಮಿತ್ರ, ಪ್ರೊ. ಗಿರಡ್ಡಿ ಗೋವಿಂದರಾಜ, ನೀಳಾದೇವಿ ಅವರೊಂದಿಗೆ ‘ಮಾಸ್ತಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಪುರಸ್ಕೃತರಿಗೆ ತಲಾ ₹25,000 ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

‘ಮಾಸ್ತಿ ಅವರ ಕಥೆಗಳ ಹಾಗೂ ಕಾಕನಕೋಟೆ ನಾಟಕ ಕುರಿತು ಎರಡು ವಿಮರ್ಶಾ ಲೇಖನಗಳನ್ನು  ಪ್ರಕಟಿಸಿದ್ದೇನೆ. ಹೆಚ್ಚು ಪ್ರಶಂಸಾತ್ಮಕವಲ್ಲದ, ಸಾಕಷ್ಟು ವಿಮರ್ಶಾತ್ಮಕವಾದ ಗಂಭೀರ ಮೌಲ್ಯಮಾಪನ ಪ್ರಯತ್ನದ ಬರಹಗಳಿವು. ಬಹುಶಃ ಈ ಕಾರಣದಿಂದಾಗಿ ಇಷ್ಟು ವರ್ಷಗಳವರೆಗೆ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದಕ್ಕೆ ಸಮಿತಿಗಳ ಸದಸ್ಯರು ಮನಸ್ಸು ಮಾಡಿರಲಿಲ್ಲವೋ ಏನೋ?’ ಎಂದು ನಾಯಕ ನುಡಿದರು.

ADVERTISEMENT

‘ಸಾಹಿತ್ಯದ ನಿಷ್ಠುರ ವಿಮರ್ಶೆಯನ್ನೂ ಸಹಿಸುವ, ಗೌರವಿಸುವ ದೊಡ್ಡತನ ಇದು ಎಂದು ಭಾವಿಸುತ್ತೇನೆ. ಯಾವುದೇ ಸಾಹಿತ್ಯ ವಿಮರ್ಶೆಯನ್ನು ಒಪ್ಪಲಿ, ಬಿಡಲಿ, ಗಂಭೀರವಾಗಿದ್ದರೆ ಅದನ್ನು ಸಹಿಸುವ ಸಂಸ್ಕೃತಿ ಕನ್ನಡದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇದು ನಿದರ್ಶನ. ಪ್ರಶಸ್ತಿಗೆ ನನ್ನನ್ನು ಪರಿಗಣಿಸಿರುವ ಈ ದೊಡ್ಡತನ ಸಾಹಿತ್ಯ ಸಂಸ್ಕೃತಿಯ ಆರೋಗ್ಯ ಕಾಪಾಡಿದ ಹಿರಿತನವೆಂದು ಭಾವಿಸುತ್ತೇನೆ’ ಎಂದು ಹೇಳಿದರು.

ವಿಮರ್ಶಕ ಗಿರಡ್ಡಿ ಗೋವಿಂದರಾಜ ಮಾತನಾಡಿ, ‘ವಿಮರ್ಶೆ ಎಂದರೆ ಗಂಭೀರವಾದದ್ದು. ಅದರಲ್ಲಿ ಹಾಸ್ಯ, ಟೀಕೆ ಇರಬಾರದು ಎನ್ನುವಂತಾಗಿದೆ. ಸರಳ ರೀತಿಯಲ್ಲಿ ವಿಮರ್ಶೆಯನ್ನು ಬರೆಯಬೇಕು. ಈ ವಿಷಯದಲ್ಲಿ ಮಾಸ್ತಿ ನಮಗೆ ಆದರ್ಶವಾಗಿ ಕಾಣುತ್ತಾರೆ. ಅವರು ಸರಳವಾಗಿ ವಿಮರ್ಶೆ ಬರೆದವರು’ ಎಂದರು.

ಮಾಸ್ತಿ ಕಥಾ ಪುರಸ್ಕಾರ ಪಡೆದ ಕರ್ಕಿ ಕೃಷ್ಣಮೂರ್ತಿ (ಕಥಾ ಸಂಕಲನ– ಗಾಳಿಗೆ ಮೆತ್ತಿದ ಬಣ್ಣ)  ಅವರಿಗೆ ಮತ್ತು ಮಾಸ್ತಿ ಕಾದಂಬರಿ ಪುರಸ್ಕಾರ ಪಡೆದ ಡಾ.ಬಾಳಾಸಾಹೇಬ ಲೋಕಾಪುರ (ಕಾದಂಬರಿ– ಕೃಷ್ಣೆ ಹರಿದಳು) ಅವರಿಗೆ ತಲಾ ₹25,000 ಹಾಗೂ ಈ ಕೃತಿಗಳನ್ನು ಪ್ರಕಟಿಸಿದ ಛಂದ ಪುಸ್ತಕ ಪ್ರಕಾಶನ ಹಾಗೂ ಕಣ್ವ ಪ್ರಕಾಶನಗಳಿಗೆ ತಲಾ ₹10,000 ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

*
ಭ್ರಷ್ಟರನ್ನು ಬಹಿಷ್ಕರಿಸಬೇಕು.  ಸಂತೃಪ್ತಿ ಹೊಂದುವ, ಮಾನವೀಯತೆ ಬೆಳೆಸಿಕೊಳ್ಳುವ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು.
-ಎನ್‌.ಸಂತೋಷ್‌ ಹೆಗ್ಡೆ,
ನಿವೃತ್ತ ಲೋಕಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.